ವಿವೇಕ ಚೂಡಾಮಣಿ - 21 - 40
ಸಾಧನ ಚತುಷ್ಟಯ
ತದ್ವೈರಾಗ್ಯಂ ಜಿಹಾಸಾ ಯಾ ದರ್ಶನಶ್ರವಣಾದಿಭಿಃ .
ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ .. 21..
ಜಿಹಾಸಾ - ಜಿಗುಪ್ಸೆ ದೇಹಾದಿಬ್ರಹ್ಮಪರ್ಯಂತೇ - ದೇಹದಿಂದ ಬ್ರಹ್ಮದ ವರೆಗೆ ಎಲ್ಲ ಹ್ಯನಿತ್ಯೇ - ಹಿ ಅನಿತ್ಯೇ - ಖಂಡಿತ ಅನಿತ್ಯ ವಸ್ತುಗಳಲ್ಲಿ
ದರ್ಶನ ಶ್ರವಣಾದಿಭಿಃ - ದರ್ಶನ ಶ್ರವಣ ಇತ್ಯಾದಿ
ವಿರಜ್ಯ ವಿಷಯವ್ರಾತಾದ್ದೋಷದೃಷ್ಟ್ಯಾ ಮುಹುರ್ಮುಹುಃ .
ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ .. 22..
ಶಮೆ ಎಂದರೆ - ಪುನಃ ಪುನಃ ವಿಷಯಸಮೂಹದ ದೋಷಗಳನ್ನು ನೋಡಿ ಅರಿತು, ಅವುಗಳನ್ನು ತ್ಯಜಿಸಿ, ಮನಸ್ಸನ್ನು ಗುರಿಯಲ್ಲಿ (ಆತ್ಮಜ್ಞಾನದ ಗುರಿಯಲ್ಲಿ) ಕೇಂದ್ರೀಕರಿಸುವದು.
ಶಮೆ ಎಂದರೆ ಮನೋನಿಗ್ರಹ, ಮಾನಸಿಕ ಸಮತೋಲನ ಎಂಬ ಅರ್ಥ.
ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ .
ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ .
ಬಾಹ್ಯಾನಾಲಂಬನಂ ವೃತ್ತೇರೇಷೋಪರತಿರುತ್ತಮಾ .. 23..
ದಮ ಎಂದರೆ - ಜ್ಞಾನದ ಮತ್ತು ಕ್ರಿಯೆಯ ಇಂದ್ರಿಯಗಳನ್ನು ಬಾಹ್ಯಸುಖದಿಂದ ದೂರ ತಿರುಗಿಸಿ, ಅವನ್ನು ಸ್ವಕೇಂದ್ರಗಳಲ್ಲಿ ಸ್ಥಾಪಿಸುವದು.
ಮನಸ್ಸಿನ ವೃತ್ತಿಯು ಹೊರಗಿನ ಯಾವುದೇ ವಸ್ತುವನ್ನೂ ಅವಲಂಬಿಸದಿರುವದೇ ಉಪರತಿ (ವಿಷಯ ಭೋಗಗಳಲ್ಲಿ ವಿರಕ್ತಿ).
ಸಹನಂ ಸರ್ವದುಃಖಾನಾಮಪ್ರತೀಕಾರಪೂರ್ವಕಂ .
ಚಿಂತಾವಿಲಾಪರಹಿತಂ ಸಾ ತಿತಿಕ್ಷಾ ನಿಗದ್ಯತೇ .. 24..
ತಿತಿಕ್ಷೆ (ತಾಳ್ಮೆ ಅಥವಾ ಸಹಿಷ್ಣುತೆ ) ಎಂದರೆ - ಯಾವ ದುಃಖ ಬಂದರೂ ಅವುಗಳನ್ನು ಯಾವದೇ ಪ್ರತಿಕಾರ ಮನೋಭಾವವಿಲ್ಲದೆ ಸಹಿಸಿ, ಅವುಗಳಿಂದ ಯಾವುದೇ ರೀತಿಯ ಚಿಂತೆ, ದುಗುಡ, ಶೋಕಗಳಿಲ್ಲದೇ ಇರುವದು.
ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯಬುದ್ಧ್ಯವಧಾರಣಂ .
ಸಾ ಶ್ರದ್ಧಾ ಕಥಿತಾ ಸದ್ಭಿರ್ಯಯಾ ವಸ್ತೂಪಲಭ್ಯತೇ .. 25..
ಶ್ರದ್ದೆ : ಶಾಸ್ತ್ರಗಳಲ್ಲಿ ಹೇಳಿರುವದನ್ನು, ಗುರುವಾಕ್ಯಗಳನ್ನು ಸತ್ಯವೆಂದು, ಗಟ್ಟಿಯಾಗಿ ಸ್ವೀಕರಿಸುವದನ್ನು ಶ್ರದ್ದೆ ಎನ್ನುತ್ತಾರೆ. ಈ ಶ್ರದ್ದೆಯಿಂದ ಸತ್ಯ (ಬ್ರಹ್ಮರೂಪ ಸಾಕ್ಷಾತ್ಕಾರ ) ದೊರಕುತ್ತದೆ.
ಸರ್ವದಾ ಸ್ಥಾಪನಂ ಬುದ್ಧೇಃ ಶುದ್ಧೇ ಬ್ರಹ್ಮಣಿ ಸರ್ವದಾ .
ತತ್ಸಮಾಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಂ .. 26..
ಸಮಾಧಾನ: ಮನಸ್ಸನ್ನು ನಿರುಪಯೋಗಿ ವಿಷಯಗಳಲ್ಲಿ ತೊಡಗಿಸದೆ, ಸದಾ ಬ್ರಹ್ಮ ಚಿಂತನೆಯಲ್ಲೇ ತೊಡಗಿಸಿರುವದನ್ನು ಸಮಾಧಾನವೆಂದು ಹೇಳುತ್ತಾರೆ. ಸುಮ್ಮನೆ ಕುತೂಹಲದಿಂದ ವಿಚಾರದಲ್ಲಿ ಮುಳುಗುವದು ಸಮಾಧಾನವಲ್ಲ.
ಅಹಂಕಾರಾದಿದೇಹಾಂತಾನ್ ಬಂಧಾನಜ್ಞಾನಕಲ್ಪಿತಾನ್ .
ಸ್ವಸ್ವರೂಪಾವಬೋಧೇನ ಮೋಕ್ತುಮಿಚ್ಛಾ ಮುಮುಕ್ಷುತಾ .. 27..
ಮುಮುಕ್ಷತೆ : ತನ್ನ ನಿಜಸ್ವರೂಪದ ಜ್ಞಾನದ ಸಹಾಯದಿಂದ, ಅಜ್ಞಾನದಿಂದ ಕಲ್ಪಿತವಾದ ಬಂಧನಗಳನ್ನು - ಅಹಂಕಾರದಿಂದ ಪ್ರಾರಂಭಿಸಿ ಶರೀರದ ತನಕ ಎಲ್ಲ ಬಂಧನಗಳಿಂದಲೂ ಬಿಡಿಸಿಕೊಳ್ಳಬೇಕೆಂಬ ತೀವ್ರ ಆಸೆಯನ್ನು ಮುಮುಕ್ಷತೆ ಎನ್ನುತ್ತಾರೆ.
ಮಂದಮಧ್ಯಮರೂಪಾಪಿ ವೈರಾಗ್ಯೇಣ ಶಮಾದಿನಾ .
ಪ್ರಸಾದೇನ ಗುರೋಃ ಸೇಯಂ ಪ್ರವೃದ್ಧಾ ಸೂಯತೇ ಫಲಂ .. 28..
ಸ್ವಲ್ಪ ಅಥವಾ ಮಧ್ಯಮ ಮಟ್ಟದ ಮುಮುಕ್ಷತೆ ಇದ್ದರೂ ಸಹ, ವೈರಾಗ್ಯ, ಶಮ, ದಮ ಇತ್ಯಾದಿಗಳ ಸಹಾಯದಿಂದ ಮತ್ತು ಗುರುವಿನ ಅನುಗ್ರಹದಿಂದ, ಮುಕ್ತಿಯ ಪ್ರಾಪ್ತಿಯಾಗಬಹುದು.
ವೈರಾಗ್ಯಂ ಚ ಮುಮುಕ್ಷುತ್ವಂ ತೀವ್ರಂ ಯಸ್ಯ ತು ವಿದ್ಯತೇ .
ತಸ್ಮಿನ್ನೇವಾರ್ಥವಂತಃ ಸ್ಯುಃ ಫಲವಂತಃ ಶಮಾದಯಃ .. 29..
ಯಾರಲ್ಲಿ ವೈರಾಗ್ಯ ಮತ್ತು ಮುಮುಕ್ಷತ್ವ ತೀವ್ರವಾಗಿರುವದೋ, ಅವರಲ್ಲಿಯೇ ಶಮ ಮತ್ತು ಕರುಣೆ ಅರ್ಥ ಪಡೆದು, ಸಫಲವಾಗುತ್ತವೆ.
ಏತಯೋರ್ಮಂದತಾ ಯತ್ರ ವಿರಕ್ತತ್ವಮುಮುಕ್ಷಯೋಃ .
ಮರೌ ಸಲಿಲವತ್ತತ್ರ ಶಮಾದೇರ್ಭಾನಮಾತ್ರತಾ .. 30..
ಯಾರಲ್ಲಿ ವೈರಾಗ್ಯ ಮತ್ತು ಮುಮುಕ್ಷತೆ ಕಡಿಮೆ ಇರುವದೋ, ಅವರಲ್ಲಿ ಶಾಂತತೆ ಇತ್ಯಾದಿ ಗುಣಗಳು, ಮರುಭೂಮಿಯಲ್ಲಿರುವ ನೀರಿನಂತೆ ಬರೀ ಮರೀಚಿಕೆ ಮಾತ್ರ (ಕ್ಷಣಿಕ).
ಭಕ್ತಿ
ಮೋಕ್ಷಕಾರಣಸಾಮಗ್ರ್ಯಾಂ ಭಕ್ತಿರೇವ ಗರೀಯಸೀ .
ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ .. 31..
ಮೋಕ್ಷದ ಮಾರ್ಗಗಳಲ್ಲಿ ಭಕ್ತಿಯೇ ಸರ್ವ ಶ್ರೇಷ್ಠ ಮಾರ್ಗ. ನಮ್ಮ ನೈಜ ಸ್ವರೂಪದ ಶೋಧನೆಯೇ ಭಕ್ತಿ.
ಸ್ವಾತ್ಮತತ್ತ್ವಾನುಸಂಧಾನಂ ಭಕ್ತಿರಿತ್ಯಪರೇ ಜಗುಃ .
ಉಕ್ತಸಾಧನಸಂಪನ್ನಸ್ತತ್ತ್ವಜಿಜ್ಞಾಸುರಾತ್ಮನಃ .
ಉಪಸೀದೇದ್ಗುರುಂ ಪ್ರಾಜ್ಞಂ ಯಸ್ಮಾದ್ಬಂಧವಿಮೋಕ್ಷಣಂ ..32..
ಆತ್ಮದ ಬಗ್ಗೆ ಅರಿಯುವ ಪ್ರಯತ್ನವನ್ನೇ ಭಕ್ತಿಯೆಂದು ಇನ್ನು ಕೆಲವರು ಹೇಳುತ್ತಾರೆ.
ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ .
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ .
ಅಹೇತುಕದಯಾಸಿಂಧುರ್ಬಂಧುರಾನಮತಾಂ ಸತಾಂ .. 33..
ಅಂತಹ ಗುರುವಿನ ವರ್ಣನೆ ಈ ಶ್ಲೋಕದಲ್ಲಿದೆ. - ವೇದಪಾರಂಗತನು, ಪಾಪರಹಿತನು, ಕಾಮವನ್ನು ಗೆದ್ದವನು, ಬ್ರಹ್ಮನನ್ನು ಅರಿತವನು, ಬ್ರಹ್ಮತ್ವದಲ್ಲಿ ಮುಳುಗಿದವನು, ಇಂಧನವಿಲ್ಲದ ಬೆಂಕಿಯಂತೆ ಶಾಂತನು, ಯಾವ ಪ್ರತಿಫಲ ಬಯಸದ ದಯಾಸಿಂಧುವು, ವಂದಿಸುವ ಸಾಧುಗಳ ಬಂಧುವು;
ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವಪ್ರಶ್ರಯಸೇವನೈಃ .
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇಜ್ಜ್ಞಾತವ್ಯಮಾತ್ಮನಃ .. 34..
ಅಂತಹ ಗುರುವನ್ನು ವಂದಿಸಿ, ಭಕ್ತಿಯಿಂದ ಸೇವನೆ ಮಾಡಿ, ನಮೃತೆ, ವಿನಯಗಳಿಂದ ಅವನು ಪ್ರಸನ್ನನಾದಾಗ, ಅವನ ಬಳಿ ಹೋಗಿ, ತನ್ನ ತಿಳಿಯಬೇಕಾಗಿರುವ ಪ್ರಶ್ನೆಯನ್ನು ಪ್ರಶ್ನಿಸಬೇಕು.
ಸ್ವಾಮಿನ್ನಮಸ್ತೇ ನತಲೋಕಬಂಧೋ
ಕಾರುಣ್ಯಸಿಂಧೋ ಪತಿತಂ ಭವಾಬ್ಧೌ .
ಮಾಮುದ್ಧರಾತ್ಮೀಯಕಟಾಕ್ಷದೃಷ್ಟ್ಯಾ
ಋಜ್ವ್ಯಾತಿಕಾರುಣ್ಯಸುಧಾಭಿವೃಷ್ಟ್ಯಾ .. 35..
ಗುರುವನ್ನು ಏನು ಕೇಳಬೇಕು ಎಂಬ ವಿವರಣೆ ಈ ಶ್ಲೋಕದಲ್ಲಿದೆ. "ಸ್ವಾಮಿ, ನಾನು ನಮಸ್ಕರಿಸುತ್ತೇನೆ. ನೀನು ವಂದಿಸಿದವರ ಬಂಧುವೂ, ಕಾರುಣ್ಯಸಿಂಧುವು ಆಗಿರುವೆ. ನಾನು ಭವಸಾಗರದಲ್ಲಿ ಮುಳಿಗಿರುವೆ. ನಿನ್ನ ಅಮೃತಸಮಾನವಾದ ಕರುಣೆಯ ಕಟಾಕ್ಷದಿಂದ ನನ್ನನ್ನು ಉದ್ಧರಿಸು. "
ದುರ್ವಾರಸಂಸಾರದವಾಗ್ನಿತಪ್ತಂ
ದೋಧೂಯಮಾನಂ ದುರದೃಷ್ಟವಾತೈಃ .
ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ
ಶರಣ್ಯಮನ್ಯದ್ಯದಹಂ ನ ಜಾನೇ .. 36..
ಪರಿಹರಿಸಲಾಗದ ಈ ಸಂಸಾರವೆಂಬ ಅಗ್ನಿಯಲ್ಲಿ ಬೆಂದಿದ್ದೇನೆ. ದುರಾದ್ರಷ್ಟವೆಂಬ ಸುಂಟರಗಾಳಿಯಲ್ಲಿ ಸಿಲಿಕಿ ನಡುಗುತ್ತಿದ್ದೇನೆ. ಭಯಭೀತನಾಗಿದ್ದೇನೆ. ನನ್ನನ್ನು ಮೃತ್ಯುವಿನಿಂದ ಕಾಪಾಡು. ಇನ್ಯಾರೂ ರಕ್ಷಿಸುವರನ್ನು ನಾನರಿಯೆ.
ಶಾಂತಾ ಮಹಾಂತೋ ನಿವಸಂತಿ ಸಂತೋ
ವಸಂತವಲ್ಲೋಕಹಿತಂ ಚರಂತಃ .
ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾ-
ನಹೇತುನಾನ್ಯಾನಪಿ ತಾರಯಂತಃ .. 37..
ಲೋಕದಲ್ಲಿ ಕೆಲ ಸಂತರು ಇದ್ದಾರೆ. ಅವರು ಶಾಂತ ಸ್ವಭಾವದವರೂ, ಮಹಾನರೂ, ವಸಂತ ಕಾಲದಂತೆ ,ಲೋಕಕ್ಕೆಲ್ಲ ಒಳ್ಳೆಯದನ್ನೇ ಮಾಡುವವರೂ ಆಗಿರುತ್ತಾರೆ. ಅವರು ಸ್ವಯಂ ಜನ್ಮ ಮೃತ್ಯುವಿನ ಸಾಗರವನ್ನು ದಾಟಿ, ಇತರರಿಗೂ ಅದನ್ನು ದಾಟಲು ಯಾವುದೇ ಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುತ್ತಾರೆ.
ಅಯಂ ಸ್ವಭಾವಃ ಸ್ವತ ಏವ ಯತ್ಪರ-
ಶ್ರಮಾಪನೋದಪ್ರವಣಂ ಮಹಾತ್ಮನಾಂ .
ಸುಧಾಂಶುರೇಷ ಸ್ವಯಮರ್ಕಕರ್ಕಶ-
ಪ್ರಭಾಭಿತಪ್ತಾಮವತಿ ಕ್ಷಿತಿಂ ಕಿಲ .. 38..
ಚಂದ್ರನು ಸೂರ್ಯನ ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ಭೂಮಿಯನ್ನು ರಕ್ಷಿಸುವ ಹಾಗೆ, ಮಹಾತ್ಮರ ಸ್ವಭಾವವೇ ಇತರರ ಕಷ್ಟಗಳನ್ನು ಪರಿಹರಿಸುವದಾಗಿರುತ್ತದೆ.
ಬ್ರಹ್ಮಾನಂದರಸಾನುಭೂತಿಕಲಿತೈಃ ಪೂತೈಃ ಸುಶೀತೈರ್ಯುತೈ
ರ್ಯುಷ್ಮದ್ವಾಕ್ಕಲಶೋಜ್ಝಿತೈಃ ಶ್ರುತಿಸುಖೈರ್ವಾಕ್ಯಾಮೃತೈಃ ಸೇಚಯ .
ಸಂತಪ್ತಂ ಭವತಾಪದಾವದಹನಜ್ವಾಲಾಭಿರೇನಂ ಪ್ರಭೋ
ಧನ್ಯಾಸ್ತೇ ಭವದೀಕ್ಷಣಕ್ಷಣಗತೇಃ ಪಾತ್ರೀಕೃತಾಃ ಸ್ವೀಕೃತಾಃ .. 39..
ಹೇ ಪ್ರಭುವೇ, ನಿನ್ನ ಅಮೃತದಂತಹ ಮಾತಿನಿಂದ, ಬ್ರಹ್ಮಾನಂದ ಅನುಭೂತಿಯಿಂದ ಮಧುರವಾದ, ಶುದ್ಧವಾದ, ಶೀತಲವಾದ, ನಿನ್ನ ಮಾತಿನ ಕಲಶದಿಂದ ಚಿಮ್ಮುತ್ತಿರುವ, ಕೇಳಲು ಇಂಪಾಗಿರುವ ವಾಕ್ಯಾಮೃತಗಳಿಂದ, ಸಂಸಾರ ತಾಪದ ಕಾಡ್ಗಿಚ್ಚಿನ ಜ್ವಾಲೆಗಳಿಂದ ಬೆಂದಿರುವ ನನ್ನನ್ನು ಚಿಮುಕಿಸು. ನಿನ್ನ ಕೃಪಾ ಕಟಾಕ್ಷಕ್ಕೆ ಕ್ಷಣ ಮಾತ್ರ ಪಾತ್ರವಾದವರೂ ಸಹ ಧನ್ಯರು.
ಕಥಂ ತರೇಯಂ ಭವಸಿಂಧುಮೇತಂ
ಕಾ ವಾ ಗತಿರ್ಮೇ ಕತಮೋಽಸ್ತ್ಯುಪಾಯಃ .
ಜಾನೇ ನ ಕಿಂಚಿತ್ಕೃಪಯಾಽವ ಮಾಂ ಪ್ರಭೋ
ಸಂಸಾರದುಃಖಕ್ಷತಿಮಾತನುಷ್ವ .. 40..
ಈ ಸಂಸಾರ ಸಾಗರವನ್ನು ಹೇಗೆ ದಾಟಬಲ್ಲೆನು? ನನಗೆ ಗತಿ ಯಾವುದು? ಮೋಕ್ಷೋಪಾಯ ಯಾವುದು? ಇದಾವುದನ್ನೂ ನಾನು ಅರಿಯೆನು. ನನ್ನ ಮೇಲೆ ಕ್ರಪೆ ಮಾಡು ಹೇ ಪ್ರಭು. ಸಂಸಾರ ದುಃಖವನ್ನು ನಾಶ ಮಾಡುವ ವಿಧಾನವನ್ನು ವಿವರಿಸು.
Comments