ವಿವೇಕ ಚೂಡಾಮಣಿ - 426- 450
ಜೀವನ್ಮುಕ್ತನ ಲಕ್ಷಣಗಳು
ಸ್ಥಿತಪ್ರಜ್ಞೋ ಯತಿರಯಂ ಯಃ ಸದಾನಂದಮಶ್ನುತೇ .
ಬ್ರಹ್ಮಣ್ಯೇವ ವಿಲೀನಾತ್ಮಾ ನಿರ್ವಿಕಾರೋ ವಿನಿಷ್ಕ್ರಿಯಃ .. 426..
ಬ್ರಹ್ಮಾತ್ಮನೋಃ ಶೋಧಿತಯೋರೇಕಭಾವಾವಗಾಹಿನೀ .
ನಿರ್ವಿಕಲ್ಪಾ ಚ ಚಿನ್ಮಾತ್ರಾ ವೃತ್ತಿಃ ಪ್ರಜ್ಞೇತಿ ಕಥ್ಯತೇ .
ಸುಸ್ಥಿತಾಽಸೌ ಭವೇದ್ಯಸ್ಯ ಸ್ಥಿತಪ್ರಜ್ಞಃ ಸ ಉಚ್ಯತೇ .. 427..
(ತತ್ವಮಸಿ ಎಂಬ ಮಹಾವಾಕ್ಯದಿಂದ) ಪರಮಾತ್ಮ ಜೀವಾತ್ಮ ಇವರನ್ನು ಐಕ್ಯಭಾವವನ್ನು ಗ್ರಹಿಸುವ, ದ್ವಂದ್ವವಿಲ್ಲದ, ಜ್ಞಾನದಲ್ಲಿ ಮಾತ್ರ ಆಸಕ್ತಿಯಿರಿಸಿದ ವೃತ್ತಿಯನ್ನು ಪ್ರಜ್ಞೆ ಎನ್ನುತ್ತಾರೆ. ಯಾರಲ್ಲಿ ಈ ಪ್ರಜ್ಞೆಯು ಸ್ಥಿರವಾಗಿರುವುದೊ ಅವನು ಸ್ಥಿತಪ್ರಜ್ಞನು ಎನಿಸಿಕೊಳ್ಳುತ್ತಾನೆ.
ಯಸ್ಯ ಸ್ಥಿತಾ ಭವೇತ್ಪ್ರಜ್ಞಾ ಯಸ್ಯಾನಂದೋ ನಿರಂತರಃ .
ಪ್ರಪಂಚೋ ವಿಸ್ಮೃತಪ್ರಾಯಃ ಸ ಜೀವನ್ಮುಕ್ತ ಇಷ್ಯತೇ .. 428..
ಯಾರ ಪ್ರಜ್ಞೆಯು ಸ್ಥಿರವಾಗಿರುವದೋ, ಯಾರ ಆನಂದ ನಿರಂತರವಾಗಿರುವದೋ, ಯಾರಿಗೆ ಬಾಹ್ಯ ಪ್ರಪಂಚ ಮರೆತು ಹೋಗಿರುವದೋ, ಅವನನ್ನು ಜೀವನ್ಮುಕ್ತ ಎನ್ನುತ್ತಾರೆ.
ಲೀನಧೀರಪಿ ಜಾಗರ್ತಿ ಜಾಗ್ರದ್ಧರ್ಮವಿವರ್ಜಿತಃ .
ಬೋಧೋ ನಿರ್ವಾಸನೋ ಯಸ್ಯ ಸ ಜೀವನ್ಮುಕ್ತ ಇಷ್ಯತೇ .. 429..
ಯಾರು ತನ್ನ ವೃತ್ತಿ(ಪರಮಾತ್ಮನಲ್ಲಿ) ಲೀನವಾಗಿದ್ದರೂ ಜಾಗ್ರತನಾಗಿರುತ್ತಾನೋ, ಆದರೆ ಜಾಗ್ರತಾವಸ್ಥೆಯ ಲಕ್ಷಣಗಳಿಲ್ಲದವನೋ, ಯಾರ ಜ್ಞಾನವು ವಿಷಯ-ವಾಸನಾರಹಿತವಾಗಿರುವುದೋ, ಅವನನ್ನು ಜೀವನ್ಮುಕ್ತ ಎನ್ನುತ್ತಾರೆ
ಶಾಂತಸಂಸಾರಕಲನಃ ಕಲಾವಾನಪಿ ನಿಷ್ಕಲಃ .
ಯಃ ಸಚಿತ್ತೋಽಪಿ ನಿಶ್ಚಿತ್ತಃ ಸ ಜೀವನ್ಮುಕ್ತ ಇಷ್ಯತೇ .. 430..
ಯಾರು ಸಂಸಾರದ ಚಿಂತೆಯನ್ನೆಲ್ಲ ತ್ಯಜಿಸಿರುವನೋ, ಯಾರು ಅಂಗಾಂಗವಯಳ್ಳವನಾಗಿದ್ದರೂ ಅವಯವರಹಿತನಂತಿರುವನೊ, ಯಾರು ಚಿತ್ತವುಳ್ಳವನಾಗಿದ್ದರೂ ಚಿತ್ತನಿಲ್ಲದವನಂತಿರುವನೊ, ಅವನು ಜೀವನ್ಮುಕ್ತನು ಎನಿಸುವನು.
ವರ್ತಮಾನೇಽಪಿ ದೇಹೇಽಸ್ಮಿಂಛಾಯಾವದನುವರ್ತಿನಿ .
ಅಹಂತಾಮಮತಾಽಭಾವೋ ಜೀವನ್ಮುಕ್ತಸ್ಯ ಲಕ್ಷಣಂ .. 431..
ನೆರಳಿನಂತೆ ಅನುಸರಿಸಿಕೊಂಡಿರುವ ದೇಹದಲ್ಲಿ ಇದ್ದರೂ, ಅಹಂಕಾರ, ಮಮಕಾರ ಇತ್ಯಾದಿಗಳು ಇಲ್ಲದಿರುವದು ಜೀವನ್ಮುಕ್ತನ ಲಕ್ಷಣವು.
ಅತೀತಾನನುಸಂಧಾನಂ ಭವಿಷ್ಯದವಿಚಾರಣಂ .
ಔದಾಸೀನ್ಯಮಪಿ ಪ್ರಾಪ್ತೇ ಜೀವನ್ಮುಕ್ತಸ್ಯ ಲಕ್ಷಣಂ .. 432..
ಅತೀತವನ್ನು (ಕಳೆದುಹೋಗಿದ್ದನ್ನು, ಭೂತಕಾಲವನ್ನು) ಸ್ಮರಿಸಿಕೊಳ್ಳದಿರುವದು, ಮತ್ತು ಭವಿಷ್ಯದ ಬಗ್ಗೆ ಯೋಚಿಸದಿರವದು, ವರ್ತಮಾನದಲ್ಲಿ ಪ್ರಾಪ್ತವಾಗುವ ಸುಖ-ದುಃಖಗಳಲ್ಲೂ ಉದಾಸೀನತೆ, ಇವು ಜೀವನ್ಮುಕ್ತನ ಲಕ್ಷಣಗಳು.
ಗುಣದೋಷವಿಶಿಷ್ಟೇಽಸ್ಮಿನ್ ಸ್ವಭಾವೇನ ವಿಲಕ್ಷಣೇ .
ಸರ್ವತ್ರ ಸಮದರ್ಶಿತ್ವಂ ಜೀವನ್ಮುಕ್ತಸ್ಯ ಲಕ್ಷಣಂ .. 433..
ಗುಣದೋಷಗಳಿಂದ ಕೂಡಿ, ಸ್ವಭಾವದಿಂದ ಬೇರೆ-ಬೇರೆಯಾಗಿರುವ ಈ ಜಗತ್ತಿನಲ್ಲಿ, ಎಲ್ಲೆಲ್ಲಿಯೂ ಸಮಾನದೃಷ್ಟಿಯಿಂದ ನೋಡುವುದು ಜೀವನ್ಮುಕ್ತನ ಲಕ್ಷಣವು.
ಇಷ್ಟಾನಿಷ್ಟಾರ್ಥಸಂಪ್ರಾಪ್ತೌ ಸಮದರ್ಶಿತಯಾಽಽತ್ಮನಿ .
ಉಭಯತ್ರಾವಿಕಾರಿತ್ವಂ ಜೀವನ್ಮುಕ್ತಸ್ಯ ಲಕ್ಷಣಂ .. 434..
ಇಷ್ಟವಾದ ಅಥವಾ ಅನಿಷ್ಟ ವಾದ ವಿಷಯಗಳು ಪ್ರಾಪ್ತವಾದಾಗ, ಸಮದೃಷ್ಟಿಯಿಂದ ಈ ಎರಡರ ವಿಷಯವಾಗಿಯೂ ವಿಚಲಿತನಾಗದೇ, ಸ್ಥಿತಪ್ರಜ್ಞನಾಗಿರುವದು ಜೀವನ್ಮುಕ್ತನ ಲಕ್ಷಣವು.
ಬ್ರಹ್ಮಾನಂದರಸಾಸ್ವಾದಾಸಕ್ತಚಿತ್ತತಯಾ ಯತೇಃ .
ಅಂತರ್ಬಹಿರವಿಜ್ಞಾನಂ ಜೀವನ್ಮುಕ್ತಸ್ಯ ಲಕ್ಷಣಂ .. 435..
ಬ್ರಹ್ಮಾನಂದರಸವನ್ನು ಆಸ್ವಾದಿಸುವದರಲ್ಲಿ ಚಿತ್ತವು ಆಸಕ್ತವಾಗಿರುವುದರಿಂದ, ಅಂತರ್ ಮತ್ತು ಬಾಹ್ಯ ಅರಿವು ಇಲ್ಲದಿರುವದು, ಜೀವನ್ಮುಕ್ತ ಯತಿಯ ಲಕ್ಷಣವು.
ದೇಹೇಂದ್ರಿಯಾದೌ ಕರ್ತವ್ಯೇ ಮಮಾಹಂಭಾವವರ್ಜಿತಃ .
ಔದಾಸೀನ್ಯೇನ ಯಸ್ತಿಷ್ಠೇತ್ಸ ಜೀವನ್ಮುಕ್ತಲಕ್ಷಣಃ .. 436..
ಯಾರು ದೇಹ ಇಂದ್ರಿಯಗಳು ಇತ್ಯಾದಿಗಳಲ್ಲಿಯೂ, ಮಾಡತಕ್ಕ ಕೆಲಸದಲ್ಲಿಯೂ, "ನಾನು, ನನ್ನದು" ಎಂಬ ಭಾವವಿಲ್ಲದೆ
ಉದಾಸೀನನಾಗಿರುತ್ತಾನೋ ಅವನು ಜೀವನ್ಮುಕ್ತನ ಲಕ್ಷಣವುಳ್ಳವನು.
ವಿಜ್ಞಾತ ಆತ್ಮನೋ ಯಸ್ಯ ಬ್ರಹ್ಮಭಾವಃ ಶ್ರುತೇರ್ಬಲಾತ್ .
ಭವಬಂಧವಿನಿರ್ಮುಕ್ತಃ ಸ ಜೀವನ್ಮುಕ್ತಲಕ್ಷಣಃ .. 437..
ಯಾರಿಗೆ ಶ್ರುತಿಯ(ವೇದಗಳ) ಬಲದಿಂದ ತನ್ನ ಬ್ರಹ್ಮಭಾವವು ತಿಳಿದಿರುವುದೊ, ಯಾರು ಸಂಸಾರಬಂಧದಿಂದ ಮುಕ್ತನಾಗಿರುವನೋ ಅವನು ಜೀವನ್ಮುಕ್ತನ ಲಕ್ಷಣವುಳ್ಳವನು.
ದೇಹೇಂದ್ರಿಯೇಷ್ವಹಂಭಾವ ಇದಂಭಾವಸ್ತದನ್ಯಕೇ .
ಯಸ್ಯ ನೋ ಭವತಃ ಕ್ವಾಪಿ ಸ ಜೀವನ್ಮುಕ್ತ ಇಷ್ಯತೇ .. 438..
ಯಾರಿಗೆ ದೇಹೇಂದ್ರಿಯಗಳಲ್ಲಿ "ನಾನು" ಎಂಬ ಭಾವವೂ, ಅವುಗಳಿಗಿಂತ ಬೇರೆ ವಸ್ತುಗಳಲ್ಲಿ "ಇದು"(ಪರಕೀಯ)
ಎಂಬ ಭಾವವೂ ಎಂದಿಗೂ ಉಂಟಾಗುವುದಿಲ್ಲವೊ, ಅವನು ಜೀವನ್ಮುಕ್ತನು ಎನಿಸುವನು.
ಜೀವೇಶೋಭಯಸಂಸಾರರೂಪದುರ್ವಾಸನೋಜ್ಝಿತಾ .
ಸಾ ಸರ್ವದಾ ಭವೇದ್ಯಸ್ಯ ಸ ಜೀವನ್ಮುಕ್ತ ಇಷ್ಯತೇ ..
ನ ಪ್ರತ್ಯಗ್ಬ್ರಹ್ಮಣೋರ್ಭೇದಂ ಕದಾಪಿ ಬ್ರಹ್ಮಸರ್ಗಯೋಃ .
ಪ್ರಜ್ಞಯಾ ಯೋ ವಿಜಾನಿತಿ ಸ ಜೀವನ್ಮುಕ್ತ ಇಷ್ಯತೇ .. 439..
ಯಾರು ಜೀವ ಮತ್ತು ಬ್ರಹ್ಮ ಇವರಲ್ಲಾ ಗಲಿ, ಬ್ರಹ್ಮ ಮತ್ತು ಜಗತ್ತು. ಇವುಗಳಲ್ಲಾ ಗಲಿ,ಯಥಾರ್ಥದೃಷ್ಟಿಯಿಂದ ಭೇದವನ್ನು ಯಾವಾಗಲೂ ಎಣಿಸುವದಿಲ್ಲವೋ, ಅವನು ಜೀವನ್ಮುಕ್ತನು ಎನಿಸುವನು.
ಸಾಧುಭಿಃ ಪೂಜ್ಯಮಾನೇಽಸ್ಮಿನ್ಪೀಡ್ಯಮಾನೇಽಪಿ ದುರ್ಜನೈಃ .
ಸಮಭಾವೋ ಭವೇದ್ಯಸ್ಯ ಸ ಜೀವನ್ಮುಕ್ತ ಇಷ್ಯತೇ .. 440..
ಈ ಶರೀರವನ್ನು ಗೌರವಿಸುವ ಸಾಧುಗಳಲ್ಲಿ ಹಾಗೂ ಅದನ್ನು ಪೀಡಿಸುವ ದುಷ್ಟರಲ್ಲಿ ಯಾರಿಗೆ ಸಮಭಾವವಿರುವುದೊ,
ಅವನು ಜೀವನ್ಮುಕ್ತನು ಎನಿಸಿಕೊಳ್ಳುತ್ತಾನೆ.
ಯತ್ರ ಪ್ರವಿಷ್ಟಾ ವಿಷಯಾಃ ಪರೇರಿತಾ
ನದೀಪ್ರವಾಹಾ ಇವ ವಾರಿರಾಶೌ .
ಲೀನಂತಿ ಸನ್ಮಾತ್ರತಯಾ ನ ವಿಕ್ರಿಯಾಂ
ಉತ್ಪಾದಯಂತ್ಯೇಷ ಯತಿರ್ವಿಮುಕ್ತಃ .. 441..
ಸಮುದ್ರವನ್ನು ಪ್ರವೇಶಿಸಿದ ನದಿಯ ಪ್ರವಾಹಗಳು ಲೀನವಾಗುವಂತೆ, ಇತರರಿಂದ ಪ್ರೇರಿತವಾಗಿ ಬರುವ ವಿಷಯಗಳು
ಪ್ರವೇಶಿಸಿ, ಬ್ರಹಾತ್ಮ ಭಾವನೆಯಿಂದ ಯಾರಲ್ಲಿ ಲೀನವಾಗುವುವೋ ಮತ್ತು ಹಾಗಾದರೂ ಅವನಲ್ಲಿ ಯಾವ
ವಿಕಾರವನ್ನೂ ಉಂಟುಮಾಡುವುದಿಲ್ಲವೊ, ಅವನೇ ಜೀವನ್ಮುಕ್ತನು.
ವಿಜ್ಞಾತಬ್ರಹ್ಮತತ್ತ್ವಸ್ಯ ಯಥಾಪೂರ್ವಂ ನ ಸಂಸೃತಿಃ .
ಅಸ್ತಿ ಚೇನ್ನ ಸ ವಿಜ್ಞಾತಬ್ರಹ್ಮಭಾವೋ ಬಹಿರ್ಮುಖಃ .. 442..
ಬ್ರಹ್ಮತತ್ತ್ವವನ್ನು ಅರಿತುಕೊಂಡವನಿಗೆ ಇಂದ್ರಿಯಗಳ ಸೆಳೆತವಿರುವುದಿಲ್ಲ; ಹಾಗೇನಾದರೂ ಸೆಳೆತವಿದ್ದರೆ ಅವನು
ಬ್ರಹ್ಮತತ್ತ್ವವನ್ನು ಅರಿತುಕೊಂಡವನಲ್ಲ. ಯಾಕೆಂದರೆ ಇಂದ್ರಿಯಗಳು ಬಹಿರ್ಮುಖ ಆಗಿರುತ್ತವೆ.
ಪ್ರಾಚೀನವಾಸನಾವೇಗಾದಸೌ ಸಂಸರತೀತಿ ಚೇತ್ .
ನ ಸದೇಕತ್ವವಿಜ್ಞಾನಾನ್ಮಂದೀ ಭವತಿ ವಾಸನಾ .. 443..
ಪೂರ್ವ ಜನ್ಮಗಳ ಪ್ರಭಾವದಿಂದ, ಸಂಸಾರದಲ್ಲಿ ಆಸಕ್ತಿಯುಂಟಾಗುವದು ಎನ್ನುವದು ನಿಜವಲ್ಲ. ಯಾಕೆಂದರೆ ಬ್ರಹ್ಮನ ಏಕತ್ವಜ್ಞಾನದಿಂದ ವಾಸನಾಸಕ್ತಿ ಮಂದವಾಗುತ್ತದೆ.
ಅತ್ಯಂತಕಾಮುಕಸ್ಯಾಪಿ ವೃತ್ತಿಃ ಕುಂಠತಿ ಮಾತರಿ .
ತಥೈವ ಬ್ರಹ್ಮಣಿ ಜ್ಞಾತೇ ಪೂರ್ಣಾನಂದೇ ಮನೀಷಿಣಃ .. 444..
ಅತ್ಯಂತ ಕಾಮುಕನಿಗೆ ಕೂಡ ತನ್ನ ತಾಯಿಯ ವಿಷಯದಲ್ಲಿ ಕಾಮಪ್ರವೃತ್ತಿಯು ಹಿಂದೆ ಸರಿಯುತ್ತದೆ; ಪೂರ್ಣಾನಂದವಾದ ಬ್ರಹ್ಮವನ್ನು ಅರಿತುಕೊಂಡಾಗ ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿಯುತ್ತದೆ).
ನಿದಿಧ್ಯಾಸನಶೀಲಸ್ಯ ಬಾಹ್ಯಪ್ರತ್ಯಯ ಈಕ್ಷ್ಯತೇ .
ಬ್ರವೀತಿ ಶ್ರುತಿರೇತಸ್ಯ ಪ್ರಾರಬ್ಧಂ ಫಲದರ್ಶನಾತ್ .. 445..
ಧ್ಯಾನದಲ್ಲಿ ಮಗ್ನನಾಗಿರುವ ಜ್ಞಾನಿಗೆ ಕೂಡ ಬಾಹ್ಯವಿಷಯಗಳ ಅನುಭೂತಿ ಕಂಡುಬರುತ್ತದೆ. ಇದು ಪ್ರಾರಬ್ಧಕರ್ಮದ ಫಲವೆಂದು ಶ್ರುತಿಯು ಹೇಳುತ್ತದೆ. ಹಾಗೂ ನಿಜ ಜೀವನದಲ್ಲಿ ಕಂಡುಬರುತ್ತದೆ.
ಸುಖಾದ್ಯನುಭವೋ ಯಾವತ್ತಾವತ್ಪ್ರಾರಬ್ಧಮಿಷ್ಯತೇ .
ಫಲೋದಯಃ ಕ್ರಿಯಾಪೂರ್ವೋ ನಿಷ್ಕ್ರಿಯೋ ನ ಹಿ ಕುತ್ರಚಿತ್ .. 446..
ಸುಖದುಃಖಾದಿಗಳ ಅನುಭವವು ಎಲ್ಲಿಯವರೆಗೆ ಇರುವುದೊ, ಅಲ್ಲಿಯವರೆಗೆ ಪ್ರಾರಬ್ಧಕರ್ಮವಿರುವದು ಕಂಡುಬರುತ್ತದೆ;
ಯಾಕೆಂದರೆ ಫಲವಾಗಲು ಮೊದಲು ಕರ್ಮವು ಆಗಬೇಕು. ಕರ್ಮವಿಲ್ಲದೆ ಫಲವುಂಟಾಗಲಾರದು.
ಅಹಂ ಬ್ರಹ್ಮೇತಿ ವಿಜ್ಞಾನಾತ್ಕಲ್ಪಕೋಟಿಶತಾರ್ಜಿತಂ .
ಸಂಚಿತಂ ವಿಲಯಂ ಯಾತಿ ಪ್ರಬೋಧಾತ್ಸ್ವಪ್ನಕರ್ಮವತ್ .. 447..
ಸ್ವಪ್ನದಲ್ಲಿ ಮಾಡಿದ ಕರ್ಮವು ಎಚ್ಚರವಾದ ಮೇಲೆ ನಾಶವಾಗುನಂತೆ, "ನಾನು ಬ್ರಹ್ಮವು" ಎಂಬ ಜ್ಞಾನದಿಂದ ನೂರಾರು ಕೋಟಿ ಕಲ್ಪಗಳಿಂದ ಸಂಪಾದಿಸಿರುವ ಕರ್ಮವೂ ಕೂಡ ನಾಶವಾಗುತ್ತದೆ.
ಯತ್ಕೃತಂ ಸ್ವಪ್ನವೇಲಾಯಾಂ ಪುಣ್ಯಂ ವಾ ಪಾಪಮುಲ್ಬಣಂ .
ಸುಪ್ತೋತ್ಥಿತಸ್ಯ ಕಿಂತತ್ಸ್ಯಾತ್ಸ್ವರ್ಗಾಯ ನರಕಾಯ ವಾ .. 448..
ಸ್ವಪ್ನದಲ್ಲಿ ಮಾಡಿದ್ದ ಪುಣ್ಯಕರ್ಮವಾಗಲೀ ಅಥವಾ ಭೀಕರವಾದ ಪಾಪವಾಗಲೀ, ನಿದ್ರೆಯಿಂದ ಎಚ್ಚತ್ತ ಮೇಲೆ ಸ್ವರ್ಗಕ್ಕೆ ಅಥವಾ ನರಕಕ್ಕೆ ಕಾರಣವಾಗುವುದೆ?
ಸ್ವಮಸಂಗಮುದಾಸೀನಂ ಪರಿಜ್ಞಾಯ ನಭೋ ಯಥಾ .
ನ ಶ್ಲಿಷ್ಯತಿ ಚ ಯತ್ಕಿಂಚಿತ್ಕದಾಚಿದ್ಭಾವಿಕರ್ಮಭಿಃ .. 449..
ಆಕಾಶದಂತೆ ತನ್ನ ಆತ್ಮನು ಅಸಂಗನೆಂದೂ, ಉದಾಸೀನನೆಂದೂ ತಿಳಿದುಕೊಂಡ ಯತಿಯು, ಮುಂದೆ ಮಾಡಬೇಕಾದ ಕರ್ಮಗಳಿಂದ ಎಂದಿಗೂ ಸ್ವಲ್ಪವೂ ಆಸಕ್ತನಾಗುವದಿಲ್ಲ. (ಅಂಟಿಕೊಳ್ಳುವದಿಲ್ಲ)
ನ ನಭೋ ಘಟಯೋಗೇನ ಸುರಾಗಂಧೇನ ಲಿಪ್ಯತೇ .
ತಥಾತ್ಮೋಪಾಧಿಯೋಗೇನ ತದ್ಧರ್ಮೈರ್ನೈವ ಲಿಪ್ಯತೇ .. 450..
ಹೇಗೆ (ಗಡಿಗೆಯಲ್ಲಿ ಕಾಣುವ) ಆಕಾಶವು ಗಡಿಗೆಯ ಮೂಲಕ (ಅದರಲ್ಲಿರುವ) ಮದ್ಯದ ವಾಸನೆಯಿಂದ ಕಲುಷಿತವಾಗುವುದಿಲ್ಲವೊ, ಹಾಗೆಯೇ ಆತ್ಮನು ಉಪಾಧಿಯ ಸಂಬಂಧದ ಮೂಲಕ ಅದರ ಧರ್ಮಗಳಿಂದ ಲಿಪ್ತನಾಗುವುದಿಲ್ಲ.
Comments