ವಿವೇಕ ಚೂಡಾಮಣಿ - 526-535
ತೂಷ್ಣೀಮವಸ್ಥಾ ಪರಮೋಪಶಾಂತಿಃ
ಬುದ್ಧೇರಸತ್ಕಲ್ಪವಿಕಲ್ಪಹೇತೋಃ .
ಬ್ರಹ್ಮಾತ್ಮನೋ ಬ್ರಹ್ಮವಿದೋ ಮಹಾತ್ಮನೋ
ಯತ್ರಾದ್ವಯಾನಂದಸುಖಂ ನಿರಂತರಂ .. 526..
ಮಿಥ್ಯಾವಿಷಯಗಳ ಕಲ್ಪನೆಗಳಿಗೆ ಕಾರಣವಾದ ಬುದ್ಧಿ , ಯಾರು ಬ್ರಹ್ಮಜ್ಞಾನಿಯೋ, ಬ್ರಹ್ಮಾತ್ಮನೋ, ಮಹಾತ್ಮನೋ ಅವನಲ್ಲಿ ಪರಮ ಶಾಂತವಾಗುತ್ತದೆ. ಅವನಲ್ಲಿ ನಿರಂತರ ಅದ್ವಯ ಆನಂದವಿರುತ್ತದೆ.
ನಾಸ್ತಿ ನಿರ್ವಾಸನಾನ್ಮೌನಾತ್ಪರಂ ಸುಖಕೃದುತ್ತಮಂ .
ವಿಜ್ಞಾತಾತ್ಮಸ್ವರೂಪಸ್ಯ ಸ್ವಾನಂದರಸಪಾಯಿನಃ .. 527..
ಆತ್ಮಸ್ವರೂಪವನ್ನು ಅರಿತು, ಆತ್ಮಾನಂದರಸವನ್ನು ಪಾನ ಮಾಡುತ್ತಿರುವವನಿಗೆ ವಿಷಯ-ವಾಸನಾರಹಿತವಾದ ಮೌನಕ್ಕಿಂತ ಶ್ರೇಷ್ಠವಾದ ಸುಖಕರವಾದದ್ದು ಬೇರೊಂದಿಲ್ಲ.
ಗಚ್ಛಂಸ್ತಿಷ್ಠನ್ನುಪವಿಶಂಛಯಾನೋ ವಾಽನ್ಯಥಾಪಿ ವಾ .
ಯಥೇಚ್ಛಯಾ ವಸೇದ್ವಿದ್ವಾನಾತ್ಮಾರಾಮಃ ಸದಾ ಮುನಿಃ .. 528..
ವಿದ್ವಾಂಸನಾದ, ಆತ್ಮಜ್ಞಾನಿಯಾದ ಮುನಿಯು ನಡೆಯುವಾಗ, ನಿಲ್ಲುವಾಗ, ಕುಳಿತುಕೊಳ್ಳುವಾಗ, ಮಲಗುವಾಗ ಅಥವಾ ಇನ್ಯಾವುದೇ ಸ್ಥಿತಿಯಲ್ಲಿ ಇರುವಾಗಲೂ, ಯಾವಾಗಲೂ ಆತ್ಮಾರಾಮನಾಗಿ (ಆತ್ಮನಲ್ಲಿ ಆನಂದ ಪಡೆದು), ಸುಖದಲ್ಲಿ ಇರುತ್ತಾನೆ.
ನ ದೇಶಕಾಲಾಸನದಿಗ್ಯಮಾದಿ-
ಲಕ್ಷ್ಯಾದ್ಯಪೇಕ್ಷಾಽಪ್ರತಿಬದ್ಧವೃತ್ತೇಃ .
ಸಂಸಿದ್ಧತತ್ತ್ವಸ್ಯ ಮಹಾತ್ಮನೋಽಸ್ತಿ
ಸ್ವವೇದನೇ ಕಾ ನಿಯಮಾದ್ಯವಸ್ಥಾ .. 529..
ಯಾರ ಚಿತ್ತವೃತ್ತಿ ಯಾವಾಗಲೂ ಆತ್ಮಸ್ವರೂಪದಲ್ಲಿ ಸ್ಥಿತವಾಗಿರುವದೇ, ಯಾರಿಗೆ ಆತ್ಮತತ್ವದ ಸಿದ್ಧಿಯಾಗಿದೆಯೋ, ಆ ಮಹಾಪುರುಷನಿಗೆ ದೇಶ, ಕಾಲ, ಸ್ಥಿತಿ, ದಿಕ್ಕು, ಯಮ, ನಿಯಮ, ಲಕ್ಷ್ಯ ಇವು ಯಾವುದರ ಅವಶ್ಯಕತೆಯೂ ಇರುವದಿಲ್ಲ. ತನ್ನನ್ನು ತಾನು ಅರಿಯಲು ಯಾವ ನಿಯಮಗಳು ಯಾಕೆ ಬೇಕು?
ಘಟೋಽಯಮಿತಿ ವಿಜ್ಞಾತುಂ ನಿಯಮಃ ಕೋಽನ್ವಪೇಕ್ಷತೇ .
ವಿನಾ ಪ್ರಮಾಣಸುಷ್ಠುತ್ವಂ ಯಸ್ಮಿನ್ಸತಿ ಪದಾರ್ಥಧೀಃ .. 530..
'ಇದು ಮಡಿಕೆ' ಎಂದು ಅರಿಯಲು ಯಾವದಿದ್ದರೆ ವಸ್ತುವಿನ ಜ್ಞಾನವಾಗುವದೋ, ಆ ಪ್ರಮಾಣ ಸ್ಪಷ್ಟತೆಯ ಹೊರತಾಗಿ ಬೇರೆ ಯಾವ ನಿಯಮ ತಾನೆ ಬೇಕು?
ಅಯಮಾತ್ಮಾ ನಿತ್ಯಸಿದ್ಧಃ ಪ್ರಮಾಣೇ ಸತಿ ಭಾಸತೇ .
ನ ದೇಶಂ ನಾಪಿ ವಾ ಕಾಲಂ ನ ಶುದ್ಧಿಂ ವಾಪ್ಯಪೇಕ್ಷತೇ .. 531..
(ಅದೇ ರೀತಿ) ಆತ್ಮನು ಸ್ವಯಂ ಸಿದ್ಧನು. ಅವನು ಜ್ಷಾನದ ಪ್ರಮಾಣವದಾಗ ಗೋಚರಿಸುತ್ತಾನೆ. ಅವನು ದೇಶ, ಕಾಲ, ಅಥವಾ ಶುದ್ಧಿಯನ್ನು ಆಪೇಕ್ಷಿಸುವದಿಲ್ಲ.
ದೇವದತ್ತೋಽಹಮಿತ್ಯೇತದ್ವಿಜ್ಞಾನಂ ನಿರಪೇಕ್ಷಕಂ .
ತದ್ವದ್ಬ್ರಹ್ಮವಿದೋಽಪ್ಯಸ್ಯ ಬ್ರಹ್ಮಾಹಮಿತಿ ವೇದನಂ .. 532..
(ಉದಾಹರಣೆಗೆ) ನಾನು ದೇವದತ್ತನು ಎನ್ನುವ ಜ್ಞಾನವು ಯಾವುದೇ ನಿಯಮದ ಅಪೇಕ್ಷೆಯಿಲ್ಲದೇ ಆಗುತ್ತದೆ. ಹಾಗೆಯೇ ಬ್ರಹ್ಮಜ್ಞಾನಿಗೆ, ನಾನು ಬ್ರಹ್ಮನು ಎಂಬ ಜ್ಞಾನವು ಸ್ವತಃ ಆಗುತ್ತದೆ.
ಭಾನುನೇವ ಜಗತ್ಸರ್ವಂ ಭಾಸತೇ ಯಸ್ಯ ತೇಜಸಾ .
ಅನಾತ್ಮಕಮಸತ್ತುಚ್ಛಂ ಕಿಂ ನು ತಸ್ಯಾವಭಾಸಕಂ .. 533..
ಸೂರ್ಯನಿಂದ ಸರ್ವ ಜಗತ್ತು ಬೆಳಗುವ ಹಾಗೆ, ಸಮಸ್ತ ಅಸತ್ ಮತ್ತು ತುಚ್ಛ ವಸ್ತುಗಳೆಲ್ಲವೂ ಬೆಳಗುವಂತೆ ಮಾಡುವ ಶಕ್ತಿ ಬೇರೆ ಇನ್ಯಾವುದು ತಾನೇ ಇದ್ದೀತು?
ವೇದಶಾಸ್ತ್ರಪುರಾಣಾನಿ ಭೂತಾನಿ ಸಕಲಾನ್ಯಪಿ .
ಯೇನಾರ್ಥವಂತಿ ತಂ ಕಿನ್ನು ವಿಜ್ಞಾತಾರಂ ಪ್ರಕಾಶಯೇತ್ .. 534..
ವೇದಶಾಸ್ತ್ರ ಪುರಾಣಗಳು, ಸಕಲ ಭೂತಗಳು ಯಾವುದರಿಂದ ಅರ್ಥವತ್ತಾಗುವದೋ, ಆ ಸರ್ವಸಾಕ್ಷಿ ಪರಮಾತ್ಮನನ್ನು ಯಾವುದು ತಾನೆ ಪ್ರಕಾಶಿಸೀತು?
ಏಷ ಸ್ವಯಂಜ್ಯೋತಿರನಂತಶಕ್ತಿಃ
ಆತ್ಮಾಽಪ್ರಮೇಯಃ ಸಕಲಾನುಭೂತಿಃ .
ಯಮೇವ ವಿಜ್ಞಾಯ ವಿಮುಕ್ತಬಂಧೋ
ಜಯತ್ಯಯಂ ಬ್ರಹ್ಮವಿದುತ್ತಮೋತ್ತಮಃ .. 535..
ಈ ಆತ್ಮನು ಅಪ್ರಮೇಯನು, ಸ್ವಯಂಪ್ರಕಾಶನು, ಅನಂತಶಕ್ತಿಯುಳ್ಳವನು, ಅನುಭವಕ್ಕೆ ಗೋಚರನಾದವನು; ಅವನನ್ನೇ ಅರಿತುಕೊಂಡವನು ಸಂಸಾರಬಂಧದಿಂದ ಮುಕ್ತನಾಗಿ ಬ್ರಹ್ಮವಿದರಲ್ಲಿ (ಬ್ರಹ್ಮನನ್ನು ಅರಿತವರಲ್ಲಿ) ಸರ್ವೋತ್ತಮನಾಗಿ ಸರ್ವೋತ್ಕೃಷ್ಟ ನಾಗಿರುತ್ತಾನೆ.
Comments