ವಿವೇಕ ಚೂಡಾಮಣಿ - 536-545

 ನ ಖಿದ್ಯತೇ ನೋ ವಿಷಯೈಃ ಪ್ರಮೋದತೇ
    ನ ಸಜ್ಜತೇ ನಾಪಿ ವಿರಜ್ಯತೇ ಚ .
ಸ್ವಸ್ಮಿನ್ಸದಾ ಕ್ರೀಡತಿ ನಂದತಿ ಸ್ವಯಂ
    ನಿರಂತರಾನಂದರಸೇನ ತೃಪ್ತಃ .. 536..

 (ವಿಷಯ ವಿಯೋಗದಿಂದ) ದುಃಖಿಸುವುದಿಲ್ಲ, ವಿಷಯಗಳಿಂದ ಸಂತೋಷಪಡುವುದಿಲ್ಲ; (ಸುಖ.ಸಾಧನಗಳಲ್ಲಿ) ಆಸಕ್ತನಾಗುವುದೂ ಇಲ್ಲ, ವಿರಕ್ತನಾಗುವುದೂ ಇಲ್ಲ. ನಿತ್ಯಾನಂದರಸದಿಂದ ತೃಪ್ತನಾಗಿ ಯಾವಾಗಲೂ ತಾನೇ ತನ್ನಲ್ಲಿಯೇ ಕ್ರೀಡಿಸುತ್ತಾನೆ, ಆನಂದಪಡುತ್ತಾನೆ.
 
ಕ್ಷುಧಾಂ ದೇಹವ್ಯಥಾಂ ತ್ಯಕ್ತ್ವಾ ಬಾಲಃ ಕ್ರೀಡತಿ ವಸ್ತುನಿ .
ತಥೈವ ವಿದ್ವಾನ್ ರಮತೇ ನಿರ್ಮಮೋ ನಿರಹಂ ಸುಖೀ .. 537..
 
ಹೇಗೆ ಬಾಲಕನು ಆಟಿಗೆ ಸಿಕ್ಕ ತಕ್ಷಣ, ಹಸಿವನ್ನು ಮತ್ತು ದೇಹ ವ್ಯಥೆಯನ್ನು ಮರೆತು ಆಡತೊಡಗುತ್ತಾನೋ, ಅದೇ ರೀತಿ ವಿದ್ವಾನನು ಮೋಹ, ಅಹಂಗಳನ್ನು ತ್ಯಜಿಸಿ ಆತ್ಮದಲ್ಲಿ ಆನಂದಪೂರ್ವಕ ರಮಿಸುತ್ತಾನೆ.

ಚಿಂತಾಶೂನ್ಯಮದೈನ್ಯಭೈಕ್ಷಮಶನಂ ಪಾನಂ ಸರಿದ್ವಾರಿಷು
ಸ್ವಾತಂತ್ರ್ಯೇಣ ನಿರಂಕುಶಾ ಸ್ಥಿತಿರಭೀರ್ನಿದ್ರಾ ಶ್ಮಶಾನೇ ವನೇ .
ವಸ್ತ್ರಂ ಕ್ಷಾಲನಶೋಷಣಾದಿರಹಿತಂ ದಿಗ್ವಾಸ್ತು ಶಯ್ಯಾ ಮಹೀ
ಸಂಚಾರೋ ನಿಗಮಾಂತವೀಥಿಷು ವಿದಾಂ ಕ್ರೀಡಾ ಪರೇ ಬ್ರಹ್ಮಣಿ .. 538..

ಬ್ರಹ್ಮಜ್ಞಾನಿಗಳು ಯಾವ ಚಿಂತೆಯಾಗಲಿ, ದೈನ್ಯವಾಗಲಿ ಇಲ್ಲದೆ, ಭಿಕ್ಷೆಯಿಂದಲೇ ಊಟಮಾಡುತ್ತಾರೆ; ನದಿಯ ನೀರೇ ಅವರಿಗೆ ಪಾನವಾಗಿದೆ; ಸ್ವತಂತ್ರವಾಗಿಯೂ ನಿರಂಕುಶವಾಗಿಯೂ ಇದ್ದು, ಶ್ಮಶಾನದಲ್ಲಾ ಗಲಿ ಕಾಡಿನಲ್ಲಾಗಲಿ ನಿರ್ಭಯವಾಗಿ ಮಲಗುತ್ತಾರೆ; ಅವರಿಗೆ ದಿಕ್ಕೇ, ಒಗೆಯುವುದು, ಒಣಗಿಸುವುದು ಮೊದಲಾದವಿಲ್ಲದ ವಸ್ತ್ರವಾಗಿದೆ; ನೆಲವೇ ಅವರಿಗೆ ಹಾಸಿಗೆ;ಅವರು ವೇದಾಂತವೆಂಬ ಬೀದಿಗಳಲ್ಲಿ ಸಂಚರಿಸುತ್ತಾರೆ; ಅವರಿಗೆ ಕ್ರೀಡೆಯು ಪರಬ್ರಹ್ಮದಲ್ಲಿಯೇ.
 
ವಿಮಾನಮಾಲಂಬ್ಯ ಶರೀರಮೇತದ್
    ಭುನಕ್ತ್ಯಶೇಷಾನ್ವಿಷಯಾನುಪಸ್ಥಿತಾನ್ .
ಪರೇಚ್ಛಯಾ ಬಾಲವದಾತ್ಮವೇತ್ತಾ
    ಯೋಽವ್ಯಕ್ತಲಿಂಗೋಽನನುಷಕ್ತಬಾಹ್ಯಃ .. 539..

ಯಾವ ಚಿಹ್ನೆಗಳಿಲ್ಲದ, ಬಾಹ್ಯವಿಷಯಗಳಲ್ಲಿ ಆಸಕ್ತನಾಗದ ಆತ್ಮಜ್ಞಾನಿಯು, ಬಾಲಕನಂತೆ, ಈ ಶರೀರವೆಂಬ ವಿಮಾನವನ್ನು ಆಶ್ರಯಿಸಿಕೊಂಡು, ಇತರರ ಅಪೇಕ್ಷೆಯಿಂದ ಒದಗಿದ ವಿಷಯಗಳನ್ನೆಲ್ಲ ಅನುಭವಿಸುತ್ತಾನೆ.

ದಿಗಂಬರೋ ವಾಪಿ ಚ ಸಾಂಬರೋ ವಾ
    ತ್ವಗಂಬರೋ ವಾಪಿ ಚಿದಂಬರಸ್ಥಃ .
ಉನ್ಮತ್ತವದ್ವಾಪಿ ಚ ಬಾಲವದ್ವಾ
    ಪಿಶಾಚವದ್ವಾಪಿ ಚರತ್ಯವನ್ಯಾಂ .. 540..

ಚಿದಂಬರನಾದವನು ಕೆಲವೊಮ್ಮೆ ದಿಗಂಬರನಾಗಿ, ಕೆಲವೊಮ್ಮೆ ವಸ್ತ್ರ ಧರಿಸಿದವನಾಗಿ, ಕೆಲವೊಮ್ಮೆ ನಾರು ಬಟ್ಟೆಯನ್ನು ಧರಿಸದವನಾಗಿ, ಕೆಲವೊಮ್ಮೆ ಉನ್ಮತ್ತನಾಗಿ, ಕೆಲವೊಮ್ಮೆ ಮಗುವಿನಂತಾಗಿ, ಕೆಲವೊಮ್ಮೆ ಪಿಶಾಚಿಯಂತಾಗಿ ಭೂಮಿಯಲ್ಲಿ ಸಂಚರಿಸುತ್ತಾನೆ. 
 
ಕಾಮಾನ್ನಿಷ್ಕಾಮರೂಪೀ ಸಂಶ್ಚರತ್ಯೇಕಚರೋ ಮುನಿಃ .
ಸ್ವಾತ್ಮನೈವ ಸದಾ ತುಷ್ಟಃ ಸ್ವಯಂ ಸರ್ವಾತ್ಮನಾ ಸ್ಥಿತಃ .. 541..

ಏಕಾಂಗಿಯಾಗ ಸಂಚರಿಸುವ ನಿಷ್ಕಾಮರೂಪಿಯಾದ ಹಾಗೂ ತನಗೆ ಬೇಕಾದ ರೂಪ ಧಾರಣೆ ಮಾಡಿ ಸಂಚರಿಸುವ ಮುನಿಯುಮ ತನ್ನ ಆತ್ಮದಿಂದಲೇ ಸದಾ ಸಂತುಷ್ಟನಾದ, ಸ್ವಯಂ ಸರ್ವಾತ್ಮ ಭಾವದಿಂದ ಇರುತ್ತಾನೆ.
 
ಕ್ವಚಿನ್ಮೂಢೋ ವಿದ್ವಾನ್ ಕ್ವಚಿದಪಿ ಮಹಾರಾಜವಿಭವಃ
ಕ್ವಚಿದ್ಭ್ರಾಂತಃ ಸೌಮ್ಯಃ ಕ್ವಚಿದಜಗರಾಚಾರಕಲಿತಃ .
ಕ್ವಚಿತ್ಪಾತ್ರೀಭೂತಃ ಕ್ವಚಿದವಮತಃ ಕ್ವಾಪ್ಯವಿದಿತಃ
ಚರತ್ಯೇವಂ ಪ್ರಾಜ್ಞಃ ಸತತಪರಮಾನಂದಸುಖಿತಃ .. 542..

ಬ್ರಹ್ಮವಿದನು ಕೆಲವು ವೇಳೆ ಮೂಢನಂತೆ, ಕೆಲವೊಮ್ಮೆ ವಿದ್ವಾಂಸನಂತೆ, ಕೆಲವೊಮ್ಮೆ ಮಹಾರಾಜ-ವೈಭವದಿಂದ ಮೆರೆಯುವಂತೆ, ಇನ್ನೊಮ್ಮೆ ಭ್ರಾಂತನಂತೆ, ಮತ್ತೊಂದು ಸಲ ಶಾಂತನಂತೆ, ಕೆಲವು ಸಮಯ ಅಜಗರನಂತೆ ನಿಶ್ಚಲನಾಗಿ, ಮತ್ತೊಮ್ಮೆ ಸಮ್ಮಾನಿತನಾಗಿ, ಕೆಲವು ಸಲ ಅವಮಾನಿತನಾಗಿ, ಎಲ್ಲಿಯೊ ಯಾರಿಗೂ ತಿಳಿಯದಂತೆ ಇರುತ್ತ, ನಿರಂತರವೂ ಪರಮಾನಂದ ಸುಖದಿಂದ  ಹೀಗೆ ಸಂಚರಿಸುತ್ತಾನೆ.
 
ನಿರ್ಧನೋಽಪಿ ಸದಾ ತುಷ್ಟೋಽಪ್ಯಸಹಾಯೋ ಮಹಾಬಲಃ .
ನಿತ್ಯತೃಪ್ತೋಽಪ್ಯಭುಂಜಾನೋಽಪ್ಯಸಮಃ ಸಮದರ್ಶನಃ .. 543..

(ಬ್ರಹ್ಮಜ್ಞಾನಿಯು) ಧನರಹಿತನಾದರೂ ಸದಾ ಸಂತುಷ್ಟನಾಗಿರುತ್ತಾನೆ; ಅಸಹಾಯನಾದರೂ ಮಹಾಬಲನಾಗಿರುತ್ತಾನೆ; ವಿಷಯ ಭೋಗಗಳನ್ನು ಅನುಭವಿಸದಿದ್ದರೂ ನಿತ್ಯತೃಪ್ತನಾಗಿರುತ್ತಾನೆ;  ಅಸಮಾನನಾದರೂ ಸರ್ವರಲ್ಲೂ ಸಮದೃಷ್ಟಿಯುಳ್ಳವನಾಗಿರುತ್ತಾನೆ.
 
ಅಪಿ ಕುರ್ವನ್ನಕುರ್ವಾಣಶ್ಚಾಭೋಕ್ತಾ ಫಲಭೋಗ್ಯಪಿ .
ಶರೀರ್ಯಪ್ಯಶರೀರ್ಯೇಷ ಪರಿಚ್ಛಿನ್ನೋಽಪಿ ಸರ್ವಗಃ .. 544..

ಇವನು ಕೆಲಸ ಮಾಡುತ್ತಿದ್ದರೂ ಕೆಲಸ ಮಾಡುತ್ತಿಲ್ಲ; ಕರ್ಮಫಲವನ್ನನುಭವಿಸುತ್ತಿದ್ದರೂ ಅನುಭವಿಸುತ್ತಿಲ್ಲ; ಶರೀರವುಳ್ಳವನಾಗಿದ್ದರೂ ಶರೀರವಿಲ್ಲದವನು; ಸೀಮಿತನಾಗಿದ್ದರೂ ಸರ್ವವ್ಯಾಪಿಯು.

ಅಶರೀರಂ ಸದಾ ಸಂತಮಿಮಂ ಬ್ರಹ್ಮವಿದಂ ಕ್ವಚಿತ್ .
ಪ್ರಿಯಾಪ್ರಿಯೇ ನ ಸ್ಪೃಶತಸ್ತಥೈವ ಚ ಶುಭಾಶುಭೇ .. 545..

ಯಾವಾಗಲೂ ಶರೀರಾಭಿಮಾನವಿಲ್ಲದೆ ಇರುತ್ತಿರುವ ಈ ಬ್ರಹ್ಮಜ್ಞಾನಿಯನ್ನು ಸುಖದುಃಖಗಳಾಗಲಿ, ಪುಣ್ಯಪಾಪಗಳಾಗಲೀ ಎಂದಿಗೂ ಸೋಂಕುವದಿಲ್ಲ. 

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60