ವಿವೇಕ ಚೂಡಾಮಣಿ - 516-525
ಸರ್ವಾತ್ಮಕೋಽಹಂ ಸರ್ವೋಽಹಂ ಸರ್ವಾತೀತೋಽಹಮದ್ವಯಃ .
ಕೇವಲಾಖಂಡಬೋಧೋಽಹಮಾನಂದೋಽಹಂ ನಿರಂತರಃ .. 516..
ಎಲ್ಲರ ಆತ್ಮ ನಾನು, ಎಲ್ಲವೂ ನಾನು, ಸರ್ವಾತೀತ ನಾನು, ಅದ್ವಿತೀಯ ನಾನು, ಕೇವಲನು ನಾನು, ಅಖಂಡಜ್ಞಾನ ಆನಂದನ ನಾನು, ನಿರಂತರನು ನಾನು.
ಸ್ವಾರಾಜ್ಯಸಾಮ್ರಾಜ್ಯವಿಭೂತಿರೇಷಾ
ಭವತ್ಕೃಪಾಶ್ರೀಮಹಿಮಪ್ರಸಾದಾತ್ .
ಪ್ರಾಪ್ತಾ ಮಯಾ ಶ್ರೀಗುರವೇ ಮಹಾತ್ಮನೇ
ನಮೋ ನಮಸ್ತೇಽಸ್ತು ಪುನರ್ನಮೋಽಸ್ತು .. 517..
ನಿಮ್ಮ ಕೃಪೆಯ ಪ್ರಸಾದದಿಂದ ಈ ಆತ್ಮ ಸಾಮ್ರಾಜ್ಯದ ವೈಭವವು ನನಗೆ ಪ್ರಾಪ್ತವಾಯಿತು. ಮಹಾತ್ಮನಾದ ಗುರುವೇ, ನಿನಗೆ ಪುನಃ ಪುನಃ ನಮಸ್ಕಾರಗಳು. (*)
ಮಹಾಸ್ವಪ್ನೇ ಮಾಯಾಕೃತಜನಿಜರಾಮೃತ್ಯುಗಹನೇ
ಭ್ರಮಂತಂ ಕ್ಲಿಶ್ಯಂತಂ ಬಹುಲತರತಾಪೈರನುದಿನಂ .
ಅಹಂಕಾರವ್ಯಾಘ್ರವ್ಯಥಿತಮಿಮಮತ್ಯಂತಕೃಪಯಾ
ಪ್ರಬೋಧ್ಯ ಪ್ರಸ್ವಾಪಾತ್ಪರಮವಿತವಾನ್ಮಾಮಸಿ ಗುರೋ .. 518..
ಹೇ ಗುರುವೇ, ಮಹಾಸ್ವಪ್ನದಂತಿರುವ, ಮಾಯಾಕೃತವಾದ ಹುಟ್ಟು, ಮುಪ್ಪು, ಸಾವುಗಳೆಂಬ ಕಾಡಿನಲ್ಲಿ ಅಲೆಯುತ್ತಿರುವ, ಬಗೆಬಗೆಯ ತಾಪಗಳಿಂದ ಪ್ರತಿದಿನವೂ ಕ್ಲೇಶಪಡುತ್ತಿರುವ, ಅಹಂಕಾರವೆಂಬ ಹುಲಿಯಿಂದ ವ್ಯಥೆಪಡುತ್ತಿರುವ ಈ ನನ್ನನ್ನು ಅಪಾರಕೃಪೆಯಿಂದ ನಿದ್ರೆಯಿಂದ(ಅವಿದ್ಯೆಯ ನಿದ್ರೆಯಿಂದ) ಎಬ್ಬಿಸಿ ಸಂಪೂರ್ಣವಾಗಿ ಕಾಪಾಡಿರುವೆ!
ನಮಸ್ತಸ್ಮೈ ಸದೈಕಸ್ಮೈ ಕಸ್ಮೈಚಿನ್ಮಹಸೇ ನಮಃ .
ಯದೇತದ್ವಿಶ್ವರೂಪೇಣ ರಾಜತೇ ಗುರುರಾಜ ತೇ .. 519..
ಹೇ ಗುರುರಾಜನೆ, ವಿಶ್ವರೂಪದಿಂದ ಪ್ರಕಾಶಿಸುತ್ತಿರುವ, ತೇಜಃಸ್ವರೂಪನಾದ,ಯಾವಾಗಲೂ ಏಕರೂಪನಾದ, ಮನೋವಾಕ್ಕುಗಳಿಗೆ ಅಗೋಚರನಾದ ನಿನಗೆ ಪುನಃ ಪುನಃ ನಮಸ್ಕಾರ.
ಇತಿ ನತಮವಲೋಕ್ಯ ಶಿಷ್ಯವರ್ಯಂ
ಸಮಧಿಗತಾತ್ಮಸುಖಂ ಪ್ರಬುದ್ಧತತ್ತ್ವಂ .
ಪ್ರಮುದಿತಹೃದಯಃ ಸ ದೇಶಿಕೇಂದ್ರಃ
ಪುನರಿದಮಾಹ ವಚಃ ಪರಂ ಮಹಾತ್ಮಾ .. 520..
ಹೀಗೆ ಆತ್ಮಾನಂದವನ್ನು ಸಾಕ್ಸಾತ್ಕರಿಸಿಕೊಂಡು, ತತ್ತ್ವವನ್ನರಿತುಕೊಂಡು ನಮಸ್ಕರಿಸಿದ ಶಿಷ್ಯವರ್ಯನನ್ನು ನೋಡಿ, ಸಂತೋಷಹೃದಯನೂ, ಶ್ರೇಷ್ಠಮಹಾತ್ಮನೂ ಆದ ಆ ಆಚಾರ್ಯವರ್ಯನು ಪುನಃ ಈ ಮಾತನ್ನು ಹೇಳುತ್ತಾನೆ.
ಬ್ರಹ್ಮಪ್ರತ್ಯಯಸಂತತಿರ್ಜಗದತೋ ಬ್ರಹ್ಮೈವ ಸತ್ಸರ್ವತಃ
ಪಶ್ಯಾಧ್ಯಾತ್ಮದೃಶಾ ಪ್ರಶಾಂತಮನಸಾ ಸರ್ವಾಸ್ವವಸ್ಥಾಸ್ವಪಿ .
ರೂಪಾದನ್ಯದವೇಕ್ಷಿತಂ ಕಿಮಭಿತಶ್ಚಕ್ಷುಷ್ಮತಾಂ ದೃಶ್ಯತೇ
ತದ್ವದ್ಬ್ರಹ್ಮವಿದಃ ಸತಃ ಕಿಮಪರಂ ಬುದ್ಧೇರ್ವಿಹಾರಾಸ್ಪದಂ .. 521..
ಈ ಜಗತ್ತು ಬ್ರಹ್ಮಪ್ರತೀತಿಯ ಪ್ರವಾಹವಾಗಿದೆ. ಹಾಗಾಗಿ ಇದು ಎಲ್ಲ ಕಡೆಯೂ ಬ್ರಹ್ಮವೇ ಆಗಿದೆ. ಪ್ರಶಾಂತ ಮನಸ್ಸಿನಿಂದ, ಆಧ್ಯಾತ್ಮ ದೃಷ್ಟಿಯಿಂದ ಎಲ್ಲ ಅವಸ್ಥೆಗಳಲ್ಲೂ ಬ್ರಹ್ಮನನ್ನೇ ನೋಡು. ಕಣ್ಣಿರುವವರಿಗೆ ಸುತ್ತಮುತ್ತ ಬೇರೆ ಬೇರೆ ರೂಪವನ್ನು ಬಿಟ್ಟು ಬೇರೇನು ಕಾಣುತ್ತದೆ? ಹಾಗೆಯೇ ಬ್ರಹ್ಮಜ್ಞಾನಿಗೆ ಬುದ್ಧಿಯನ್ನು ಉಪಯೋಗಿಸಲು ಬ್ರಹ್ಮನನ್ನು ಹೊರತು ಇನ್ನೇನಿದೆ?
ಕಸ್ತಾಂ ಪರಾನಂದರಸಾನುಭೂತಿ-
ಮೃತ್ಸೃಜ್ಯ ಶೂನ್ಯೇಷು ರಮೇತ ವಿದ್ವಾನ್ .
ಚಂದ್ರೇ ಮಹಾಹ್ಲಾದಿನಿ ದೀಪ್ಯಮಾನೇ
ಚಿತ್ರೇಂದುಮಾಲೋಕಯಿತುಂ ಕ ಇಚ್ಛೇತ್ .. 522..
ಆ (ಬ್ರಹ್ಮಜ್ಞಾನದ ) ಪರಮಾನಂದದ ಅನುಭವವನ್ನು ಬಿಟ್ಟು, ನೀರಸವಾದ ವಿಷಯಗಳಲ್ಲಿ ಯಾವ ವಿದ್ವಾಂಸನು ತಾನೇ ರಮಿಸಿಯಾನು? ಮಹಾಹ್ಲಾದವನ್ನುಂಟುಮಾಡುವ ಚಂದ್ರನು ಪ್ರಕಾಶಿಸುತ್ತಿರುವಾಗ ಯಾವನು ತಾನೇ ಚಿತ್ರದಲ್ಲಿರುವ ಚಂದ್ರನನ್ನು ನೋಡುವುದಕ್ಕೆ ಬಯಸುತ್ತಾನೆ?
ಅಸತ್ಪದಾರ್ಥಾನುಭವೇನ ಕಿಂಚಿ-
ನ್ನ ಹ್ಯಸ್ತಿ ತೃಪ್ತಿರ್ನ ಚ ದುಃಖಹಾನಿಃ .
ತದದ್ವಯಾನಂದರಸಾನುಭೂತ್ಯಾ
ತೃಪ್ತಃ ಸುಖಂ ತಿಷ್ಠ ಸದಾತ್ಮನಿಷ್ಠಯಾ .. 523..
ಮಿಥ್ಯಾವಸ್ತುಗಳ ಅನುಭವದಿಂದ ಸ್ವಲ್ಪವೂ ತೃಪ್ತಿಯಾಗುವದಿಲ್ಲ. ದುಃಖದ ನಿವೃತ್ತಿಯೂ ಆಗುವದಿಲ್ಲ. ಆದುದರಿಂದ ಈ ಅದ್ವಯಾನಂದದ ರಸಾನುಭೂತಿಯಿಂದ ತೃಪ್ತನಾಗಿ, ಆತ್ಮನಿಷ್ಠೆಯ ಭಾವದಿಂದ ಸದಾ ಸುಖದಿಂದಿರು.
ಸ್ವಮೇವ ಸರ್ವಥಾ ಪಶ್ಯನ್ಮನ್ಯಮಾನಃ ಸ್ವಮದ್ವಯಂ .
ಸ್ವಾನಂದಮನುಭುಂಜಾನಃ ಕಾಲಂ ನಯ ಮಹಾಮತೇ .. 524..
ಎಲೈ ಮಹಾಮತಿಯೆ, ಎಲ್ಲ ಪ್ರಕಾರದಿಂದಲೂ ಸ್ವಾತ್ಮನನ್ನೇ ನೋಡುತ್ತ, ಅದ್ವಯನಾದ ಆತ್ಮನನ್ನೆ ಮನನ ಮಾಡುತ್ತ, ಸ್ವಾತ್ಮಾನಂದವನ್ನು ಅನುಭವಿಸುತ್ತ ಕಾಲವನ್ನು ಕಳೆ.
ಅಖಂಡಬೋಧಾತ್ಮನಿ ನಿರ್ವಿಕಲ್ಪೇ
ವಿಕಲ್ಪನಂ ವ್ಯೋಮ್ನಿ ಪುರಪ್ರಕಲ್ಪನಂ .
ತದದ್ವಯಾನಂದಮಯಾತ್ಮನಾ ಸದಾ
ಶಾಂತಿಂ ಪರಾಮೇತ್ಯ ಭಜಸ್ವ ಮೌನಂ .. 525..
ನಿರ್ವಿಕಲ್ಪನಾದ ಅಖಂಡಜ್ಞಾನಾತ್ಮನಲ್ಲಿ ವಿವಿಧಕಲ್ಪನೆಗಳನ್ನು ಮಾಡುವದು, ಆಕಾಶದಲ್ಲಿ ನಗರವನ್ನು ಕಲ್ಪನೆ ಮಾಡಿದಂತೆ. ಆದುದರಿಂದ ಅದ್ವಯಾನಂದ ಸ್ವರೂಪದಿಂದ ಯಾವಾಗಲೂ ಪರಮಶಾಂತಿಯನ್ನು ಹೊಂದಿ ಮೌನವಾಗಿರು.
Comments