ವಿವೇಕ ಚೂಡಾಮಣಿ - 556-565

ಯತ್ರ ಕ್ವಾಪಿ ವಿಶೀರ್ಣಂ ಸತ್ಪರ್ಣಮಿವ ತರೋರ್ವಪುಃ ಪತತಾತ್ . 
ಬ್ರಹ್ಮೀಭೂತಸ್ಯ ಯತೇಃ ಪ್ರಾಗೇವ ತಚ್ಚಿದಗ್ನಿನಾ ದಗ್ಧಂ .. 556..

ಬ್ರಹ್ಮೀಭೂತವಾದ ಯತಿಯ ಶರೀರವು, ಮರದಿಂದ ಉದುರಿಹೋದ ಎಲೆಯಂತೆ ಎಲ್ಲಿಯಾದರೂ ಬೀಳಲಿ, (ಅದರಿಂದ ಅವನಿಗೆ ಏನೂ ಆಗುವುದಿಲ್ಲ). ಏಕೆಂದರೆ ಆ ಶರೀರ ಮೊದಲೇ ಜ್ಞಾನಾಗ್ನಿಯಿಂದ ಸುಟ್ಟುಹೋಗಿದೆ .
 
ಸದಾತ್ಮನಿ ಬ್ರಹ್ಮಣಿ ತಿಷ್ಠತೋ ಮುನೇಃ
    ಪೂರ್ಣಾಽದ್ವಯಾನಂದಮಯಾತ್ಮನಾ ಸದಾ .
ನ ದೇಶಕಾಲಾದ್ಯುಚಿತಪ್ರತೀಕ್ಷಾ
    ತ್ವಙ್ಮಾಂಸವಿಟ್ಪಿಂಡವಿಸರ್ಜನಾಯ .. 557..

ಸತ್ಸ್ವರೂಪವಾದ ಬ್ರಹ್ಮನಲ್ಲಿ ಪೂರ್ಣ ಅದ್ವಯನಾಂದ ರೂಪದಿಂದ ಯಾವಾಗಲೂ ನಿಂತಿರುವ ಮುನಿಗೆ, ಚರ್ಮ, ಮಾಂಸ, ಮಲಗಳ ಮುದ್ದೆಯಾಗಿರುವ ಶರೀರವನ್ನು ತ್ಯಜಿಸುವುದಕ್ಕೆ, ಉಚಿತ ದೇಶ ಅಥವಾ ಕಾಲಗಳ ಅಪೇಕ್ಷೆಯು ಇರುವುದಿಲ್ಲ.

ದೇಹಸ್ಯ ಮೋಕ್ಷೋ ನೋ ಮೋಕ್ಷೋ ನ ದಂಡಸ್ಯ ಕಮಂಡಲೋಃ .
ಅವಿದ್ಯಾಹೃದಯಗ್ರಂಥಿಮೋಕ್ಷೋ ಮೋಕ್ಷೋ ಯತಸ್ತತಃ .. 558..

ಅವಿದ್ಯೆ ಎಂಬ ಹೃದಯಗ್ರಂಥಿಯು ಕಳಚಿಹೋಗುವುದೇ ಮೋಕ್ಷವೆನಿಸುವುದು; ಆದಕಾರಣ ದೇಹವನ್ನು ಬಿಡುವುದು ಮೋಕ್ಷವಲ್ಲ. ದಂಡವನ್ನಾಗಲಿ, ಕಮಂಡಲುವನ್ನಾಗಲಿ ಬಿಡುವುದೂ ಮೋಕ್ಷವಲ್ಲ.

ಕುಲ್ಯಾಯಾಮಥ ನದ್ಯಾಂ ವಾ ಶಿವಕ್ಷೇತ್ರೇಽಪಿ ಚತ್ವರೇ .
ಪರ್ಣಂ ಪತತಿ ಚೇತ್ತೇನ ತರೋಃ ಕಿಂ ನು ಶುಭಾಶುಭಂ .. 559..

ಮರದ ಎಲೆಯು, ಕಾಲುವೆಯಲ್ಲಾಗಲಿ, ನದಿಯಲ್ಲಾಗಲಿ, ಶಿವಕ್ಷೇತ್ರದಲ್ಲಾಗಲಿ, ಬೀದಿಗಳು ಸೇರುವ ಚೌಕದಲ್ಲಾಗಲಿ ಬಿದ್ದರೂ,  ಅದರಿಂದ ಮರಕ್ಕೆ ಶುಭವಾಗಲಿ ಅಶುಭವಾಗಲಿ ಉಂಟಾದೀತೆ?
 
ಪತ್ರಸ್ಯ ಪುಷ್ಪಸ್ಯ ಫಲಸ್ಯ ನಾಶವದ್-
    ದೇಹೇಂದ್ರಿಯಪ್ರಾಣಧಿಯಾಂ ವಿನಾಶಃ .
ನೈವಾತ್ಮನಃ ಸ್ವಸ್ಯ ಸದಾತ್ಮಕಸ್ಯಾ-
    ನಂದಾಕೃತೇರ್ವೃಕ್ಷವದಸ್ತಿ ಚೈಷಃ .. 560.. 
 
ಮರದ ಎಲೆ, ಹೂವು ಅಥವಾ ಹಣ್ಣು ನಾಶವಾಗುವ ಹಾಗೆ ದೇಹೇಂದ್ರಿಯ,  ಪ್ರಾಣ-ಬುದ್ಧಿಗಳೂ ನಾಶವಾಗುವುವು. ಆದರೆ ಎಲೆ, ಹೂವು, ಹಣ್ಣು ನಾಶವಾದಾಗ ಮರಕ್ಕೆ ಏನು ಆಗದಂತೆ,  ಸತ್ಸ್ವರೂಪ, ಆನಂದರೂಪನಾದ ಆತ್ಮನಿಗೆ ಏನೂ ಆಗುವದಿಲ್ಲ.  ಅವನು ವೃಕ್ಷದಂತೆ ನಿತ್ಯ ನಿಶ್ಚಲನು.

ಪ್ರಜ್ಞಾನಘನ ಇತ್ಯಾತ್ಮಲಕ್ಷಣಂ ಸತ್ಯಸೂಚಕಂ .
ಅನೂದ್ಯೌಪಾಧಿಕಸ್ಯೈವ ಕಥಯಂತಿ ವಿನಾಶನಂ .. 561..

ಆತ್ಮನು "ಪ್ರಜ್ಞಾನ ಘನನು' ಎಂಬ ಸತ್ಯವನ್ನು ಸೂಚಿಸುವ ಶ್ರತಿಗಳು, ಆತ್ಮದ  ಉಪಾಧಿ ಮಾತ್ರ ನಾಶವಾಗುತ್ತದೆಂದು ಹೇಳುತ್ತವೆ.
 
ಅವಿನಾಶೀ ವಾ ಅರೇಽಯಮಾತ್ಮೇತಿ ಶ್ರುತಿರಾತ್ಮನಃ .
ಪ್ರಬ್ರವೀತ್ಯವಿನಾಶಿತ್ವಂ ವಿನಶ್ಯತ್ಸು ವಿಕಾರಿಷು .. 562..

ವಿಕಾರವುಳ್ಳ ವಸ್ತುಗಳು ನಾಶವಾಗುತ್ತಿದ್ದರೂ, ಆತ್ಮನು ನಾಶವಾಗುವುದಿಲ್ಲವೆಂದು ಶ್ರುತಿಯು ಹೀಗೆಂದು ಹೇಳುತ್ತದೆ:"ಎಲೇ ಮೈತ್ರೇಯಿ , ಈ ಆತ್ಮನು ಅವಿನಾಶಿ."
 
ಪಾಷಾಣವೃಕ್ಷತೃಣಧಾನ್ಯಕಡಂಕರಾದ್ಯಾ    
    ದಗ್ಧಾ ಭವಂತಿ ಹಿ ಮೃದೇವ ಯಥಾ ತಥೈವ .
ದೇಹೇಂದ್ರಿಯಾಸುಮನ ಆದಿ ಸಮಸ್ತದೃಶ್ಯಂ
    ಜ್ಞಾನಾಗ್ನಿದಗ್ಧಮುಪಯಾತಿ ಪರಾತ್ಮಭಾವಂ .. 563..

ಕಲ್ಲು, ಮರ, ಹುಲ್ಲು, ಧಾನ್ಯ, ಹೊಟ್ಟು — ಮೊದಲಾದುವು ದಗ್ದವಾದರೆ ಮಣ್ಣೇ ಆಗುವಂತೆ, ದೇಹ, ಇಂದ್ರಿಯ, ಪ್ರಾಣ, ಮನಸ್ಸು ಮೊದಲಾದ ದೃಶ್ಯವಸ್ತುವೆಲ್ಲವೂ ಜ್ಞಾನಾಗ್ನಿಯಿಂದ ದಹಿಸಿ ಪರಮಾತ್ಮಸ್ವರೂಪವನ್ನೆ ಹೊಂದುತ್ತವೆ.
 
ವಿಲಕ್ಷಣಂ ಯಥಾ ಧ್ವಾಂತಂ ಲೀಯತೇ ಭಾನುತೇಜಸಿ .
ತಥೈವ ಸಕಲಂ ದೃಶ್ಯಂ ಬ್ರಹ್ಮಣಿ ಪ್ರವಿಲೀಯತೇ .. 564..
 
ಸೂರ್ಯನ ಬೆಳಕಿನಲ್ಲಿ ಅದಕ್ಕಿಂತ ವಿಭಿನ್ನವಾದ ಕತ್ತಲೆಯು ಹೇಗೆ ಲೀನವಾಗಿ ಹೋಗುವುದೊ, ಹಾಗೆಯೇ ದ್ರಶ್ಯವಸ್ತುವೆಲ್ಲವೂ  ಬ್ರಹ್ಮನಲ್ಲಿ ಲೀನವಾಗುತ್ತವೆ.
 
ಘಟೇ ನಷ್ಟೇ ಯಥಾ ವ್ಯೋಮ ವ್ಯೋಮೈವ ಭವತಿ ಸ್ಫುಟಂ .
ತಥೈವೋಪಾಧಿವಿಲಯೇ ಬ್ರಹ್ಮೈವ ಬ್ರಹ್ಮವಿತ್ಸ್ವಯಂ .. 565..


 
ಗಡಿಗೆಯು ನಾಶವಾದಾಗ ಅದರಲ್ಲಿರುವ ಆಕಾಶವು ಹೇಗೆ ಸ್ಫು ಟವಾಗಿ ಮಹಾಕಾಶವೇ ಆಗುತ್ತದೆಯೊ, ಹಾಗೆಯೇ ಉಪಾಧಿಯು ನಾಶವಾದಾಗ ಬ್ರಹ್ಮಜ್ಞಾನಿಯು ಸ್ವತಃ ಬ್ರಹ್ಮವೇ ಆಗುತ್ತಾನೆ .

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60