ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - ಆದಿ ಶಂಕರಾಚಾರ್ಯರು ರಚಿಸಿದ  ಈ ಗ್ರಂಥವನ್ನು ಅದ್ವೈತ ಸಿದ್ಧಾಂತದ ಪ್ರಾರಂಭಿಕ ಗ್ರಂಥವೆಂದು ಹೇಳಬಹುದು. 
 
ಪದ್ಯ ರೂಪದಲ್ಲಿರುವ ಈ ಕೃತಿಯು ಶಾರ್ದೂಲ ವಿಕ್ರೀಡಿತ ಛಂದದಲ್ಲಿ ರಚಿತವಾಗಿದೆ. ಈ ಗ್ರಂಥದ ಒಟ್ಟು ಶ್ಲೋಕಗಳ ಸಂಖ್ಯೆ  ೫೮೦. 
 
ವಿವೇಕ ಎಂದರೆ ವಿವೇಚನೆ, ಚೂಡ ಎಂದರೆ ಶಿಖರ, ಮತ್ತು ಮಣಿ ಎಂದರೆ ರತ್ನ. ಆದ್ದರಿಂದ ಈ ಕೃತಿಯ ಶೀರ್ಷಿಕೆಯ ಅರ್ಥ 'ವಿವೇಕದ ಶಿಖರ-ರತ್ನ'. ಕಿರೀಟದ ಮೇಲಿರುವ ರತ್ನವು ಅತ್ಯಂತ ಎದ್ದುಕಾಣುವ ಆಭರಣವಾಗಿರುವಂತೆ, ಪ್ರಸ್ತುತ ಗ್ರಂಥವು ಅದ್ವೈತ ವೇದಾಂತದ ಕೃತಿಗಳಲ್ಲಿ ಮೇರುಕೃತಿಯಾಗಿದೆ.

ವಿವೇಕ ಚೂಡಾಮಣಿಯು ವಿವೇಕ ಮತ್ತು ವಿವೇಚನೆಯ  ಬಗ್ಗೆ ಚರ್ಚಿಸುತ್ತದೆ. ವಾಸ್ತವ ಮತ್ತು ಮಾಯೆ ಇವುಗಳ ಅಂತರವನ್ನು ಅರಿಯಲು ಬೇಕಾದ ಜ್ಞಾನವನ್ನು ತಿಳಿಸಿಕೊಡುತ್ತದೆ.  ಪ್ರಕೃತಿ ಮತ್ತು ಆತ್ಮ ಹಾಗೂ ಆತ್ಮ ಮತ್ತು ಪರಮಾತ್ಮ ಇವುಗಳ ನಡುವಿನ ಸಂಬಂಧಗಳನ್ನು ವಿವರಿಸುತ್ತದೆ.  ಮುಕ್ತಿಯ ಸಾಧನೆಗೆ ಬೇಕಾದದ್ದು 
ಆತ್ಮ ಜ್ಞಾನವೇ ಎಂಬುದು ಈ ಗ್ರಂಥದ ಮೂಲಸಿದ್ಧಾಂತ.

 ಬಹುಶಃ ಇದರ ರಚನೆ ಸುಮಾರು ಕ್ರಿಸ್ತಶಕ ಎಂಟನೆಯ ಶತಮಾನದಲ್ಲಿ ಆಗಿರಬಹುದು.  

(ನಾನು ಶ್ಲೋಕಗಳನ್ನು ಅಂತರ್ಜಾಲದಿಂದ ಎರವಲು ಪಡೆದಿದ್ದೇನೆ. ಕನ್ನಡ ಅನುವಾದದ ಪ್ರಯಾಸ ನನ್ನದು. ಅನುವಾದದಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.)


ವಿವೇಕ ಚೂಡಾಮಣಿ

ಸರ್ವವೇದಾಂತಸಿದ್ಧಾಂತಗೋಚರಂ ತಮಗೋಚರಂ.
ಗೋವಿಂದಂ ಪರಮಾನಂದಂ ಸದ್ಗುರುಂ ಪ್ರಣತೋಽಸ್ಮ್ಯಹಂ|1|
 

ಅಗೋಚರನಾದ, ಆದರೆ ವೇದಾಂತ ಸಿದ್ದಾಂತಗಳ ಸಹಾಯದಿಂದ ಅರಿಯಬಹುದಾದ ಸದ್ಗುರುವಾದ , ಪರಮಾನಂದ ರೂಪನಾದ ಗೋವಿಂದನಿಗೆ ನಾನು ನಮಿಸುತ್ತೇನೆ.   

  • ಈ ಮೊದಲ ಶ್ಲೋಕದಲ್ಲಿ ಶಂಕರಾಚಾರ್ಯರು ತಮ್ಮ ಗುರುವಿಗೆ ಅಥವಾ ದೇವರಿಗೆ ವಂದಿಸುತ್ತಿದ್ದಾರೆ. ಗೋವಿಂದ ಎಂದರೆ ವಿಷ್ಣುವೂ ಆಗಬಹುದು ಅಥವಾ ಶಂಕರಾಚಾರ್ಯರ ಗುರುವಾದ ಗೋವಿಂದಪಾದರೂ ಆಗಬಹುದು. 
  • ಹಾಗೆಯೇ ಸದ್ಗುರು ಎಂಬ ಉಪಾಧಿಯೂ ಸಹ ಗುರುವನ್ನು ಅಥವಾ ದೇವರನ್ನು ಉದ್ದೇಶಿಸಿರಬಹುದು.

ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
     ತಸ್ಮಾದ್ವೈದಿಕಧರ್ಮಮಾರ್ಗಪರತಾ ವಿದ್ವತ್ತ್ವಮಸ್ಮಾತ್ಪರಂ . 
ಆತ್ಮಾನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ ಮುಕ್ತಿರ್ನೋ 
     ಶತಜನ್ಮಕೋಟಿಸುಕೃತೈಃ ಪುಣ್ಯೈರ್ವಿನಾ ಲಭ್ಯತೇ |2|
 

ಜೀವಜಾತಿಗಳಿಗೆ ನರಜನ್ಮ ಸಿಗುವುದು ಕಷ್ಟಸಾಧ್ಯ. ಅದರಲ್ಲೂ ಪುರುಷಜನ್ಮ ಕಷ್ಟ. ಬ್ರಾಹ್ಮಣ ಜನ್ಮ ಇನ್ನೂ ಕಷ್ಟ. ಅದಕ್ಕಿಂತಲೂ ಕಷ್ಟದ್ದು ಧರ್ಮಮಾರ್ಗಪರತೆ ಮತ್ತು ವಿದ್ವತ್ತು ಸಿಗುವದು. ಆತ್ಮ ಮತ್ತು ಪರಮಾತ್ಮದ ನಡುವಿನ ವಿವೇಚನೆ, ಸ್ವಾನುಭವ, ಬ್ರಹ್ಮಾತ್ಮನಲ್ಲಿ ಲೀನನಾಗುವಿಕೆ ಈ ರೀತಿಯ ಮುಕ್ತಿ ಸಿಗುವದು ಕೋಟಿ ಕೋಟಿ ಜನ್ಮಗಳ ಪುಣ್ಯದಿಂದ ಮಾತ್ರ ಸಿಗುವದು.

ದುರ್ಲಭಂ ತ್ರಯಮೇವೈತದ್ದೇವಾನುಗ್ರಹ  ಹೇತುಕಂ . 
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ |3|
 

ಜಗತ್ತಿನಲ್ಲಿ ಈ ಮೂರು ವಿಷಯಗಳು ಸಿಗುವದು ದುರ್ಲಭ ಮತ್ತು  ಇವು ದೈವೀಕೃಪೆಯಿಂದ ಮಾತ್ರ ಒಟ್ಟಿಗೆ ದೊರಕುತ್ತವೆ - ಅವು ಯಾವವೆಂದರೆ  ನರ ಜನ್ಮ, ಮೋಕ್ಷ ಪಡೆಯಬೇಕೆಂಬ ಅಸೆ  (ಮುಮುಕ್ಷತ್ವ) ಮತ್ತು ಮಹಾ ಗುರುವಿನ ಆಶ್ರಯ.

ಲಬ್ಧ್ವಾ ಕಥಂಚಿನ್ನರಜನ್ಮ ದುರ್ಲಭಂ
ತತ್ರಾಪಿ ಪುಂಸ್ತ್ವಂ ಶ್ರುತಿ ಪಾರದರ್ಶನಂ .
ಯಸ್ತ್ವಾತ್ಮಮುಕ್ತೌ ನ ಯತೇತ ಮೂಢಧೀಃ
ಸ ಹ್ಯಾತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ |4|

ಮಾನವ ಜನ್ಮ ದೊರೆತು, ಪುರುಷ ದೇಹ ಹೊಂದಿ, ವೇದಗಳ ಪಾರಣ್ಯ ಕೂಡ ಲಬ್ಧವಾದಾಗಲೂ, ಮುಕ್ತಿ ಪಡೆಯಲು ಪ್ರಯತ್ನ ಮಾಡದಿದ್ದರೆ, ಅಂತಹ ಮೂಢನು ಸ್ವತಃ ಆತ್ಮಹತ್ಯೆ ಮಾಡಿಕೊಂಡಂತೇ ಯಾಕೆಂದರೆ ಅವನು ಮಿಥ್ಯೆಗೆ ಅಂಟಿಕೊಂಡು ತನ್ನನ್ನು ತಾನೇ ಹತ್ಯೆ ಮಾಡಿಕೊಳ್ಳುತ್ತಾನೆ.

ಇತಃ ಕೋ ನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ .
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯ ತತ್ರಾಪಿ ಪೌರುಷಂ .. 5..

ದುರ್ಲಭವಾದ ಮಾನವ ಜನ್ಮ ದೊರೆತು, ಪುರುಷ ಜನ್ಮವು ದೊರೆತಾಗಲೂ ತನ್ನ ಅತ್ಯುನ್ನತ ಧ್ಯೇಯವನ್ನು (ಮುಕ್ತಿಯನ್ನು) ಹುಡುಕಲು ಪ್ರಮಾದ ಮಾಡಿದರೆ, ಅವನಂತಹ ಮೂರ್ಖರು ಬೇರೆ ಯಾರು ತಾನೆ ಇದ್ದಾರೆ?

ವದಂತು ಶಾಸ್ತ್ರಾಣಿ ಯಜಂತು ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ .
ಆತ್ಮೈಕ್ಯಬೋಧೇನ ವಿನಾಪಿ ಮುಕ್ತಿ-
ರ್ನ ಸಿಧ್ಯತಿ ಬ್ರಹ್ಮಶತಾಂತರೇಽಪಿ .. 6..

ಶಾಸ್ತ್ರಗಳನ್ನು ಓದಿದರೂ, ದೇವತೆಗಳ ಯಜ್ಞ ಯಾಗಗಳನ್ನು ಮಾಡಿದರೂ, ಕರ್ಮಾನುಷ್ಠಾನಗಳನ್ನು ಮಾಡಿದರೂ, ದೈವಾರಾಧನೆ ಮಾಡಿದರೂ, ಆತ್ಮ ಪರಮಾತ್ಮಗಳು ಒಂದೇ ಎಂಬ ಸತ್ಯವನ್ನು  ಅರಿಯದಿದ್ದರೆ, ಅಂತವನಿಗೆ ನೂರು ಬ್ರಹ್ಮಂದಿರ ಕಾಲಾವಧಿಯಲ್ಲೂ ಸಹ ಮುಕ್ತಿ ಸಿಗಲಾರದು. 

ಅಮೃತತ್ತ್ವಸ್ಯ ನಾಶಾಸ್ತಿ ವಿತ್ತೇನೇತ್ಯೇವ ಹಿ ಶ್ರುತಿಃ .
ಬ್ರವೀತಿ ಕರ್ಮಣೋ ಮುಕ್ತೇರಹೇತುತ್ವಂ ಸ್ಫುಟಂ ಯತಃ .. 7..

ಕರ್ಮ ಮಾರ್ಗದಿಂದ  ಮುಕ್ತಿಯು ಸಿಗಲಾರದು ಎಂಬ ಮಾತು  ಸತ್ಯ, ಯಾಕೆಂದರೆ ಐಶ್ವರ್ಯದಿಂದ ಅಮರತ್ವ ಸಿಗುವ ಸಾಧ್ಯತೆ ಇಲ್ಲ ಎಂದು ವೇದಗಳೇ ಹೇಳುತ್ತವೆ.

ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್,
ಸನ್ನ್ಯಸ್ತಬಾಹ್ಯಾರ್ಥಸುಖಸ್ಪೃಹಃ ಸನ್ .
ಸಂತಂ ಮಹಾಂತಂ ಸಮುಪೇತ್ಯ ದೇಶಿಕಂ
ತೇನೋಪದಿಷ್ಟಾರ್ಥಸಮಾಹಿತಾತ್ಮಾ .. 8..

ಹಾಗಾಗಿ ವಿದ್ವಾನನು, ಮುಕ್ತಿಗಾಗಿ ಪ್ರಯತ್ನಿಸಬೇಕು. ಬಾಹ್ಯ ಸುಖಗಳ ಆಸೆಯನ್ನು ತ್ಯಜಿಸಿ, ಸತ್ಪುರುಷನೂ, ಮಹಾತ್ಮನೂ ಆದ ಸದ್ಗುರುವಿನ ಆಶ್ರಯ ಪಡೆದು, ಆ ಗುರುವು ಕಲಿಸಿದ ಸತ್ಯದಲ್ಲಿ ತನ್ಮಯನಾಗಬೇಕು.   

 ಉದ್ಧರೇದಾತ್ಮನಾಽಽತ್ಮಾನಂ ಮಗ್ನಂ ಸಂಸಾರವಾರಿಧೌ .
 ಯೋಗಾರೂಢತ್ವಮಾಸಾದ್ಯ ಸಮ್ಯಗ್ದರ್ಶನನಿಷ್ಠಯಾ .. 9..

(ವಿದ್ವಾನನು) ಯೋಗಾರೂಢ ಸ್ಥಿತಿಯನ್ನು ಹೊಂದಿ, ಸಂಪೂರ್ಣ ಜ್ಞಾನ  ಮತ್ತು ನಿಷ್ಠೆಗಳಿಂದ, ಈ ಸಂಸಾರ ಸಾಗರದಿಂದ, ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು.  

ಒಬ್ಬ ವ್ಯಕ್ತಿಯು ಇಂದ್ರಿಯ ವಸ್ತುಗಳಿಗೂ ಅಥವಾ ಕರ್ಮಗಳಿಗೂ ಅಂಟಿಕೊಳ್ಳದೆ, ಎಲ್ಲಾ ಆಸೆಗಳನ್ನು ತ್ಯಜಿಸಿದಾಗ, ಅವನನ್ನು ಯೋಗಾರೂಢ ಸ್ಥಿತಿಯಲ್ಲಿರುವನು ಎಂದು ಹೇಳಲಾಗುತ್ತದೆ.

ಸನ್ನ್ಯಸ್ಯ ಸರ್ವಕರ್ಮಾಣಿ ಭವಬಂಧವಿಮುಕ್ತಯೇ .
ಯತ್ಯತಾಂ ಪಂಡಿತೈರ್ಧೀರೈರಾತ್ಮಾಭ್ಯಾಸ ಉಪಸ್ಥಿತೈಃ .. 10..

ಆತ್ಮ ಸಾಕ್ಷತ್ಕಾರದ ದಾರಿಯಲ್ಲಿ ನಡೆಯುತ್ತಿರುವ ಪಂಡಿತನು, ಸರ್ವ ಕರ್ಮಗಳನ್ನು ತ್ಯಜಿಸಿ, ಭವಬಂಧನಗಳಿಂದ ಮುಕ್ತಿಯನ್ನು ಪಡೆಯಲು ಪ್ರಯತ್ನಿಸಬೇಕು. 

ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ .
ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ಕರ್ಮಕೋಟಿಭಿಃ .. 11..

ಕರ್ಮವು ಮನಸ್ಸಿನ ಶುದ್ಧೀಕರಣಕ್ಕೆ ಕಾರಣವಾಗುತ್ತದೆಯೇ ಹೊರತು, ಸತ್ಯಜ್ಞಾನದ ಗ್ರಹಿಕೆಗೆ ಅಲ್ಲ.ಚಿತ್ತಶುದ್ಧಿಗಾಗಿ ಕರ್ಮ ಮಾಡಬೇಕೇ ಹೊರತಾಗಿ ಸತ್ಯಜ್ಞಾನ ಪಡೆಯಲು ಅಲ್ಲ. (ಯಾಕೆಂದರೆ) ಆತ್ಮ ಸಾಕ್ಷಾತ್ಕಾರ, ಆತ್ಮಜ್ಞಾನ ಕೋಟಿ ಕರ್ಮ ಮಾಡುವದರಿಂದ ಸಿಗುವದಿಲ್ಲ, ಆತ್ಮ ತತ್ವದ ಕುರಿತು ವಿಚಾರ ಮಾಡುವದರಿಂದ  ಸಿಗುತ್ತದೆ,

ಸಮ್ಯಗ್ವಿಚಾರತಃ ಸಿದ್ಧಾ ರಜ್ಜುತತ್ತ್ವಾವಧಾರಣಾ .
ಭ್ರಾಂತೋದಿತಮಹಾಸರ್ಪಭಯದುಃಖವಿನಾಶಿನೀ .. 12..

ಕೂಲಂಕಷವಾಗಿ ವಿಚಾರ ಮಾಡುವದರಿಂದ, ಹಗ್ಗ ಎಂಬ ಸತ್ಯ (ನಾವು ನೋಡಿದ್ದು ಹಾವಲ್ಲ, ಬರೀ ಹಗ್ಗ ) ತಿಳಿಯುವದು. ಸರ್ಪ ಎಂಬ ಭ್ರಮೆ ಮತ್ತು ಆ ಭ್ರಮೆಯಿಂದ ಉಂಟಾದ ಭಯ ದುಃಖಗಳು ನಿವಾರಣೆಯಾಗುವವು.  (ಬಾಹ್ಯ ಜಗತ್ತೆಲ್ಲ ಮಿಥ್ಯೆ ಎಂಬ ಸತ್ಯ ತಿಳಿದಾಗ ದುಃಖ ದುಗುಡಗಳು ದೂರವಾಗುವವು)

ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ .
ನ ಸ್ನಾನೇನ ನ ದಾನೇನ ಪ್ರಾಣಾಯಾಮಶತೇನ ವಾ .. 13..

ಸತ್ಯಾಸತ್ಯ ವಿಚಾರದಿಂದ ಮತ್ತು ಸಂತರ ಹಿತೋಪದೇಶದಿಂದ ಸತ್ಯದ ಜ್ಞಾನ (ಆತ್ಮಜ್ಞಾನ) ಉಂಟಾಗುವದು. ಅದನ್ನು ಬಿಟ್ಟು ನೂರಾರು ಪುಣ್ಯಸ್ನಾನ, ದಾನ ಅಥವಾ ಪ್ರಾಣಾಯಾಮ ಮಾಡುವದರಿಂದ  ಆ ಜ್ಞಾನ ಲಭಿಸುವದಿಲ್ಲ. 

ಶಿಷ್ಯನ ಅರ್ಹತೆಗಳು 

ಅಧಿಕಾರಿಣಮಾಶಾಸ್ತೇ ಫಲಸಿದ್ಧಿರ್ವಿಶೇಷತಃ .
ಉಪಾಯಾ ದೇಶಕಾಲಾದ್ಯಾಃ ಸಂತ್ಯಸ್ಮಿನ್ಸಹಕಾರಿಣಃ .. 14..

ತತ್ವಜ್ಞಾನ ಪ್ರಾಪ್ತಿಯಾಗುವದು ಮೂಲತಃ: ಅರ್ಹ ಆಕಾಂಕ್ಷಿಯ ಮೇಲೆ ಅವಲಂಬಿತವಾಗಿರುತ್ತದೆ. ಈ  ವಿಷಯದಲ್ಲಿ ಕಾಲ-ದೇಶಗಳ ಸಹಾಯಕಗಳು ಅಷ್ಟೇ.

ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ ..
ಸಮಾಸಾದ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಂ .. 15..

ಆದ್ದರಿಂದ ಆತ್ಮವಸ್ತುವಿನ ಜಿಜ್ಞಾಸು ವಿಚಾರ ಮಾಡಿ, ಬ್ರಹ್ಮಜ್ಞಾನಿಯಾದ ಮತ್ತು ದಯಾಸಿಂಧುವಾದ ಗುರುವಿನ ಬಳಿ ಹೋಗಬೇಕು. 

ಮೇಧಾವೀ ಪುರುಷೋ ವಿದ್ವಾನೂಹಾಪೋಹವಿಚಕ್ಷಣಃ .
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣಲಕ್ಷಿತಃ .. 16..

ಮೇಧಾವಿ ಮತ್ತು ವಿದ್ವಾನನಾದ, ವೇದಗಳ ಬಗ್ಗೆ ವಾದ ಮಾಡಬಲ್ಲ, ಅವುಗಳ ವಿರುದ್ದದ ವಿತಂಡವಾದವನ್ನು ಮಾಡಬಲ್ಲ (ತರ್ಕ ಮೀಮಾಂಸೆಗಳಲ್ಲಿ ನುರಿತವನೂ) ಮಾನವನು ಆತ್ಮಜ್ಞಾನ ಪಡೆಯಲು ಅರ್ಹನಾಗಿರುತ್ತಾನೆ. 

ವಿವೇಕಿನೋ ವಿರಕ್ತಸ್ಯ ಶಮಾದಿಗುಣಶಾಲಿನಃ .
ಮುಮುಕ್ಷೋರೇವ ಹಿ ಬ್ರಹ್ಮಜಿಜ್ಞಾಸಾಯೋಗ್ಯತಾ ಮತಾ .. 17..
 
ಈ ಶ್ಲೋಕದಲ್ಲಿ ಪುನಃ ಬ್ರಹ್ಮಜ್ಞಾನ ಪಡೆಯಲು ಬೇಕಾದ ಯೋಗ್ಯತೆಗಳ ವಿವರವಿದೆ. - ವಿವೇಕಿಯಾದವನು, ವಿರಕ್ತನು, ಶಮ(ಶಾಂತಿ) ಇತ್ಯಾದಿ ಸ್ವಭಾವ ಹೊಂದಿದವನು, ಮುಮುಕ್ಷುವು (ಮೋಕ್ಷದ ಆಸೆಯಿದ್ದವನು) ಬ್ರಹ್ಮಜ್ಞಾನ ಪಡೆಯಲು ಯೋಗ್ಯನು. 

ಸಾಧನ ಚತುಷ್ಟಯಗಳು 

ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ .
ಯೇಷು ಸತ್ಸ್ವೇವ ಸನ್ನಿಷ್ಠಾ ಯದಭಾವೇ ನ ಸಿಧ್ಯತಿ .. 18..

ಜ್ಞಾನಿಗಳು ಹೇಳುವ ಪ್ರಕಾರ ನಾಲ್ಕು ಪ್ರಕಾರದ ಸಾಧನಗಳು ಆತ್ಮಜ್ಞಾನ ಪ್ರಾಪ್ತಿಗೆ ಬೇಕೇ ಬೇಕು. ಇವು ಇಲ್ಲದಿದ್ದರೆ ಜ್ಞಾನ ಪ್ರಾಪ್ತಿಯಾಗದು. 

ಆದೌ ನಿತ್ಯಾನಿತ್ಯವಸ್ತುವಿವೇಕಃ ಪರಿಗಣ್ಯತೇ .
ಇಹಾಮುತ್ರಫಲಭೋಗವಿರಾಗಸ್ತದನಂತರಂ .
ಶಮಾದಿಷಟ್ಕಸಂಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಂ .. 19..

ಈ ನಾಲ್ಕು ಗುಣಗಳು ಯಾವವೆಂದರೆ - 

  1. ಸತ್ಯ ಮತ್ತು ಮಿಥ್ಯೆಗಳನ್ನು ಅರಿಯುವ ವಿವೇಚನೆ, 
  2. ಕರ್ಮಫಲ ಪ್ರಾಪ್ತಿಯಲ್ಲಿ ವೈರಾಗ್ಯ, 
  3. ಶಾಂತತೆ ಇತ್ಯಾದಿ ಆರು ಗುಣಗಳು, ಮತ್ತು 
  4. ಮೋಕ್ಷದ ತೀವ್ರ ಆಸೆ.  
ಬ್ರಹ್ಮ ಸತ್ಯಂ ಜಗನ್ಮಿಥ್ಯೇತ್ಯೇವಂರೂಪೋ ವಿನಿಶ್ಚಯಃ .
ಸೋಽಯಂ ನಿತ್ಯಾನಿತ್ಯವಸ್ತುವಿವೇಕಃ ಸಮುದಾಹೃತಃ .. 20..

ನಿತ್ಯಾನಿತ್ಯ ವಿವೇಕವೆಂದರೆ (ಮೊದಲನೇ ಅರ್ಹತೆ) - ಬ್ರಹ್ಮ ಮಾತ್ರ ಸತ್ಯ ಮತ್ತು ಈ ಜಗತ್ತು ಮಿಥ್ಯೆ ಎಂಬ ಗಟ್ಟಿ ನಂಬಿಕೆ. 

                                                                                                               

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ - 41-60