ವಿವೇಕ ಚೂಡಾಮಣಿ - 376-400
ವೈರಾಗ್ಯಾನ್ನ ಪರಂ ಸುಖಸ್ಯ ಜನಕಂ ಪಶ್ಯಾಮಿ ವಶ್ಯಾತ್ಮನಃ
ತಚ್ಚೇಚ್ಛುದ್ಧತರಾತ್ಮಬೋಧಸಹಿತಂ ಸ್ವಾರಾಜ್ಯಸಾಮ್ರಾಜ್ಯಧುಕ್ .
ಏತದ್ದ್ವಾರಮಜಸ್ರಮುಕ್ತಿಯುವತೇರ್ಯಸ್ಮಾತ್ತ್ವಮಸ್ಮಾತ್ಪರಂ
ಸರ್ವತ್ರಾಸ್ಪೃಹಯಾ ಸದಾತ್ಮನಿ ಸದಾ ಪ್ರಜ್ಞಾಂ ಕುರು ಶ್ರೇಯಸೇ .. 376..
ಚಿತ್ತವನ್ನು ಜಯಿಸಿಕೊಂಡಿರುವವನಿಗೆ ವೈರಾಗ್ಯಕ್ಕಿಂತ ಉತ್ತಮವಾದ, ಸುಖವನ್ನುಂಟುಮಾಡುವ ವಸ್ತುವನ್ನು ನಾನು ಕಾಣೆನು. ಅದು (ವೈರಾಗ್ಯ) ಅತ್ಯಂತ ಶುದ್ದವಾದ ಆತ್ಮಜ್ಞಾನದಿಂದ ಕೂಡಿದ್ದರೆ, ಅದು ಸಂಪೂರ್ಣ ಸ್ವಾತಂತ್ರ್ಯವನ್ನು ತಂದುಕೊಡುವದು. ಅದು ನಿತ್ಯಮುಕ್ತಿಯ ಪ್ರಾಪ್ತಿಗೆ ದ್ವಾರವಾಗಿರುವುದರಿಂದ, ನೀನು ಎಲ್ಲ ವಿಷಯಗಳಲ್ಲಿಯೂ ನಿಸ್ಪೃಹನಾಗಿ(ವಿರಾಗಿಯಾಗಿ) ಶ್ರೇಯಸ್ಸಿಗೋಸ್ಕರ, ಯಾವಾಗಲೂ ಸದ್ರೂಪನಾದ ಆತ್ಮನಲ್ಲಿ ಬುದ್ಧಿಯನ್ನು ಸ್ಥಿರವಾಗಿಸು.
ಆಶಾಂ ಛಿಂದ್ಧಿ ವಿಷೋಪಮೇಷು ವಿಷಯೇಷ್ವೇಷೈವ ಮೃತ್ಯೋಃ ಕೃತಿ-
ಸ್ತ್ಯಕ್ತ್ವಾ ಜಾತಿಕುಲಾಶ್ರಮೇಷ್ವಭಿಮತಿಂ ಮುಂಚಾತಿದೂರಾತ್ಕ್ರಿಯಾಃ .
ದೇಹಾದಾವಸತಿ ತ್ಯಜಾತ್ಮಧಿಷಣಾಂ ಪ್ರಜ್ಞಾಂ ಕುರುಷ್ವಾತ್ಮನಿ
ತ್ವಂ ದ್ರಷ್ಟಾಸ್ಯಮನೋಽಸಿ ನಿರ್ದ್ವಯಪರಂ ಬ್ರಹ್ಮಾಸಿ ಯದ್ವಸ್ತುತಃ .. 377..
ವಿಷದಂತಿರುವ ವಿಷಯಗಳಲ್ಲಿ ಆಶೆಯನ್ನು ಬಿಟ್ಟುಬಿದು; ಈ ಆಶೆಯೇ ಮೃತ್ಯುವಿಗೆ ಕಾರಣ; ಜಾತಿ, ಕುಲ ,ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಟ್ಟು , ಸ್ವಾರ್ಥ ಕರ್ಮಗಳನ್ನು ದೂರದಿಂದಲೇ ತ್ಯಜಿಸು; ಮಿಥ್ಯಾರೂಪವಾದ ದೇಹಾದಿಗಳಲ್ಲಿ ಆತ್ಮಬುದ್ದಿಯನ್ನು ತೊರೆದು, ಆತ್ಮನಲ್ಲಿಯೇ ಸಮಾಹಿತನಾಗು; ಏಕೆಂದರೆ ನೀನು ನಿಜವಾಗಿ ಸಾಕ್ಷಿಯಾಗಿರುವ , ಶುದ್ಧನಾಗಿರುವ, ಅದ್ವಿತೀಯನಾದ ಪರಬ್ರಹ್ಮನಾಗಿರುವೆ.
ಲಕ್ಷ್ಯೇ ಬ್ರಹ್ಮಣಿ ಮಾನಸಂ ದೃಢತರಂ ಸಂಸ್ಥಾಪ್ಯ ಬಾಹ್ಯೇಂದ್ರಿಯಂ
ಸ್ವಸ್ಥಾನೇ ವಿನಿವೇಶ್ಯ ನಿಶ್ಚಲತನುಶ್ಚೋಪೇಕ್ಷ್ಯ ದೇಹಸ್ಥಿತಿಂ .
ಬ್ರಹ್ಮಾತ್ಮೈಕ್ಯಮುಪೇತ್ಯ ತನ್ಮಯತಯಾ ಚಾಖಂಡವೃತ್ತ್ಯಾಽನಿಶಂ
ಬ್ರಹ್ಮಾನಂದರಸಂ ಪಿಬಾತ್ಮನಿ ಮುದಾ ಶೂನ್ಯೈಃ ಕಿಮನ್ಯೈರ್ಭ್ರಮೈಃ .. 378..
ಬ್ರ ಹ್ಮನಲ್ಲೇ ಲಕ್ಷವನ್ನು ದೃಢವಾಗಿ ನೆಲೆಗೊಳಿಸಿ, ಬಾಹ್ಯೇಂದ್ರಿ ಯಗಳನ್ನು ಅವುಗಳ ಸ್ಥಾನದಲ್ಲಿಯೇ ನಿಲ್ಲಿಸಿ, ಶರೀರವನ್ನು ನಿಶ್ಚಲವಾಗಿಸಿ, ದೇಹಸ್ಥಿತಿಯನ್ನು ಉಪೇಕ್ಷಿಸಿ, ಬ್ರಹ್ಮಾತ್ಮನಲ್ಲಿ ಐಕ್ಯವನ್ನು ಹೊಂದಿ, ತನ್ಮಯ ಭಾವದಿಂದ, ಅಖಂಡವೃತ್ತಿಯಿಂದ ಹಗಲೂ ಇರಳೂ, ಬ್ರಹ್ಮಾನಂದರಸವನ್ನು ಸಂತೋಷದಿಂದ ಕುಡಿ. ಇತರ ವಸ್ತುಗಳಿಂದ ಯಾವ ಪ್ರಯೋಜನ? ಅವು ಬರೀ ಶೂನ್ಯ ಹಾಗೂ ಮಿಥ್ಯೆ.
ಅನಾತ್ಮಚಿಂತನಂ ತ್ಯಕ್ತ್ವಾ ಕಶ್ಮಲಂ ದುಃಖಕಾರಣಂ .
ಚಿಂತಯಾತ್ಮಾನಮಾನಂದರೂಪಂ ಯನ್ಮುಕ್ತಿಕಾರಣಂ .. 379..
ಕಶ್ಮಲಕ್ಕೂ, ದುಃಖಕ್ಕೂ ಕಾರಣವಾದ ಅನಾತ್ಮ ಚಿಂತನೆಯನ್ನು ತ್ಯಜಿಸಿ, ಮುಕ್ತಿಗೆ ಕಾರಣವಾದ ಆತ್ಮಾನಂದರೂಪವನ್ನು ಧ್ಯಾನಿಸು.
ಏಷ ಸ್ವಯಂಜ್ಯೋತಿರಶೇಷಸಾಕ್ಷೀ
ವಿಜ್ಞಾನಕೋಶೇ ವಿಲಸತ್ಯಜಸ್ರಂ .
ಲಕ್ಷ್ಯಂ ವಿಧಾಯೈನಮಸದ್ವಿಲಕ್ಷಣ-
ಮಖಂಡವೃತ್ತ್ಯಾಽಽತ್ಮತಯಾಽನುಭಾವಯ .. 380..
ಸ್ವಯಂಜ್ಯೋತಿಯೂ ಸರ್ವಸಾಕ್ಷಿಯೂ ಆದ ಈ ಆತ್ಮನು ನಮ್ಮ ಬುದ್ದಿಯಲ್ಲಿ ಯಾವಾಗಲೂ ಪ್ರಕಾಶಿಸುತ್ತಿರುತ್ತಾನೆ. ಅಸತ್ ವಸ್ತುಗಳಿಂದ ಭಿನ್ನನಾಗಿರುವ ಇವನನ್ನು ಲಕ್ಷ್ಯವಾಗಿ ಮಾಡಿಕೊಂಡು ಅಖಂಡಾಕಾರವೃತ್ತಿಯಿಂದ ಆತ್ಮಭಾವದಿಂದ ಚಿಂತಿಸು.
ಏತಮಚ್ಛಿನ್ನಯಾ ವೃತ್ತ್ಯಾ ಪ್ರತ್ಯಯಾಂತರಶೂನ್ಯಯಾ .
ಉಲ್ಲೇಖಯನ್ವಿಜಾನೀಯಾತ್ಸ್ವಸ್ವರೂಪತಯಾ ಸ್ಫುಟಂ .. 381..
ಅಖಂಡ ವೃತ್ತಿಯಿಂದ, ಬೇರೆ ಯೋಚನೆಗಳ ಅಡಚಣೆಯಿಲ್ಲದೆ ಆತ್ಮನನ್ನೇ ಧ್ಯಾನಿಸಬೇಕು ಹಾಗೂ ಆತ್ಮನೇ ಸ್ವಸ್ವರೂಪವೆಂದು ಸ್ಫುಟವಾಗಿ ತಿಳಿದುಕೊಳ್ಳಬೇಕು.
ಅತ್ರಾತ್ಮತ್ವಂ ದೃಢೀಕುರ್ವನ್ನಹಮಾದಿಷು ಸಂತ್ಯಜನ್ .
ಉದಾಸೀನತಯಾ ತೇಷು ತಿಷ್ಠೇತತ ಸ್ಫುಟಘಟಾದಿವತ್ .. 382..
ಈ ಆತ್ಮನಲ್ಲಿ ತನ್ನತನವನ್ನು ದೃಢಪಡಿಸಿಕೊಳ್ಳುತ್ತ, ಅಹಂಕಾರಾದಿಗಳಲ್ಲಿ ತನ್ನತನವನ್ನು ಬಿಡುತ್ತ, ಒಡೆದುಹೋದ ಗಡಿಗೆಯನ್ನು ಉದಾಸೀನ ಮಾಡುವ ಹಾಗೆ, ಅವುಗಳಲ್ಲಿ (ಅಹಂಕಾರಾದಿಗಳಲ್ಲಿ) ಉದಾಸೀನ ಮಾಡಬೇಕು.
ವಿಶುದ್ಧಮಂತಃಕರಣಂ ಸ್ವರೂಪೇ
ನಿವೇಶ್ಯ ಸಾಕ್ಷಿಣ್ಯವಬೋಧಮಾತ್ರೇ .
ಶನೈಃ ಶನೈರ್ನಿಶ್ಚಲತಾಮುಪಾನಯನ್
ಪೂರ್ಣಂ ಸ್ವಮೇವಾನುವಿಲೋಕಯೇತ್ತತಃ .. 383..
ಜ್ಞಾನಸ್ವರೂಪನೂ, ಕೇವಲ ಸಾಕ್ಷಿಯೂ ಆದ ಆತ್ಮನಲ್ಲಿಯೇ ವಿಶುದ್ಧವಾದ ಅಂತಃಕರಣವನ್ನು ನಿಲ್ಲಿಸಿ, ಮೆಲ್ಲಮೆಲ್ಲಗೆ ಅದಕ್ಕೆ ನಿಶ್ಚಲತೆಯನ್ನು ತಂದು (ಶಾಂತವಾಗಿಸಿ), ಆನಂತರ ಪೂರ್ಣನಾದ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.
ದೇಹೇಂದ್ರಿಯಪ್ರಾಣಮನೋಽಹಮಾದಿಭಿಃ
ಸ್ವಾಜ್ಞಾನಕ್ಲೃಪ್ತೈರಖಿಲೈರುಪಾಧಿಭಿಃ .
ವಿಮುಕ್ತಮಾತ್ಮಾನಮಖಂಡರೂಪಂ
ಪೂರ್ಣಂ ಮಹಾಕಾಶಮಿವಾವಲೋಕಯೇತ್ .. 384..
ಅಜ್ಞಾನದಿಂದ ಕಲ್ಪಿತವಾದ ದೇಹ, ಇಂದ್ರಿಯ, ಪ್ರಾಣ, ಮನಸ್ಸು, ಅಹಂಕಾರ ಇತ್ಯಾದಿ ಯಾವ ಮಿತಿಗಳೂ ಇಲ್ಲದ, ಅಖಂಡರೂಪನೂ, ಪೂರ್ಣನೂ ಆದ ಆತ್ಮನನ್ನು ಮಹಾ ಆಕಾಶದಂತೆ ಕಂಡು ಸಾಕ್ಷಾತ್ಕರಿಸಬೇಕು.
ಘಟಕಲಶಕುಸೂಲಸೂಚಿಮುಖ್ಯೈಃ
ಗಗನಮುಪಾಧಿಶತೈರ್ವಿಮುಕ್ತಮೇಕಂ .
ಭವತಿ ನ ವಿವಿಧಂ ತಥೈವ ಶುದ್ಧಂ
ಪರಮಹಮಾದಿವಿಮುಕ್ತಮೇಕಮೇವ .. 385..
ಗಡಿಗೆ, ಕಲಶ, ಕಣಜ, ಸೂಜಿ ಮೊದಲಾದ ಯಾವ ಮಿತಿಗಳನ್ನು ಕಳಚಿ ಹಾಕಿದಾಗ, ಆಕಾಶವು ಒಂದೇ ಆಗಿರುವದೇ ಹೊರತು ಬೇರೆ ಬೇರೆಯಾಗಿರುವದಿಲ್ಲ. ಹಾಗೆಯೇ ಅಹಂಕಾರ ಇತ್ಯಾದಿಗಳನ್ನು ತೆಗೆದು ಹಾಕಿದಾಗ ಪರಮಾರ್ಥವು ಒಂದೇ ಆಗಿರುತ್ತದೆ.
ಬ್ರಹ್ಮಾದಿಸ್ತಂಬಪರ್ಯಂತಾ ಮೃಷಾಮಾತ್ರಾ ಉಪಾಧಯಃ .
ತತಃ ಪೂರ್ಣಂ ಸ್ವಮಾತ್ಮಾನಂ ಪಶ್ಯೇದೇಕಾತ್ಮನಾ ಸ್ಥಿತಂ .. 386..
ಬ್ರಹ್ಮನಿಂದ ಹಿಡಿದು, ಹುಲ್ಲುಕಡ್ಡಿಯವರೆಗಿನ ಪದವಿಗಳೆಲ್ಲವೂ ಕೇವಲ ಮಿಥ್ಯಯೇ ಆಗಿರುತ್ತವೆ. ಆದುದರಿಂದ
ತನ್ನಲ್ಲೇ ಪೂರ್ಣನಾದ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.
ಯತ್ರ ಭ್ರಾಂತ್ಯಾ ಕಲ್ಪಿತಂ ತದ್ವಿವೇಕೇ
ತತ್ತನ್ಮಾತ್ರಂ ನೈವ ತಸ್ಮಾದ್ವಿಭಿನ್ನಂ .
ಭ್ರಾಂತೇರ್ನಾಶೇ ಭಾತಿ ದೃಷ್ಟಾಹಿತತ್ತ್ವಂ
ರಜ್ಜುಸ್ತದ್ವದ್ವಿಶ್ವಮಾತ್ಮಸ್ವರೂಪಂ .. 387..
ಭ್ರಾಂತಿಯಿಂದ ಕಲ್ಪಿತವಾದ ಯಾವ ವಸ್ತುವು ವಿವೇಕ ಜಾಗೃತವಾದಾಗ ಅದರ ನಿಜವಾದ ಸ್ವರೂಪವನ್ನು ತೋರಿಸುವದೋ, ಹಗ್ಗವು ಭ್ರಾಂತಿನಾಶವಾದಾಗ ಸರ್ಪವಾಗಿ ಕಾಣದೇ ಹಗ್ಗವಾಗಿಯೇ ಕಾಣುವಂತೆ, ಭ್ರಾಂತಿನಾಶವಾದಾಗ, ವಿಶ್ವವೆಲ್ಲ ಪರಮಾತ್ಮಸ್ವರೂಪವೆಂಬ ಸತ್ಯ ಅರ್ಥವಾಗುತ್ತದೆ.
ಸ್ವಯಂ ಬ್ರಹ್ಮಾ ಸ್ವಯಂ ವಿಷ್ಣುಃ ಸ್ವಯಮಿಂದ್ರಃ ಸ್ವಯಂ ಶಿವಃ .
ಸ್ವಯಂ ವಿಶ್ವಮಿದಂ ಸರ್ವಂ ಸ್ವಸ್ಮಾದನ್ಯನ್ನ ಕಿಂಚನ .. 388..
ಸ್ವಯಂ ಬ್ರಹ್ಮನು, ಸ್ವಯಂ ವಿಷ್ಣು, ಸ್ವಯಂ ಇಂದ್ರ, ಸ್ವಯಂ ಶಿವ,ಸ್ವಯಂ ವಿಶ್ವವಲ್ಲವೂ (ಆಗಿರುತ್ತಾನೆ). ತನಗಿಂತ ಬೇರೆ ಯಾವುದೊಂದೂ ಇರುವುದಿಲ್ಲ.
ಅಂತಃ ಸ್ವಯಂ ಚಾಪಿ ಬಹಿಃ ಸ್ವಯಂ ಚ
ಸ್ವಯಂ ಪುರಸ್ತಾತ್ ಸ್ವಯಮೇವ ಪಶ್ಚಾತ್ .
ಸ್ವಯಂ ಹ್ಯವಾಚ್ಯಾಂ ಸ್ವಯಮಪ್ಯುದೀಚ್ಯಾಂ
ತಥೋಪರಿಷ್ಟಾತ್ಸ್ವಯಮಪ್ಯಧಸ್ತಾತ್ .. 389..
ಒಳಗೂ ತಾನೇ, ಹೊರಗೂ ತಾನೇ; ಮುಂದೆಯೂ ತಾನೇ ಹಿಂದೆಯೂ ತಾನೇ; ದಕ್ಷಿಣಕ್ಕೂ ತಾನೇ, ಉತ್ತರಕ್ಕೂ ತಾನೇ: ಹೀಗೆಯೇ ಮೇಲೆಯೂ ತಾನೇ, ಕೆಳಗೂ ತಾನೇ. (ಎಲ್ಲ ಕಡೆಯಲ್ಲೂ ಇರುವದೂ ಬ್ರಹ್ಮನೇ)
ತರಂಗಫೇನಭ್ರಮಬುದ್ಬುದಾದಿ
ಸರ್ವಂ ಸ್ವರೂಪೇಣ ಜಲಂ ಯಥಾ ತಥಾ .
ಚಿದೇವ ದೇಹಾದ್ಯಹಮಂತಮೇತತ್
ಸರ್ವಂ ಚಿದೇವೈಕರಸಂ ವಿಶುದ್ಧಂ .. 390..
ಹೇಗೆ ನೀರಲ್ಲಿ ಕಂಡು ಬರುವ ಅಲೆ ,ನೊರೆ, ಸುಳಿ, ಗುಳ್ಳೆ ಇವೆಲ್ಲವೂ ನಿಜವಾಗಿ ನೀರೇ ಆಗಿರುವುವೋ, ಹಾಗೆಯೇ ದೇಹವೇ ಮೊದಲಾಗಿ ಅಹಂಕಾರದವರೆಗಿನ ಇವೆಲ್ಲವೂ ಚಿತ್‌ಸ್ವರೂಪವೇ ಆಗಿವೆ. ಎಲ್ಲವೂ ಏಕರಸವಾದ ವಿಶುದ್ಧವಾದ ಆತ್ಮವೇ ಆಗಿರುತ್ತದೆ
ಸದೇವೇದಂ ಸರ್ವಂ ಜಗದವಗತಂ ವಾಙ್ಮನಸಯೋಃ
ಸತೋಽನ್ಯನ್ನಾಸ್ತ್ಯೇವ ಪ್ರಕೃತಿಪರಸೀಮ್ನಿ ಸ್ಥಿತವತಃ .
ಪೃಥಕ್ ಕಿಂ ಮೃತ್ಸ್ನಾಯಾಃ ಕಲಶಘಟಕುಂಭಾದ್ಯವಗತಂ
ವದತ್ಯೇಷ ಭ್ರಾಂತಸ್ತ್ವಮಹಮಿತಿ ಮಾಯಾಮದಿರಯಾ .. 391..
ಪೃಕೃತಿಯ ಎಲ್ಲೆಯನ್ನು ಮೀರಿ ನಿಂತಿರುವವನಿಗೆ, ವಾಕ್ ಮನಸ್ಸುಗಳಲ್ಲಿ ತೋರುತ್ತಿರುವ ಈ ಜಗತ್ತೆಲ್ಲವೂ ಸದ್ವಸ್ತುವೇ; ಸದ್ವಸ್ತುವಿಗಿಂತ ಬೇರೆಯಾದದ್ದು ಇಲ್ಲವೇ ಇಲ್ಲ. (ಉದಾಹರಣೆಗೆ) ಕಲಶ, ಗಡಿಗೆ, ಮಡಕೆ ಮೊದಲಾದುವು ಮಣ್ಣಿಗಿಂತ ಬೇರೆಯಾಗಿ ಇನ್ನೇನು?
ಮಾಯೆಯೆಂಬ ಮದಿರೆಯಿಂದ ಉನ್ಮತ್ತನಾಗಿರುವ ಮನುಷ್ಯನು, "ನೀನು” "ನಾನು" ಎಂದು ಭೇದದ ಮಾತನ್ನು ಮಾತನಾಡುತ್ತಾನೆ.
ಕ್ರಿಯಾಸಮಭಿಹಾರೇಣ ಯತ್ರ ನಾನ್ಯದಿತಿ ಶ್ರುತಿಃ .
ಬ್ರವೀತಿ ದ್ವೈತರಾಹಿತ್ಯಂ ಮಿಥ್ಯಾಧ್ಯಾಸನಿವೃತ್ತಯೇ .. 392..
ಸುಳ್ಳು ಅಧ್ಯಾಸವನ್ನು ತೆಗೆದುಹಾಕುವದಕ್ಕಾಗಿ "ಎಲ್ಲಿ ಬೇರೆ ಏನೂ ಇಲ್ಲವೋ...” ಎಂಬ ಶೃತಿ ಅನೇಕ ಪ್ರತಿಪಾದನೆಗಳಿಂದ, ದ್ವೈತರಾಹಿತ್ಯವನ್ನು ಹೇಳುತ್ತದೆ.
ಆಕಾಶವನ್ನಿರ್ಮಲನಿರ್ವಿಕಲ್ಪಂ
ನಿಃಸೀಮನಿಃಸ್ಪಂದನನಿರ್ವಿಕಾರಂ .
ಅಂತರ್ಬಹಿಃಶೂನ್ಯಮನನ್ಯಮದ್ವಯಂ
ಸ್ವಯಂ ಪರಂ ಬ್ರಹ್ಮ ಕಿಮಸ್ತಿ ಬೋಧ್ಯಂ .. 393..
ಆಕಾಶದಂತೆ ಸ್ಪಂದನವಿಲ್ಲದುದೂ, ನಿರ್ಮಲವೂ, ಪಾರವಿಲ್ಲದುದೂ , ನಿರ್ವಿಕಾರವೂ, ಅದ್ವಿತೀಯವೂ, ನಿರ್ವಿಕಲ್ಪವೂ, ಸ್ವಗತಭೇದರಹಿತವೂ , ಅನನ್ಯವಾದುದೂ, ಹೊರಗೂ ಒಳಗೂ ಶೂನ್ಯವೂ ಆದ ಪರಬ್ರಹ್ಮನು ಇರುವಾಗ, ಇದಕ್ಕಿಂತ ತಿಳಿಯತಕ್ಕದ್ದು ಬೇರೆ ಯಾವುದಿದೆ ?
ವಕ್ತವ್ಯಂ ಕಿಮು ವಿದ್ಯತೇಽತ್ರ ಬಹುಧಾ ಬ್ರಹ್ಮೈವ ಜೀವಃ ಸ್ವಯಂ
ಬ್ರಹ್ಮೈತಜ್ಜಗದಾತತಂ ನು ಸಕಲಂ ಬ್ರಹ್ಮಾದ್ವಿತೀಯಂ ಶ್ರುತಿಃ .
ಬ್ರಹ್ಮೈವಾಹಮಿತಿ ಪ್ರಬುದ್ಧಮತಯಃ ಸಂತ್ಯಕ್ತಬಾಹ್ಯಾಃ ಸ್ಫುಟಂ
ಬ್ರಹ್ಮೀಭೂಯ ವಸಂತಿ ಸಂತತಚಿದಾನಂದಾತ್ಮನೈತದ್ಧ್ರುವಂ .. 394..
ಈ ವಿಷಯದಲ್ಲಿ ಬಹಳವಾಗಿ ಹೇಳತಕ್ಕದ್ದೇನಿದೆ? ಜೀವ ಬ್ರಹ್ಮವು, ವ್ಯಾಪಿಸಿರುವ ಈ ಜಗತ್ತೆಲ್ಲವೂ ಬ್ರಹ್ಮವೇ, ಬ್ರಹ್ಮವು ಅದ್ವಿತೀಯವು--ಎಂದು ಶ್ರುತಿಯು ಹೇಳುತ್ತದೆ. ನಾನು ಬ್ರಹ್ಮನೇ ಎಂದು ತಿಳಿದುಕೊಂಡಿರುವ ಬುದ್ಧಿಯುಳ್ಳವರು, ಬಾಹ್ಯ ವಸ್ತುಗಳನ್ನು ಬಿಟ್ಟು, ಸ್ಫುಟವಾಗಿ ಬ್ರಹ್ಮಸ್ವರೂಪರಾಗಿ, ಸತತವೂ ಚಿದಾನಂದಸ್ವರೂಪದಿಂದಲೇ ಇರುತ್ತಾರೆ. ಇದು ನಿಶ್ಚಿತ.
ಜಹಿ ಮಲಮಯಕೋಶೇಽಹಂಧಿಯೋತ್ಥಾಪಿತಾಶಾಂ
ಪ್ರಸಭಮನಿಲಕಲ್ಪೇ ಲಿಂಗದೇಹೇಽಪಿ ಪಶ್ಚಾತ್ .
ನಿಗಮಗದಿತಕೀರ್ತಿಂ ನಿತ್ಯಮಾನಂದಮೂರ್ತಿಂ
ಸ್ವಯಮಿತಿ ಪರಿಚೀಯ ಬ್ರಹ್ಮರೂಪೇಣ ತಿಷ್ಠ .. 395..
ಕೆಸರಿನಿಂದ ತುಂಬಿದ ಈ ಸ್ಫೂಲದೇಹದಲ್ಲಿ "ನಾನು" ಎಂಬ ಬುದ್ಧಿಯಿಂದ ಹುಟ್ಟಿದ ಆಸೆಯನ್ನು ಬಿಡು; ಅನಂತರ ವಾಯುವಿನಂತಿರುವ ಲಿಂಗಶರೀರದಲ್ಲಿಯೂ ಕೂಡ (ಆಸೆಯನ್ನು), ದೃಢತೆಯಿಂದ ಬಿಡು. ಯಾರ ಕೀರ್ತಿಯನ್ನು ವೇದಗಳು ಹೊಗಳುವವೋ, ಆ ಆನಂದಸ್ವರೂಪ ಬ್ರಹ್ಮನೇ ನಿನ್ನ ಸ್ವರೂಪವೆಂದು ತಿಳಿದುಕೊಂಡು, ಸದಾ ಬ್ರಹ್ಮಸ್ವರೂಪದಲ್ಲಿ ಸ್ಥಿರವಾಗಿರು. .
ಶವಾಕಾರಂ ಯಾವದ್ಭಜತಿ ಮನುಜಸ್ತಾವದಶುಚಿಃ
ಪರೇಭ್ಯಃ ಸ್ಯಾತ್ಕ್ಲೇಶೋ ಜನನಮರಣವ್ಯಾಧಿನಿಲಯಃ .
ಯದಾತ್ಮಾನಂ ಶುದ್ಧಂ ಕಲಯತಿ ಶಿವಾಕಾರಮಚಲಂ
ತದಾ ತೇಭ್ಯೋ ಮುಕ್ತೋ ಭವತಿ ಹಿ ತದಾಹ ಶ್ರುತಿರಪಿ .. 396..
ಮನುಷ್ಯನು ಎಲ್ಲಿಯವರೆಗೆ ಶವಾಕಾರದ ಶರೀರವನ್ನು ಭಜಿಸುತ್ತಾನೋ, ಅಲ್ಲಿಯ ತನಕ ಅಪವಿತ್ರನಾಗಿರುತ್ತಾನೆ ಮತ್ತು ಅವನು ಜನನ, ಮರಣ, ವ್ಯಾಧಿಗಳ ನಿಲಯವಾಗಿರುತ್ತಾನೆ. ಇತರರಿಂದ ಕ್ಲೇಶಗೊಳ್ಳುತ್ತಾನೆ. ಆದರೆ ಅವನು ಯಾವಾಗ ತನ್ನ ಕಲ್ಯಾಣಸ್ವರೂಪ, ಅಚಲ, ಶುದ್ಧ ಆತ್ಮವನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಾನೊ, ಆಗ ಅವನು ಎಲ್ಲ ಕ್ಲೇಶಗಳಿಂದ ಮುಕ್ತನಾಗುತ್ತಾನೆ.
ಸ್ವಾತ್ಮನ್ಯಾರೋಪಿತಾಶೇಷಾಭಾಸವಸ್ತುನಿರಾಸತಃ .
ಸ್ವಯಮೇವ ಪರಂ ಬ್ರಹ್ಮ ಪೂರ್ಣಮದ್ವಯಮಕ್ರಿಯಂ .. 397..
ತನ್ನಲ್ಲಿ ಆರೋಪಿತ ಸಮಸ್ತ ಕಲ್ಪಿತವಸ್ತುಗಳ ನಿರಾಕರಣೆಯಿಂದ, ಮನುಷ್ಯನು ತಾನೇ ಪೂರ್ಣವೂ, ಅದ್ವಿತೀಯವೂ, ನಿಷ್ಕ್ರಿಯವೂ ಆದ ಪರಬ್ರಹ್ಮನಾಗುತ್ತಾನೆ.
ಸಮಾಹಿತಾಯಾಂ ಸತಿ ಚಿತ್ತವೃತ್ತೌ
ಪರಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ .
ನ ದೃಶ್ಯತೇ ಕಶ್ಚಿದಯಂ ವಿಕಲ್ಪಃ
ಪ್ರಜಲ್ಪಮಾತ್ರಃ ಪರಿಶಿಷ್ಯತೇ ಯತಃ .. 398..
ನಿರ್ವಿಕಲ್ಪವೂ ಬ್ರಹ್ಮವೂ ಆದ ಪರಮಾತ್ಮನಲ್ಲಿ ಚಿತ್ತವೃತ್ತಿಯು ಏಕಾಗ್ರತೆಯನ್ನು ಹೊಂದಿದಾಗ ಈ ಯಾವುದೊಂದು ಭೇದವೂ ಕಂಡುಬರುವುದಿಲ್ಲ. ಅನಂತರ (ಅರ್ಥವಿಲ್ಲದ) ಬರಿಯ ಶಬ್ದ ಮಾತ್ರ ಉಳಿದುಕೊಳ್ಳುತ್ತದೆ.
ಅಸತ್ಕಲ್ಪೋ ವಿಕಲ್ಪೋಽಯಂ ವಿಶ್ವಮಿತ್ಯೇಕವಸ್ತುನಿ .
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ .. 399..
ಆ ಒಂದು ವಸ್ತುವಾದ ಬ್ರಹ್ಮನಲ್ಲಿ ಈ ಸಂಸಾರವು, ಮಿಥ್ಯಾವಸ್ತುವಿನ ಸದೃಶ ಕಲ್ಪನಾ-ಮಾತ್ರವಾಗಿದೆ. ನಿರ್ವಿಕಾರ, ನಿರಾಕಾರ, ನಿರ್ವಿಶೇಷ ವಸ್ತುವಿನಲ್ಲಿ ಭೇದ ಎಲ್ಲಿಯದು?
ದ್ರಷ್ಟುದರ್ಶನದೃಶ್ಯಾದಿಭಾವಶೂನ್ಯೈಕವಸ್ತುನಿ .
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ .. 400..
ನಿರ್ವಿಕಾರವೂ, ನಿರಾಕಾರವೂ, ನಿರ್ವಿಶೇಷವೂ ಆದ ಮತ್ತು ದ್ರಷ್ಟೃ, ದರ್ಶನ, ದೃಶ್ಯ ಮೊದಲಾದ ಭಾವಗಳಿಲ್ಲದ ಏಕವಸ್ತುವಿನಲ್ಲಿ ಭೇದವೆಲ್ಲಿಯದು?
Comments