ವಿವೇಕ ಚೂಡಾಮಣಿ - 401-425

ಕಲ್ಪಾರ್ಣವ ಇವಾತ್ಯಂತಪರಿಪೂರ್ಣೈಕವಸ್ತುನಿ .
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ .. 401..

ಪ್ರಳಯದ ನಂತದದ ಸಮುದ್ರದಂತೆ ಅತ್ಯಂತ ಪರಿಪೂರ್ಣವಾಗಿರುವ ಮತ್ತು ನಿರ್ವಿಕಾರ, ನಿರಾಕಾರ, ನಿರ್ವಿಶೇಷ ಆದ ಏಕವಸ್ತುವಿನಲ್ಲಿ ಭೇದವು ಎಲ್ಲಿಯದು?

ತೇಜಸೀವ ತಮೋ ಯತ್ರ ಪ್ರಲೀನಂ ಭ್ರಾಂತಿಕಾರಣಂ .  
ಅದ್ವಿತೀಯೇ ಪರೇ ತತ್ತ್ವೇ ನಿರ್ವಿಶೇಷೇ ಭಿದಾ ಕುತಃ .. 402..

ತೇಜಸ್ಸಿನಲ್ಲಿ ಕತ್ತಲು ವಿಲೀನವಾಗಿಬಿಡುವಂತೆ, ಭ್ರಮೆಯ ಮೂಲ ಕಾರಣವಾದ ಅಜ್ಞಾನವು ಯಾವುದರಲ್ಲಿ ವಿಲೀನವಾಗುವದೋ, ಆ ಅದ್ವಿತೀಯ, ನಿರ್ವಿಶೇಷ ಪರತತ್ವದಲ್ಲಿ ಭೇದ ಎಲ್ಲಿಂದ ಬಂತು?

ಏಕಾತ್ಮಕೇ ಪರೇ ತತ್ತ್ವೇ ಭೇದವಾರ್ತಾ  ಕಥಂ ಭವೇತ್
ಸುಷುಪ್ತೌ ಸುಖಮಾತ್ರಾಯಾಂ ಭೇದಃ ಕೇನಾವಲೋಕಿತಃ .. 403..

ಏಕಾತ್ಮವಾದ ಪರತತ್ವದಲ್ಲಿ ಭೇದದ ಸುದ್ದಿ ಹೇಗೆ ಆದೀತು? ಆನಂದಸ್ವರೂಪವಾದ ಸುಷುಪ್ತಿ ಅವಸ್ಥೆಯಲ್ಲಿ ಭೇದವನ್ನು ಯಾರು ನೋಡಿದ್ದಾರೆ?

ನ ಹ್ಯಸ್ತಿ ವಿಶ್ವಂ ಪರತತ್ತ್ವಬೋಧಾತ್
    ಸದಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ .
ಕಾಲತ್ರಯೇ ನಾಪ್ಯಹಿರೀಕ್ಷಿತೋ ಗುಣೇ
    ನ ಹ್ಯಂಬುಬಿಂದುರ್ಮೃಗತೃಷ್ಣಿಕಾಯಾಂ .. 404..

ಪರತತ್ವವನ್ನು ಅರಿತುಕೊಳ್ಳುವುದಕ್ಕೆ ಮೊದಲೇ ಸತ್‌ಸ್ವರೂಪವೂ ನಿರ್ವಿಕಲ್ಪವೂ ಆದ ಬ್ರಹ್ಮದಲ್ಲಿ ಪ್ರಪಂಚವು ಇರಲೇ ಇರಲಿಲ್ಲ. ಹಗ್ಗ ದಲ್ಲಿ ಹಾವೂ, ಬಿಸಿಲುಕುದುರೆಯಲ್ಲಿ ಒಂದು ಹನಿ ನೀರೂ, ತ್ರಿಕಾಲಗಳಲ್ಲಿಯೂ ಕಂಡುಬರುವುದಿಲ್ಲ. (ಹಾಗೆಯೇ ಈ ವಿಶ್ವವೂ ಮಾಯೆ ಮಾತ್ರ)

ಮಾಯಾಮಾತ್ರಮಿದಂ ದ್ವೈತಮದ್ವೈತಂ ಪರಮಾರ್ಥತಃ .
ಇತಿ ಬ್ರೂತೇ ಶ್ರುತಿಃ ಸಾಕ್ಷಾತ್ಸುಷುಪ್ತಾವನುಭೂಯತೇ .. 405..

ಸಾಕ್ಷಾತ್ ವೇದಗಳೇ (ಶೃತಿ) ಹೇಳಿವೆ - ಪರಮಾರ್ಥದ ಸಹಾಯದಿಂದ ನೋಡಿದರೆ  ಈ ದ್ವೈತವೆನ್ನುವದು ಬರೀ ಮಾಯೆ ಮಾತ್ರ.  ಇದು ಸುಷುಪ್ತಿಯಲ್ಲಿ ನೇರವಾಗಿ ಅನುಭವಕ್ಕೆ  ಬರುತ್ತದೆ.  (ಪರಮಾತ್ಮ ಮತ್ತು ಜೀವಾತ್ಮರ ಮಧ್ಯದ ಭೇದ ಬರೀ ಮಾಯೆ)

ಅನನ್ಯತ್ವಮಧಿಷ್ಠಾನಾದಾರೋಪ್ಯಸ್ಯ ನಿರೀಕ್ಷಿತಂ .
ಪಂಡಿತೈ ರಜ್ಜುಸರ್ಪಾದೌ ವಿಕಲ್ಪೋ ಭ್ರಾಂತಿಜೀವನಃ .. 406..

ಆರೋಪಿತವಾದ ವಸ್ತುವು ತನ್ನ ಅಧಿಷ್ಠಾನಕ್ಕಿಂತ ಬೇರೆಯಲ್ಲ ಎಂಬುದನ್ನು ಪ್ರಾಜ್ಞರು ಹಗ್ಗದಲ್ಲಿ ಕಂಡುಬರುವ ಹಾವು ಮೊದಲಾದ ಉದಾಹರಣೆಗಳಿಂದ ನೋಡಿರುತ್ತಾರೆ. ಈ ಭೇದವು ಕಂಡು ಬರಲು ಭ್ರಾಂತಿಯೇ ಕಾರಣವು. (ನಿಜವಾಗಿ ಅಲ್ಲಿರುವದು ಹಗ್ಗ - ನಾವು ಕಲ್ಪನೆ ಮಾಡಿದ ಹಾವು ಬೇರೆ, ನಿಜವಾಗಿ ಅಲ್ಲಿರುವ ಹಗ್ಗ ಬೇರೆ ಎಂದು ತಿಳಿಯಲು ಕಾರಣ ನಮ್ಮಲ್ಲಿ ಉಂಟಾಗುವ ಭ್ರಮೆ. ಹಾಗೆಯೇ ನಮ್ಮ ಮೂಲ ಸ್ವರೂಪವಾದ ಆತ್ಮ ಬೇರೆಯಲ್ಲ, ಅದರ ಮೇಲೆ ಆರೋಪಿತವಾದ ಶರೀರ ಬೇರೆಯಲ್ಲ )

ಚಿತ್ತಮೂಲೋ ವಿಕಲ್ಪೋಽಯಂ ಚಿತ್ತಾಭಾವೇ ನ ಕಶ್ಚನ .
ಅತಶ್ಚಿತ್ತಂ ಸಮಾಧೇಹಿ ಪ್ರತ್ಯಗ್ರೂಪೇ ಪರಾತ್ಮನಿ .. 407..

ಈ ವಿಕಲ್ಪಕ್ಕೆ ಚಿತ್ತವೇ ಮೂಲಕಾರಣವಾಗಿದೆ, ಚಿತ್ತವಿಲ್ಲದಿದ್ದರೆ ಯಾವ (ಭೇದವೂ) ಇರುವುದಿಲ್ಲ. ಆದುದರಿಂದ  ಪ್ರತ್ಯಕ್ ರೂಪನಾದ ಪರಮಾತ್ಮನಲ್ಲಿ ಚಿತ್ತವನ್ನು ನೆಲೆಗೊಳಿಸು.

ಕಿಮಪಿ ಸತತಬೋಧಂ ಕೇವಲಾನಂದರೂಪಂ
    ನಿರುಪಮಮತಿವೇಲಂ ನಿತ್ಯಮುಕ್ತಂ ನಿರೀಹಂ .
ನಿರವಧಿಗಗನಾಭಂ ನಿಷ್ಕಲಂ ನಿರ್ವಿಕಲ್ಪಂ
    ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣಂ ಸಮಾಧೌ .. 408..

ನಿತ್ಯಜ್ಞಾನಸ್ವರೂಪವೂ, ಕೇವಲಾನಂದಸ್ವರೂಪವೂ, ನಿರುಪಮನೂ, ವಿಶ್ವಾತೀತನೂ, ನಿತ್ಯಮುಕ್ತನೂ, ನಿಷ್ಕ್ರಿಯನೂ, ಅವಧಿಯಿಲ್ಲದ ಆಕಾಶದಂತಿರುವವನೂ, ನಿಷ್ಕಲನೂ, ನಿರ್ವಿಕಲ್ಪನೂ ಆದ ಪೂರ್ಣ ಬ್ರಹ್ಮನನ್ನು ಸಮಾಧಿಯ ಮೂಲಕ ಜ್ಞಾನಿಯು ತನ್ನ ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.

ಪ್ರಕೃತಿವಿಕೃತಿಶೂನ್ಯಂ ಭಾವನಾತೀತಭಾವಂ
    ಸಮರಸಮಸಮಾನಂ ಮಾನಸಂಬಂಧದೂರಂ .
ನಿಗಮವಚನಸಿದ್ಧಂ ನಿತ್ಯಮಸ್ಮತ್ಪ್ರಸಿದ್ಧಂ
    ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣಂ ಸಮಾಧೌ .. 409..

ಕಾರಣ-ಪರಿಣಾಮಗಳಿಗೆ ಅತೀತನಾದ, ಭಾವನಾತೀತ ಭಾವನಾದ, ಸಮರಸನಾದ, ಅಸಮಾನನಾದ, ಪ್ರಮಾಣಕ್ಕೆ ಅತೀತನಾದ, ವೇದವಾಕ್ಯಗಳಿಂದ ಸಿದ್ಧವಾದ, ನಿತ್ಯನಾದ, ಸ್ವಯಂ ಸ್ಥಾಪಿತನಾದ, ವಿದ್ವಾನನಾದ, ಪೂರ್ಣಬ್ರಹ್ಮವನ್ನು ಜ್ಞಾನಿಯು, ಸಮಾಧಿಯ ಮೂಲಕ, ತನ್ನ ಹೃದಯದಲ್ಲಿ ಅರಿಯುತ್ತಾನೆ.

ಅಜರಮಮರಮಸ್ತಾಭಾಸವಸ್ತುಸ್ವರೂಪಂ  
    ಸ್ತಿಮಿತಸಲಿಲರಾಶಿಪ್ರಖ್ಯಮಾಖ್ಯಾವಿಹೀನಂ .
ಶಮಿತಗುಣವಿಕಾರಂ ಶಾಶ್ವತಂ ಶಾಂತಮೇಕಂ
    ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣಂ ಸಮಾಧೌ .. 410..

ಮುಪ್ಪಿಲ್ಲದ, ಮರಣವಿಲ್ಲದ, ವಸ್ತುವಿನ ಸ್ವರೂಪವಾಗಿರುವ, ನಿಶ್ಚಲ ಜಲರಾಶಿಯಂತಿರುವ, ನಾಮ ರೂಪರಹಿತ, ಗುಣವಿಕಾರ ಶೂನ್ಯ, ನಿತ್ಯ, ಶಾಂತಸ್ವರೂಪ, ಅದ್ವಿತೀಯ ಪೂರ್ಣ ಬ್ರಹ್ಮನನ್ನು ವಿದ್ವಾನನು ಸಮಾಧಿ ಅವಸ್ಥೆಯಲ್ಲಿ ಹೃದಯದಲ್ಲಿ ಸಾಕ್ಷಾತ್ ಅನುಭವಿಸುತ್ತಾನೆ.

ಸಮಾಹಿತಾಂತಃಕರಣಃ ಸ್ವರೂಪೇ
    ವಿಲೋಕಯಾತ್ಮಾನಮಖಂಡವೈಭವಂ .
ವಿಚ್ಛಿಂದ್ಧಿ ಬಂಧಂ ಭವಗಂಧಗಂಧಿತಂ  
    ಯತ್ನೇನ ಪುಂಸ್ತ್ವಂ ಸಫಲೀಕುರುಷ್ವ .. 411-

 ಸ್ವರೂಪದಲ್ಲಿ ಚಿತ್ತವನ್ನು ಸ್ಥಿರಗೊಳಿಸಿ, ಅಖಂಡ ಐಶ್ವರ್ಯ ಸಂಪನ್ನ, ಆತ್ಮನನ್ನು ಸಾಕ್ಷಾತ್ಕಾರಗೊಳಿಸಿಕೋ. ಪೂರ್ವ ಜನ್ಮಗಳ ಪ್ರಭಾವದಿಂದ ದೃಢವಾಗಿರುವ ನಿನ್ನ ಬಂಧನವನ್ನು ಕತ್ತರಿಸು. ಮತ್ತು ಪ್ರಯತ್ನಪೂರ್ವಕ ನಿನ್ನ ಮನುಷ್ಯ ಜನ್ಮವನ್ನು ಸಫಲವಾಗಿಸು. 

ಸರ್ವೋಪಾಧಿವಿನಿರ್ಮುಕ್ತಂ ಸಚ್ಚಿದಾನಂದಮದ್ವಯಂ .
ಭಾವಯಾತ್ಮಾನಮಾತ್ಮಸ್ಥಂ ನ ಭೂಯಃ ಕಲ್ಪಸೇಽಧ್ವನೇ .. 412..

ಸಮಸ್ತ ಉಪಾಧಿಗಳಿಂದಲೂ ಮುಕ್ತನಾದ, ಸಚ್ಚಿದಾನಂದ ಸ್ವರೂಪನೂ ಅದ್ವಿತೀಯನೂ ಆಗಿರುವ, ನಿನ್ನಲ್ಲಿರುವ ಆತ್ಮನನ್ನು ಧ್ಯಾನಿಸು. ಇದರಿಂದ ನೀನು ಮತ್ತೆ ಸಂಸಾರ ಬಂಧನದಲ್ಲಿ ಸಿಲುಕುವದಿಲ್ಲ. 

ಛಾಯೇವ ಪುಂಸಃ ಪರಿದೃಶ್ಯಮಾನ-
    ಮಾಭಾಸರೂಪೇಣ ಫಲಾನುಭೂತ್ಯಾ .
ಶರೀರಮಾರಾಚ್ಛವವನ್ನಿರಸ್ತಂ
    ಪುನರ್ನ ಸಂಧತ್ತ ಇದಂ ಮಹಾತ್ಮಾ .. 413..

ಶರೀರವನ್ನು ಶವದಂತೆ ದೂರ ತ್ಯಜಿಸಿದ ನಂತರ ಮಹಾತ್ಮನಾದವನು, ಅದು ಪ್ರಾರಬ್ಧ ಕರ್ಮದಿಂದ ಮನಷ್ಯನ ನೆರಳಿನಂತೆ ಮತ್ತೆ ಬಂದರೂ, ಅದನ್ನು ಮತ್ತೆ ಸ್ವೀಕರಿಸುವದಿಲ್ಲ.

ಸತತವಿಮಲಬೋಧಾನಂದರೂಪಂ ಸಮೇತ್ಯ   
    ತ್ಯಜ ಜಡಮಲರೂಪೋಪಾಧಿಮೇತಂ ಸುದೂರೇ .
ಅಥ ಪುನರಪಿ ನೈಷ ಸ್ಮರ್ಯತಾಂ ವಾಂತವಸ್ತು   
    ಸ್ಮರಣವಿಷಯಭೂತಂ ಕಲ್ಪತೇ ಕುತ್ಸನಾಯ .. 414..

ನಿತ್ಯ ನಿರ್ಮಲ, ಜ್ಞಾನಾನಂದರೂಪವಾದ ಬ್ರಹ್ಮನನ್ನು ಹೊಂದಿ, ಜಡಮಲಿನ ರೂಪವಾದ ಈ ಸ್ಥೂಲದೇಹವನ್ನು ಬಹು ದೂರದಿಂದಲೇ ತೊರೆ. ಆನಂತರ ಪುನಃ ಇದನ್ನು ಸ್ಮರಿಸಬೇಡ. ಯಾಕೆಂದರೆ ವಾಂತಿಮಾಡಿದ ವಸ್ತುವನ್ನು ಸ್ಮರಿಸುವದರಿಂದ ಅಸಹ್ಯವುಂಟಾಗುತ್ತದೆ.

ಸಮೂಲಮೇತತ್ಪರಿದಹ್ಯ ವಹ್ನೌ   
    ಸದಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ .
ತತಃ ಸ್ವಯಂ ನಿತ್ಯವಿಶುದ್ಧಬೋಧಾ-
    ನಂದಾತ್ಮನಾ ತಿಷ್ಠತಿ ವಿದ್ವರಿಷ್ಠಃ .. 415..

ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು, ಈ ಶರೀರವನ್ನು ಮೂಲಕಾರಣವಾದ ಮಾಯೆಯ ಸಹಿತ ಸತ್ ಸ್ವರೂಪವಾದ ನಿರ್ವಿಕಲ್ಪ-ಬ್ರಹ್ಮವೆಂಬ ಅಗ್ನಿಯಲ್ಲಿ ದಹಿಸಿ, ತಾನು ನಿತ್ಯಶುದ್ಧ ಜ್ಞಾನಾನಂದ ಸ್ವರೂಪನಾಗಿ ಇರುತ್ತಾನೆ.

ಪ್ರಾರಬ್ಧಸೂತ್ರಗ್ರಥಿತಂ ಶರೀರಂ
    ಪ್ರಯಾತು ವಾ ತಿಷ್ಠತು ಗೋರಿವ ಸ್ರಕ್ .
ನ ತತ್ಪುನಃ ಪಶ್ಯತಿ ತತ್ತ್ವವೇತ್ತಾ-
    ಽಽನಂದಾತ್ಮನಿ ಬ್ರಹ್ಮಣಿ ಲೀನವೃತ್ತಿಃ .. 416..

ಗೋವಿನ ಕೊರಳಲ್ಲಿರುವ ಮಾಲೆಯಂತೆ , ಪ್ರಾರಬ್ಧವೆಂಬ ದಾರದಿಂದ ಪೋಣಿಸಲ್ಪಟ್ಟ ಈ ಶರೀರವು ಹೋಗಲಿ ಅಥವಾ ಇರಲಿ,  ಯಾವ ತತ್ವಜ್ಞಾನಿಯು ಆನಂದಸ್ವರೂಪನಾದ ಬ್ರಹ್ಮನಲ್ಲಿ ವೃತ್ತಿಯನ್ನು ಲೀನ ಮಾಡಿಕೊಳ್ಳುತ್ತಾನೋ, ಅವನು  ಮತ್ತೆ ಆ ಶರೀರವನ್ನು ತಿರುಗಿ ನೋಡುವದಿಲ್ಲ.

ಅಖಂಡಾನಂದಮಾತ್ಮಾನಂ ವಿಜ್ಞಾಯ ಸ್ವಸ್ವರೂಪತಃ .
ಕಿಮಿಚ್ಛನ್ ಕಸ್ಯ ವಾ ಹೇತೋರ್ದೇಹಂ ಪುಷ್ಣಾತಿ ತತ್ತ್ವವಿತ್ .. 417..

ಅಖಂಡ ಆನಂದಮಯ ಆತ್ಮವನ್ನೇ ತನ್ನ ಸ್ವರೂಪವೆಂದು ತಿಳಿದ ತತ್ವಜ್ಞಾನಿಯು ಯಾವ ಆಸೆಯಿಂದ, ಯಾರ ಪ್ರಯೋಜನಕ್ಕಾಗಿ ದೇಹವನ್ನು ಪೋಷಿಸುತ್ತಾನೆ?

ಸಂಸಿದ್ಧಸ್ಯ ಫಲಂ ತ್ವೇತಜ್ಜೀವನ್ಮುಕ್ತಸ್ಯ ಯೋಗಿನಃ .
ಬಹಿರಂತಃ ಸದಾನಂದರಸಾಸ್ವಾದನಮಾತ್ಮನಿ .. 418..

ಆತ್ಮ ಜ್ಞಾನದಲ್ಲಿ ಸಮ್ಯಕ್ ಸಿದ್ಧಿ ಪಡೆದ ಜೀವನ್ಮುಕ್ತನಾದ ಯೋಗಿಗೆ ದೊರೆಯುವ ಫಲವೆಂದರೆ ಒಳಗೂ ಮತ್ತು ಹೊರಗೂ ಸದಾನಂದ ರಸಸ್ವಾದದ ಅನುಭವ ನಿರಂತರವಾಗಿ ದೊರೆಯುತ್ತದೆ.

ವೈರಾಗ್ಯಸ್ಯ ಫಲಂ ಬೋಧೋ ಬೋಧಸ್ಯೋಪರತಿಃ ಫಲಂ .
ಸ್ವಾನಂದಾನುಭವಾಚ್ಛಾಂತಿರೇಷೈವೋಪರತೇಃ ಫಲಂ .. 419..

ವೈರಾಗ್ಯದ ಫಲವು ಜ್ಞಾನ. ಜ್ಞಾನದ ಫಲ ಉಪರತಿ (ವಿಷಯಗಳಲ್ಲಿ ಉದಾಸೀನತೆ). ಉಪರತಿಯ ಫಲವೇ ಆತ್ಮಾನಂದದ ಅನುಭವದ ಶಾಂತಿ.

ಯದ್ಯುತ್ತರೋತ್ತರಾಭಾವಃ ಪೂರ್ವಪೂರ್ವಂತು ನಿಷ್ಫಲಂ .
ನಿವೃತ್ತಿಃ ಪರಮಾ ತೃಪ್ತಿರಾನಂದೋಽನುಪಮಃ ಸ್ವತಃ .. 420..

ಇವುಗಳಲ್ಲಿ ಮುಂದಿನ ಕಾರ್ಯಗಳು ಸಿದ್ಧಿಸಿದಿದ್ದರೆ, ಪೂರ್ವ ಕಾರ್ಯಗಳು ನಿಷ್ಫಲವಾಗುವವು. (ವೈರಾಗ್ಯ, ಜ್ಞಾನ, ಉಪರತಿ ಇತ್ಯಾದಿ). (ಈ ಸರಣಿ ಪರಿಪೂರ್ಣವಾದರೆ) ವಿಷಯಗಳಿಂದ ನಿವೃತ್ತಿಯಿಂದ ನಿಜವಾದ ಅನುಪಮ ಆನಂದ ಸ್ವತಃ  ಉಂಟಾಗುತ್ತದೆ.

ದೃಷ್ಟದುಃಖೇಷ್ವನುದ್ವೇಗೋ ವಿದ್ಯಾಯಾಃ ಪ್ರಸ್ತುತಂ ಫಲಂ .
ಯತ್ಕೃತಂ ಭ್ರಾಂತಿವೇಲಾಯಾಂ ನಾನಾ ಕರ್ಮ ಜುಗುಪ್ಸಿತಂ .
ಪಶ್ಚಾನ್ನರೋ ವಿವೇಕೇನ ತತ್ಕಥಂ ಕರ್ತುಮರ್ಹತಿ .. 421..

ಪ್ರಾರಬ್ಧವಶಾತ್ ಆಗುವ ದುಃಖ ಪ್ರಸಂಗಗಳಲ್ಲಿ ಉದ್ವೇಗಗೊಳ್ಳದಿರುವದೇ ವಿದ್ಯೆಯ(ಜ್ಞಾನದ) ಫಲ. ಭ್ರಾಂತಿಯ ಸಮಯದಲ್ಲಿ ಮನಷ್ಯನು ನಾನಾ ಅಸಹ್ಯಕರ ಕರ್ಮಗಳನ್ನು ಮಾಡುತ್ತಾನೋ, ವಿವೇಕ ಬಂದಾಗ ಅವುಗಳನ್ನು ಹೇಗೆ ಮಾಡಿಯಾನು?

ವಿದ್ಯಾಫಲಂ ಸ್ಯಾದಸತೋ ನಿವೃತ್ತಿಃ
    ಪ್ರವೃತ್ತಿರಜ್ಞಾನಫಲಂ ತದೀಕ್ಷಿತಂ .
ತಜ್ಞಾಜ್ಞಯೋರ್ಯನ್ಮೃಗತೃಷ್ಣಿಕಾದೌ
    ನೋಚೇದ್ವಿದಾಂ ದೃಷ್ಟಫಲಂ ಕಿಮಸ್ಮಾತ್ .. 422..  

ಅಸತ್ ವಸ್ತುವಿನಿಂದ ನಿವೃತ್ತಿಯೇ ಜ್ಞಾನದ ಫಲವು. ಅಜ್ಞಾನದ ಫಲವು ಅಸತ್ ವಸ್ತುವಿನ ಕಡೆ ನುಗ್ಗುವದು. ಇದು ಬಿಸಿಲ್ಗುದುರೆ ಇತ್ಯಾದಿ ಮಾಯೆಗಳನ್ನು ಅರಿತ ಜ್ಞಾನಿ ಮತ್ತು ಅರಿಯದ ಅಜ್ಞಾನಿಗಳ ವಿಷಯದಲ್ಲಿ ನೋಡಬಹುದು. ಅಲ್ಲದಿದ್ದಲ್ಲಿ ವಿದ್ಯೆಯ ದೃಷ್ಟಫಲವಾದರೂ ಇನ್ನೇನಿರುವದು?

ಅಜ್ಞಾನಹೃದಯಗ್ರಂಥೇರ್ವಿನಾಶೋ ಯದ್ಯಶೇಷತಃ .
ಅನಿಚ್ಛೋರ್ವಿಷಯಃ ಕಿಂ ನು ಪ್ರವೃತ್ತೇಃ ಕಾರಣಂ ಸ್ವತಃ .. 423..  

ಅಜ್ಞಾನ ಹೃದಯದ ಗೃಂಥಿಯು ಸಂಪೂರ್ಣ ನಾಶವಾದ, ವಿಷಯಗಳೇ ನಿರಾಸಕ್ತನ ಪ್ರವೃತ್ತಿಗೆ ಕಾರಣವಾಗುತ್ತದೆಯೇ?

ವಾಸನಾನುದಯೋ ಭೋಗ್ಯೇ ವೈರಾಗ್ಯಸ್ಯ ತದಾವಧಿಃ .
ಅಹಂಭಾವೋದಯಾಭಾವೋ ಬೋಧಸ್ಯ ಪರಮಾವಧಿಃ .
ಲೀನವೃತ್ತೈರನುತ್ಪತ್ತಿರ್ಮರ್ಯಾದೋಪರತೇಸ್ತು ಸಾ .. 424..

ವಾಸನೆಗಳ (ಭೋಗ್ಯ ವಸ್ತುಗಳಲ್ಲಿ) ಉದಯವಾಗದಿರುವದೇ ವೈರಾಗ್ಯದ ಚರಮ ಸೀಮೆ. ಚಿತ್ತದ ಅಹಂಕಾರದ ಉದಯವಾಗದಿರುವದೇ ಜ್ಞಾನದ ಚರಮ ಸೀಮೆ. ಲಯವಾಗಿರುವ ಈ ವೃತ್ತಿಗಳು ಪುನಃ ಉತ್ಪನ್ನವಾಗದಿರುವದೇ ಉಪರತಿಯ ಚರಮ ಸೀಮೆ.

ಬ್ರಹ್ಮಾಕಾರತಯಾ ಸದಾ ಸ್ಥಿತತಯಾ ನಿರ್ಮುಕ್ತಬಾಹ್ಯಾರ್ಥಧೀ-
ರನ್ಯಾವೇದಿತಭೋಗ್ಯಭೋಗಕಲನೋ ನಿದ್ರಾಲುವದ್ಬಾಲವತ್ .
ಸ್ವಪ್ನಾಲೋಕಿತಲೋಕವಜ್ಜಗದಿದಂ ಪಶ್ಯನ್ಕ್ವಚಿಲ್ಲಬ್ಧಧೀ-
ರಾಸ್ತೇ ಕಶ್ಚಿದನಂತಪುಣ್ಯಫಲಭುಗ್ಧನ್ಯಃ ಸ ಮಾನ್ಯೋ ಭುವಿ .. 425..

ಬ್ರಹ್ಮರೂಪದಿಂದಲೇ ಯಾವಾಗಲೂ ಇರುವದರಿಂದ, ಬಾಹ್ಯ ವಿಷಯಗಳ ಜ್ಞಾನವೇ ಇಲ್ಲದೆ, ನಿದ್ರಿಸುತ್ತಿರುವವನಂತೆ, ಮಗುವಿನಂತೆ, ಇತರರಿಂದ ಕೊಟ್ಟ ಭೋಗ್ಯವಸ್ತುಗಳನ್ನು ಅನುಭವಿಸುತ್ತ, ಈ ಜಗತ್ತನ್ನು ಕನಸಿನ ಲೋಕದಂತೆ ನೋಡುತ್ತ, ಯಾವಾಗಲೋ ಒಮ್ಮೆ ಬಹಿರ್ಮುಖವಾದ ಜ್ಞಾನವುಳ್ಳವನಾಗಿ ಅನಂತ ಪುಣ್ಯಫಲವನ್ನು ಅನುಭವಿಸುವವನು ಜ್ಞಾನಿಯು  ಎಲ್ಲೋ ಅಪರೂಪಕ್ಕೊಬ್ಬ ಇರುತ್ತಾನೆ, ಅಂತವನೇ ಭೂಲೋಕದಲ್ಲಿ ಧನ್ಯನು ಮತ್ತು ಮಾನ್ಯನು.



Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60