ವಿವೇಕ ಚೂಡಾಮಣಿ - 481 - 490

 ಬುದ್ಧಿರ್ವಿನಷ್ಟಾ ಗಲಿತಾ ಪ್ರವೃತ್ತಿಃ
    ಬ್ರಹ್ಮಾತ್ಮನೋರೇಕತಯಾಽಧಿಗತ್ಯಾ .
ಇದಂ ನ ಜಾನೇಽಪ್ಯನಿದಂ ನ ಜಾನೇ
    ಕಿಂ ವಾ ಕಿಯದ್ವಾ ಸುಖಮಸ್ತ್ಯಪಾರಂ .. 481.. 
 
ಬ್ರಹ್ಮ ಮತ್ತು ಆತ್ಮಗಳ ಏಕತೆಯನ್ನು ಅರಿತಮೇಲೆ ನನ್ನ  ಬುದ್ಧಿ  ಮಾಯವಾಯಿತು. ವಿಷಯಗಳಲ್ಲಿ ನನ್ನ ಪ್ರವೃತ್ತಿ ನಾಶವಾಯಿತು. ನನಗೆ ಪ್ರತ್ಯಕ್ಷ ವಸ್ತುವಿನ ಜ್ಞಾನವೂ ಇಲ್ಲ.  ಅಪ್ರತ್ಯಕ್ಷ ವಸ್ತುವಿನ ಜ್ಞಾನವೂ ಇಲ್ಲ. ಈ ಅಪಾರ ಆನಂದ ಯಾವುದು ಅಥವಾ ಎಷ್ಟು ಎಂದು ನನಗೆ ತಿಳಿಯದು.
 
ವಾಚಾ ವಕ್ತುಮಶಕ್ಯಮೇವ ಮನಸಾ ಮಂತುಂ ನ ವಾ ಶಕ್ಯತೇ
ಸ್ವಾನಂದಾಮೃತಪೂರಪೂರಿತಪರಬ್ರಹ್ಮಾಂಬುಧೇರ್ವೈಭವಂ .
ಅಂಭೋರಾಶಿವಿಶೀರ್ಣವಾರ್ಷಿಕಶಿಲಾಭಾವಂ ಭಜನ್ಮೇ ಮನೋ
ಯಸ್ಯಾಂಶಾಂಶಲವೇ ವಿಲೀನಮಧುನಾಽಽನಂದಾತ್ಮನಾ ನಿರ್ವೃತಂ .. 482..

 
ಸಮುದ್ರದಲ್ಲಿ  ಬಿದ್ದು ಲಯವಾದ ಆಲಿಕಲ್ಲಿನಂತೆ, ನನ್ನ ಮನಸ್ಸು ಯಾವ ಸಮುದ್ರದ ಅಂಶದ ಅಲ್ಪಭಾಗದಲ್ಲಿ ಲಯವಾಗಿ, ಆನಂದ ಸ್ವರೂಪದಿಂದ ಸುಖವನ್ನು ಪಡೆಯಿತೊ, ಅಂಥ ಆತ್ಮಾನಂದವೆಂಬ, ಅಮೃತ ಪ್ರವಾಹದಿಂದ ತುಂಬಿರುವ ಪರಬ್ರಹ್ಮವೆಂಬ, ಸಮುದ್ರದ ವೈಭವವನ್ನು ಮಾತಿನಿಂದ ಹೇಳುವುದಕ್ಕೆ ಸಾಧ್ಯವಿಲ್ಲ, ಮನಸ್ಸಿನಲ್ಲಿ ಮನನ ಮಾಡಲೂ ಸಾಧ್ಯವಿಲ್ಲ. 
 
ಕ್ವ ಗತಂ ಕೇನ ವಾ ನೀತಂ ಕುತ್ರ ಲೀನಮಿದಂ ಜಗತ್ .
ಅಧುನೈವ ಮಯಾ ದೃಷ್ಟಂ ನಾಸ್ತಿ ಕಿಂ ಮಹದದ್ಭುತಂ .. 483..

ಎಲ್ಲಿ ಹೋಯಿತು ಈ ಜಗತ್ತು, ಯಾರಿಂದ ಒಯ್ಯಲ್ಪಟ್ಟಿತು? ಎಲ್ಲಿ ಲೀನವಾಯಿತು? ಮಹದಾಶ್ಚರ್ಯ - ಈಗ ತಾನೇ ನಾನು ನೋಡಿದ ಜಗತ್ತು  ಈಗ ಇಲ್ಲವಲ್ಲ.      
 
ಕಿಂ ಹೇಯಂ ಕಿಮುಪಾದೇಯಂ ಕಿಮನ್ಯತ್ಕಿಂ ವಿಲಕ್ಷಣಂ .
ಅಖಂಡಾನಂದಪೀಯೂಷಪೂರ್ಣೇ ಬ್ರಹ್ಮಮಹಾರ್ಣವೇ .. 484..

 
ಅಖಂಡವಾದ ಆನಂದಾಮೃತದಿಂದ ತುಂಬಿರುವ ಬ್ರಹ್ಮನೆಂಬ ಈ ಮಹಾಸಮುದ್ರದಲ್ಲಿ ಬಿಡತಕ್ಕದ್ದು ಯಾವುದು? ಗೃಹಿಸತಕ್ಕದ್ದು ಯಾವುದು?  ಯಾವುದು ಅನ್ಯ,, ಯಾವುದು ವಿಲಕ್ಷಣ ?

ನ ಕಿಂಚಿದತ್ರ ಪಶ್ಯಾಮಿ ನ ಶೃಣೋಮಿ ನ ವೇದ್ಮ್ಯಹಂ .
ಸ್ವಾತ್ಮನೈವ ಸದಾನಂದರೂಪೇಣಾಸ್ಮಿ ವಿಲಕ್ಷಣಃ .. 485..
 
ನನಗೆ ಏನೂ ಕಾಣಿಸುತ್ತಿಲ್ಲ. ಏನೂ ಕೇಳಿಸುತ್ತಿಲ್ಲ. ಏನೂ ತಿಳಿಯುತ್ತಿಲ್ಲ. ನಿತ್ಯಾನಂದಸ್ವರೂಪ ಆತ್ಮನಲ್ಲಿ ಸ್ಥಿತನಾಗಿ ವಿಲಕ್ಷಣನಾಗಿದ್ದೇನೆ. 
 
ನಮೋ ನಮಸ್ತೇ ಗುರವೇ ಮಹಾತ್ಮನೇ
    ವಿಮುಕ್ತಸಂಗಾಯ ಸದುತ್ತಮಾಯ .
ನಿತ್ಯಾದ್ವಯಾನಂದರಸಸ್ವರೂಪಿಣೇ
    ಭೂಮ್ನೇ ಸದಾಽಪಾರದಯಾಂಬುಧಾಮ್ನೇ .. 486..

ಮಹಾತ್ಮನೂ, ಸಂಗರಹಿತನೂ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ, ನಿತ್ಯಾದ್ವಯಾನಂದ ರಸಸ್ವರೂಪನೂ, ಅಪಾರ ದಯಾಸಮುದ್ರನೂ ಆದ ಗುರುವೆ,  ನಿನಗೆ ಪುನಃಪುನಃ ನಮಸ್ಕಾರಗಳು.
 
ಯತ್ಕಟಾಕ್ಷಶಶಿಸಾಂದ್ರಚಂದ್ರಿಕಾ-
    ಪಾತಧೂತಭವತಾಪಜಶ್ರಮಃ .
ಪ್ರಾಪ್ತವಾನಹಮಖಂಡವೈಭವಾ-
    ನಂದಮಾತ್ಮಪದಮಕ್ಷಯಂ ಕ್ಷಣಾತ್ .. 487..

 
ಯಾರ ಕಡೆಗಣ್ಣಿನ ನೋಟವೆಂಬ ದಟ್ಟವಾದ ಬೆಳದಿಂಗಳಿನ ಪ್ರಸರಣದ ಮೂಲಕ, ಸಂಸಾರಕ್ಲೇಶದಿಂದ ಉಂಟಾದ  ಶ್ರಮವನ್ನು ಹೋಗಲಾಡಿಸಿಕೊಂಡ ನಾನು, ಅಕ್ಷಯವೂ, ಅಖಂಡ ವೈಭವಾನಂದವೂ ಆದ ಪರಮಪದವನ್ನು ಕ್ಷಣಮಾತ್ರದಲ್ಲಿ ಹೊಂದಿದೆನೋ ಅಂಥ ಗುರುವಿಗೆ ನಮಸ್ಕಾರ.
 
ಧನ್ಯೋಽಹಂ ಕೃತಕೃತ್ಯೋಽಹಂ ವಿಮುಕ್ತೋಽಹಂ ಭವಗ್ರಹಾತ್ .
ನಿತ್ಯಾನಂದಸ್ವರೂಪೋಽಹಂ ಪೂರ್ಣೋಽಹಂ ತ್ವದನುಗ್ರಹಾತ್ .. 488..

 
ನಿಮ್ಮ ಅನುಗ್ರಹದಿಂದ ನಾನು ಧನ್ಯನೂ, ಕೃತಕೃತ್ಯನೂ ಆದೆನು, ಸಂಸಾರಬಂಧದಿಂದ ವಿಮುಕ್ತನಾದೆನು; ಮತ್ತು ನಿತ್ಯಾನಂದಸ್ವರೂಪನೂ, ಪರಿಪೂರ್ಣನೂ. (ಆದೆನು)
 
ಅಸಂಗೋಽಹಮನಂಗೋಽಹಮಲಿಂಗೋಽಹಮಭಂಗುರಃ .
ಪ್ರಶಾಂತೋಽಹಮನಂತೋಽಹಮಮಲೋಽಹಂ ಚಿರಂತನಃ .. 489.. 
 
ನಾನು ಸಂಗರಹಿತನೂ, ಸ್ಥೂಲ, ಸೂಕ್ಷ್ಮ ಶರೀರ-ರಹಿತನೂ, ನಾಶರಹಿತನೂ, ಪ್ರಶಾಂತನೂ, ಅನಂತನೂ, ಶುದ್ದನೂ, ಸನಾತನನು.
 
ಅಕರ್ತಾಹಮಭೋಕ್ತಾಹಮವಿಕಾರೋಽಹಮಕ್ರಿಯಃ .
ಶುದ್ಧಬೋಧಸ್ವರೂಪೋಽಹಂ ಕೇವಲೋಽಹಂ ಸದಾಶಿವಃ .. 490..
 
ನಾನು ಕರ್ತೃವಲ್ಲ, ಭೋಕ್ತೃವಲ್ಲ. ನಾನು ನಿರ್ವಿಕಾರನೂ, ಕ್ರಿಯಾಶೂನ್ಯನೂ, ಶುದ್ಧ ಜ್ಞಾನಸ್ವರೂಪನೂ, ನಿತ್ಯ ಕಲ್ಯಾಣರೂಪನೂ ಮತ್ತು ಕೇವಲನು.
 


Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60