ವಿವೇಕ ಚೂಡಾಮಣಿ - 566-580
ಕ್ಷೀರಂ ಕ್ಷೀರೇ ಯಥಾ ಕ್ಷಿಪ್ತಂ ತೈಲಂ ತೈಲೇ ಜಲಂ ಜಲೇ .
ಸಂಯುಕ್ತಮೇಕತಾಂ ಯಾತಿ ತಥಾಽಽತ್ಮನ್ಯಾತ್ಮವಿನ್ಮುನಿಃ .. 566..
ಹಾಲಿನಲ್ಲಿ ಸುರಿದ ಹಾಲು, ಎಣ್ಣೆಯಲ್ಲಿ ಸುರಿದ ಎಣ್ಣೆ, ನೀರಿನಲ್ಲಿ ಸೇರಿಸಿದ ನೀರು ಇವು ಹೇಗೆ ಒಂದಾಗುತ್ತವೆಯೊ, ಹಾಗೆಯೇ ಆತ್ಮಜ್ಞಾನಿಯಾದ ಮುನಿಯು ಬ್ರಹ್ಮನಲ್ಲಿ ಐಕ್ಯನಾಗುತ್ತಾ ನೆ.
ಏವಂ ವಿದೇಹಕೈವಲ್ಯಂ ಸನ್ಮಾತ್ರತ್ವಮಖಂಡಿತಂ .
ಬ್ರಹ್ಮಭಾವಂ ಪ್ರಪದ್ಯೈಷ ಯತಿರ್ನಾವರ್ತತೇ ಪುನಃ .. 567..
ಹೀಗೆ ವಿದೇಹಮುಕ್ತಿಯನ್ನು (ಹೊಂದಿ), ಅಖಂಡ, ಸತ್ಸ್ರೂಪತ್ವವೆಂಬ ಬ್ರಹ್ಮಭಾವವನ್ನು ಪಡೆದು, ಈ ಯತಿಯು ಪುನಃ (ಸಂಸಾರಕ್ಕೆ) ಹಿಂತಿರುಗುವುದಿಲ್ಲ.
ಸದಾತ್ಮೈಕತ್ವವಿಜ್ಞಾನದಗ್ಧಾವಿದ್ಯಾದಿವರ್ಷ್ಮಣಃ .
ಅಮುಷ್ಯ ಬ್ರಹ್ಮಭೂತತ್ವಾದ್ ಬ್ರಹ್ಮಣಃ ಕುತ ಉದ್ಭವಃ .. 568..
ಸತ್ಸ್ವರೂಪವಾದ ಪರಮಾತ್ಮನು ಜ್ಞಾನದಿಂದ, ಅವಿದ್ಯೆಯ ಶರೀರಗಳನ್ನು ಸುಟ್ಟುಕೊಂಡು, ನಾನೂ ಒಂದೇ ಎಂಬ ಜ್ಞಾನದಿಂದ ಇವನು ಬ್ರಹ್ಮವೇ ಆಗುತ್ತಾನೆ. ಬ್ರಹ್ಮನಿಗೆ ಪುನರ್ಜನ್ಮವು ಎಲ್ಲಿಯದು?
ನಿಷ್ಕ್ರಿಯವಾದ ಹಗ್ಗ ದಲ್ಲಿ ಹಾವು ಕಾಣುವದು ಮತ್ತು ಮರೆಯಾಗುವದು, ಇವು ಹೇಗೆ (ಅಸತ್ಯವೊ ಹಾಗೆಯೇ) ಬಂಧಮೋಕ್ಷಗಳು
ಮಾಯಾಕಲ್ಪಿತವಾಗಿರುವುದರಿಂದ, ಆತ್ಮನಲ್ಲಿ ನಿಜವಾಗಿ ಇರುವುದಿಲ್ಲ.
ಆವೃತೇಃ ಸದಸತ್ತ್ವಾಭ್ಯಾಂ ವಕ್ತವ್ಯೇ ಬಂಧಮೋಕ್ಷಣೇ .
ನಾವೃತಿರ್ಬ್ರಹ್ಮಣಃ ಕಾಚಿದನ್ಯಾಭಾವಾದನಾವೃತಂ .
ಯದ್ಯಸ್ತ್ಯದ್ವೈತಹಾನಿಃ ಸ್ಯಾದ್ ದ್ವೈತಂ ನೋ ಸಹತೇ ಶ್ರುತಿಃ .. 570..
ಅಜ್ಞಾನದ ಆವರಣಶಕ್ತಿಯ ಇರುವಿಕೆಗೆ ಬಂಧನ, ಮತ್ತು ಇಲ್ಲದಿರುವಿಕೆಗೆ ಮೋಕ್ಷ ಎನ್ನುತ್ತಾರೆ. ಆದರೆ ಬ್ರಹ್ಮನಿಗೆ ಯಾವುದೇ ಆವರಣವೆ ಇರುವದಿಲ್ಲ. ಯಾಕೆಂದರೆ ಅವನ ಹೊರತು ಇನ್ನೇನೂ ಇಲ್ಲವಲ್ಲ. ಬ್ರಹ್ಮನಿಗೆ ಆವರಣವಿದೆಯೆಂದುಕೊಂಡರೆ ಅದ್ವೈತಕ್ಕೆ ಹಾನಿಯಾಗುತ್ತದೆ. ದ್ವೈತವನ್ನಾದರೋ ಶ್ರುತಿಗಳು ಮಾನ್ಯ ಮಾಡುವದೇ ಇಲ್ಲ.
ಬಂಧಂಚ ಮೋಕ್ಷಂಚ ಮೃಷೈವ ಮೂಢಾ
ಬುದ್ಧೇರ್ಗುಣಂ ವಸ್ತುನಿ ಕಲ್ಪಯಂತಿ .
ದೃಗಾವೃತಿಂ ಮೇಘಕೃತಾಂ ಯಥಾ ರವೌ
ಯತೋಽದ್ವಯಾಽಸಂಗಚಿದೇತದಕ್ಷರಂ .. 571..
ಮೂಢರು ಬಂಧನ, ಮೋಕ್ಷ ಇವನ್ನು ಬುದ್ದಿಯ ಮೌಡ್ಯದಿಂದ ನಿಜವೆಂದು ಕಲ್ಪನೆ ಮಾಡುತ್ತಾರೆ. ಮೋಡ ಮುಸುಕಿದ ಸೂರ್ಯನನ್ನು ನೋಡಿ, ಸೂರ್ಯನೇ ಮಾಯವಾದ ಎಂದು ಯೋಚಿಸಿದಂತೆ. ಆದರೆ ಬ್ರಹ್ಮನು ಅದ್ವಯ ಅಸಂಗ ಅಕ್ಷರನು .
ಅಸ್ತೀತಿ ಪ್ರತ್ಯಯೋ ಯಶ್ಚ ಯಶ್ಚ ನಾಸ್ತೀತಿ ವಸ್ತುನಿ .
ಬುದ್ಧೇರೇವ ಗುಣಾವೇತೌ ನ ತು ನಿತ್ಯಸ್ಯ ವಸ್ತುನಃ .. 572..
ನಿತ್ಯ ವಸ್ತುವಿನ (ಬ್ರಹ್ಮ) ವಿಷಯದಲ್ಲಿ ಇದೆ ಅಥವಾ ಇಲ್ಲ ಎಂಬುದು ಬುದ್ದಿಯ ಗುಣವೇ ಹೊರತು ನಿತ್ಯವಸ್ತುವಿನ ಗುಣವಲ್ಲ.
ಅತಸ್ತೌ ಮಾಯಯಾ ಕ್ಲೃಪ್ತೌ ಬಂಧಮೋಕ್ಷೌ ನ ಚಾತ್ಮನಿ .
ನಿಷ್ಕಲೇ ನಿಷ್ಕ್ರಿಯೇ ಶಾಂತೇ ನಿರವದ್ಯೇ ನಿರಂಜನೇ .
ಅದ್ವಿತೀಯೇ ಪರೇ ತತ್ತ್ವೇ ವ್ಯೋಮವತ್ಕಲ್ಪನಾ ಕುತಃ .. 573..
ಆದುದರಿಂದ ಬಂಧ, ಮೋಕ್ಷಗಳು ಮಾಯೆಯಿಂದ ಕಲ್ಪಿತವಾಗಿವೆ ಹೊರತು ಆತನಲ್ಲಿಲ್ಲ. ಆಕಾಶದಂತಿರುವ , ನಿಷ್ಕಲವೂ, ನಿಷ್ಕ್ರಿಯವೂ,
ಶಾಂತವೂ, ನಿರಂಜನವೂ, ಅದ್ವಿತೀಯವೂ ಆದ ಪರತತ್ತ್ವದಲ್ಲಿ ಯಾವದೇ ಮಿತಿಯ ಕಲ್ಪನೆಯು ಎಲ್ಲಿ ಬರುತ್ತದೆ ?
ನ ನಿರೋಧೋ ನ ಚೋತ್ಪತ್ತಿರ್ನ ಬದ್ಧೋ ನ ಚ ಸಾಧಕಃ .
ನ ಮುಮುಕ್ಷುರ್ನ ವೈ ಮುಕ್ತ ಇತ್ಯೇಷಾ ಪರಮಾರ್ಥತಾ .. 574..
ಪ್ರಳಯವೂ ಇಲ್ಲ. ಉತ್ಪತ್ತಿಯೂ ಇಲ್ಲ. ಬದ್ಧವೂ ಇಲ್ಲ ಸಾಧಕನೂ ಇಲ್ಲ. ಮುಮುಕ್ಷುವೂ ಇಲ್ಲ, ಮುಕ್ತನೂ ಇಲ್ಲ. ಹೀಗಿರುತ್ತದೆ ಪರಮಾರ್ಥ.
ಸಕಲನಿಗಮಚೂಡಾಸ್ವಾಂತಸಿದ್ಧಾಂತರೂಪಂ
ಪರಮಿದಮತಿಗುಹ್ಯಂ ದರ್ಶಿತಂ ತೇ ಮಯಾದ್ಯ .
ಅಪಗತಕಲಿದೋಷಂ ಕಾಮನಿರ್ಮುಕ್ತಬುದ್ಧಿಂ
ಸ್ವಸುತವದಸಕೃತ್ತ್ವಾಂ ಭಾವಯಿತ್ವಾ ಮುಮುಕ್ಷುಂ .. 575..
ಕಲಿದೋಷಗಳಿಲ್ಲದ, ಕಾಮವಿಲ್ಲದ ಬುದ್ದಿಯುಳ್ಳ, ಮುಮುಕ್ಷುವಾದ ನಿನ್ನನ್ನು ನನ್ನ ಮಗನೆಂದು ಭಾವಿಸಿಕೊಂಡು ಶ್ರುತಿಶಿರಸ್ಸಾದ ವೇದಾಂತದಲ್ಲಿರುವ ಸಿದ್ಧಾಂತರೂಪವೂ ಶ್ರೇಷ್ಠವಾದ ಈ ರಹಸ್ಯ ವನ್ನು ನಿನಗೆ ಇಂದು ಪುನಃ ಪುನಃ ಉಪದೇಶಿಸಿರುತ್ತೇನೆ.
ಇತಿ ಶ್ರುತ್ವಾ ಗುರೋರ್ವಾಕ್ಯಂ ಪ್ರಶ್ರಯೇಣ ಕೃತಾನತಿಃ .
ಸ ತೇನ ಸಮನುಜ್ಞಾತೋ ಯಯೌ ನಿರ್ಮುಕ್ತಬಂಧನಃ .. 576..
ಹೀಗೆ ಗುರುವಿನ ವಾಕ್ಯವನ್ನು ಕೇಳಿ ಬಂಧದಿಂದ ಮುಕ್ತನಾದ ಆ ಶಿಷ್ಯನು ನಮ್ರಭಾವದಿಂದ ನಮಸ್ಕರಿಸಿ, ಗುರುವಿಂದ ಅನುಜ್ಞೆಯನ್ನು ಪಡೆದು ಹೊರಟುಹೋದನು.
ಗುರುರೇವ ಸದಾನಂದಸಿಂಧೌ ನಿರ್ಮಗ್ನಮಾನಸಃ .
ಪಾವಯನ್ವಸುಧಾಂ ಸರ್ವಾಂ ವಿಚಚಾರ ನಿರಂತರಃ .. 577..
ಹೀಗೆ ಗುರುವು ಸದಾನಂದಸಾಗರದಲ್ಲಿ ಮುಳುಗಿದ ಮನಸ್ಸುಳ್ಳವನಾಗಿ ಸಮಸ್ತ ಭೂಮಿಯನ್ನೂ ಪವಿತ್ರಗೊಳಿಸುತ್ತ ನಿರಂತರವೂ ಸಂಚರಿಸುತ್ತಿದ್ದನು.
ಇತ್ಯಾಚಾರ್ಯಸ್ಯ ಶಿಷ್ಯಸ್ಯ ಸಂವಾದೇನಾತ್ಮಲಕ್ಷಣಂ .
ನಿರೂಪಿತಂ ಮುಮುಕ್ಷೂಣಾಂ ಸುಖಬೋಧೋಪಪತ್ತಯೇ .. 578..
ಹೀಗೆ ಆಚಾರ್ಯನ ಮತ್ತು ಶಿಷ್ಯನ ಸಂವಾದದಿಂದ ಮುಮುಕ್ಷುಗಳಿಗೆ ಸುಗಮವಾಗಿ ಜ್ಞಾನವನ್ನು ಹೊಂದಲು ಆತ್ಮಸ್ವರೂಪವು ನಿರೂಪಿಸಲ್ಪಟ್ಟಿತು.
ಹಿತಮಿದಮುಪದೇಶಮಾದ್ರಿಯಂತಾಂ
ವಿಹಿತನಿರಸ್ತಸಮಸ್ತಚಿತ್ತದೋಷಾಃ .
ಭವಸುಖವಿರತಾಃ ಪ್ರಶಾಂತಚಿತ್ತಾಃ
ಶ್ರುತಿರಸಿಕಾ ಯತಯೋ ಮುಮುಕ್ಷವೋ ಯೇ .. 579..
ಸಾಧನದ ಅನುಷ್ಠಾನದಿಂದ ಚಿತ್ತದ ಸಮಸ್ತ ದೋಷಗಳನ್ನೂ ಕಳೆದುಕೊಂಡ, ಸಂಸಾರಸುಖದಲ್ಲಿ ಶ್ರುತಿಯಲ್ಲಿ ರಸಿಕರಾದ, ವಿರಕ್ತರಾದ, ಪ್ರಶಾಂತಚಿತ್ತರಾದ, ಮುಮುಕ್ಷುಗಳಾದ ಪ್ರಯತ್ನಶೀಲರು ಹಿತವಾದ ಉಪದೇಶವನ್ನು ಆದರಿಸಲಿ.
ಸಂಸಾರಾಧ್ವನಿ ತಾಪಭಾನುಕಿರಣಪ್ರೋದ್ಭೂತದಾಹವ್ಯಥಾ-
ಖಿನ್ನಾನಾಂ ಜಲಕಾಂಕ್ಷಯಾ ಮರುಭುವಿ ಭ್ರಾಂತ್ಯಾ ಪರಿಭ್ರಾಮ್ಯತಾಂ .
ಅತ್ಯಾಸನ್ನಸುಧಾಂಬುಧಿಂ ಸುಖಕರಂ ಬ್ರಹ್ಮಾದ್ವಯಂ ದರ್ಶಯ-
ತ್ಯೇಷಾ ಶಂಕರಭಾರತೀ ವಿಜಯತೇ ನಿರ್ವಾಣಸಂದಾಯಿನೀ .. 580..
ಸಂಸಾರಮಾರ್ಗದಲ್ಲಿ ತಾಪತ್ರಯವೆಂಬ ಸೂರ್ಯಕಿರಣದಿಂದ ಉಂಟಾದ ಬಾಯಾರಿಕೆಯಿಂದ ಬಳಲುತ್ತಿರುವ, ಮರುಭೂಮಿಯಲ್ಲಿ ನೀರಿಗಾಗಿ ಭ್ರಾಂತಿಯಿಂದ ಅಲೆಯುತ್ತಿರುವ (ಚೇತನರಿಗೆ) ಅತ್ಯಂತ ಸಮೂಪದಲ್ಲಿರುವ ಅಮೃತಸಮುದ್ರದಂತಿರುವ ಸುಖಕರವಾದ ಅದ್ವಿತೀಯಬ್ರಹ್ಮವನ್ನು ತೋರಿಸಿಕೊಡುತ್ತಿರುವ, ಮೋಕ್ಷದಾಯಕವಾದ ಈ ಶಂಕರವಾಣಿಯು ಸರ್ವೋತ್ಕ್ರಷ್ಟವಾಗಿರುತ್ತದೆ.
.. ಇತಿ ಶಂಕರಾಚಾರ್ಯವಿರಚಿತಂ ವಿವೇಕಚೂಡಾಮಣಿಃ ..
ಹಿನ್ನುಡಿ :
ನಾನು ಮೂರು ನಾಲ್ಕು ಮೂಲಗಳಿಂದ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಅನುವಾದಗಳ ಆಧಾರವನ್ನು ತೆಗೆದುಕೊಂಡು, ಈ ಸಂಕೀರ್ಣ ಕೃತಿಯ ಕನ್ನಡ ಅನುವಾದವನ್ನು ಬರೆಯಲು ಪ್ರಯತ್ನಿಸಿದ್ದೇನೆ. ತಪ್ಪುಗಳಿದ್ದರೆ ಕ್ಷಮೆ ಇರಲಿ. ಸಾಧ್ಯವಾದಲ್ಲಿ ಕಾಮೆಂಟ್ ಕಳುಹಿಸಿ.
Comments