ವಿವೇಕ ಚೂಡಾಮಣಿ - 351-375

ನಿತ್ಯಾದ್ವಯಾಖಂಡಚಿದೇಕರೂಪೋ
ಬುದ್ಧ್ಯಾದಿಸಾಕ್ಷೀ ಸದಸದ್ವಿಲಕ್ಷಣಃ .
ಅಹಂಪದಪ್ರತ್ಯಯಲಕ್ಷಿತಾರ್ಥಃ
ಪ್ರತ್ಯಕ್ ಸದಾನಂದಘನಃ ಪರಾತ್ಮಾ .. 351..

ಪರಮಾತ್ಮನು ನಿತ್ಯನೂ, ಅದ್ವಿತೀಯನೂ, ಸಂಪೂರ್ಣನೂ, ಅನಂತರೂಪನೂ, ಬುದ್ಧಿಯ ಸಾಕ್ಷಿಯೂ, ಸತ್ ಅಸತ್ ಗಳಿಂದ ಭಿನ್ನನೂ, ನಾನು ಎಂಬ ಪದದಿಂದ ಗುರುತಿಸಿಕೊಳ್ಳುವವನೂ, ಸದಾ ಆನಂದರೂಪನೂ, ಪ್ರತ್ಯಕ್ ಸ್ವರೂಪನೂ ಆಗಿರುತ್ತಾನೆ. 

ಇತ್ಥಂ ವಿಪಶ್ಚಿತ್ಸದಸದ್ವಿಭಜ್ಯ
ನಿಶ್ಚಿತ್ಯ ತತ್ತ್ವಂ ನಿಜಬೋಧದೃಷ್ಟ್ಯಾ .
ಜ್ಞಾತ್ವಾ ಸ್ವಮಾತ್ಮಾನಮಖಂಡಬೋಧಂ
ತೇಭ್ಯೋ ವಿಮುಕ್ತಃ ಸ್ವಯಮೇವ ಶಾಮ್ಯತಿ .. 352..

ಜ್ಞಾನಿಯಾದ ಮುಮುಕ್ಷುವು ಸತ್ ಮತ್ತು ಅಸತ್ ಗಳನ್ನು ಹೀಗೆ ವಿಂಗಡಿಸಿ, ಸ್ವಾನುಭವ ದೃಷ್ಟಿಯಿಂದ ತತ್ವವನ್ನು ನಿಶ್ಚಯಿಸಿಕೊಂಡು, ಅಖಂಡ ಜ್ಞಾನಸ್ವರೂಪನಾದ ತನ್ನ ಆತ್ಮವನ್ನು ಅರಿತುಕೊಂಡು, ಅನಾತ್ಮ ವಸ್ತುಗಳಿಂದ ವಸ್ತುಗಳಿಂದ ಮುಕ್ತನಾಗಿ, ತಾನೇ ಶಾಂತನಾಗುತ್ತಾನೆ.

ಅಜ್ಞಾನಹೃದಯಗ್ರಂಥೇರ್ನಿಃಶೇಷವಿಲಯಸ್ತದಾ .
ಸಮಾಧಿನಾಽವಿಕಲ್ಪೇನ ಯದಾಽದ್ವೈತಾತ್ಮದರ್ಶನಂ .. 353..

ಯಾವಾಗ ನಿರ್ವಿಕಲ್ಪ ಸಮಾಧಿಯಿಂದ ಅದ್ವೈತನಾನಾದ ಪರಮಾತ್ಮನ ಸಾಕ್ಷಾತ್ಕಾರವಾಗುವದೋ, ಆಗಲೇ ಅಜ್ಞಾನವೆಂಬ ಹೃದಯಗೃಂಥಿಯು ಸಂಪೂರ್ಣವಾಗಿ ವಿನಾಶವಾಗುವದು.

ತ್ವಮಹಮಿದಮಿತೀಯಂ ಕಲ್ಪನಾ ಬುದ್ಧಿದೋಷಾತ್
ಪ್ರಭವತಿ ಪರಮಾತ್ಮನ್ಯದ್ವಯೇ ನಿರ್ವಿಶೇಷೇ .
ಪ್ರವಿಲಸತಿ ಸಮಾಧಾವಸ್ಯ ಸರ್ವೋ ವಿಕಲ್ಪೋ
ವಿಲಯನಮುಪಗಚ್ಛೇದ್ವಸ್ತುತತ್ತ್ವಾವಧೃತ್ಯಾ .. 354..

ಅದ್ವಿತೀಯನೂ ನಿರ್ವಿಶೇಷನೂ ಆದ ಪರಮಾತ್ಮನು, "ನಾನು , ನೀನು, ಅವನು" ಇತ್ಯಾದಿ ಕಲ್ಪನೆಯು ಮೌಢ್ಯದಿಂದ ಉಂಟಾಗುತ್ತದೆ. ಮನುಷ್ಯನಿಗೆ ಸಮಾಧಿ ಸ್ಥಿತಿಯಲ್ಲಿ (ಪರಮಾರ್ಥತತ್ತ್ವವು) ಪ್ರಕಾಶಿಸುವಾಗ, ವಸ್ತು ತತ್ವದ ಅವಧಾರಣೆಯ ಮೂಲಕ ಎಲ್ಲ ವಿಕಲ್ಪಗಳೂ ನಾಶವನ್ನು ಹೊಂದುತ್ತವೆ.

ಶಾಂತೋ ದಾಂತಃ ಪರಮುಪರತಃ ಕ್ಷಾಂತಿಯುಕ್ತಃ ಸಮಾಧಿಂ
ಕುರ್ವನ್ನಿತ್ಯಂ ಕಲಯತಿ ಯತಿಃ ಸ್ವಸ್ಯ ಸರ್ವಾತ್ಮಭಾವಂ .
ತೇನಾವಿದ್ಯಾತಿಮಿರಜನಿತಾನ್ಸಾಧು ದಗ್ಧ್ವಾ ವಿಕಲ್ಪಾನ್
ಬ್ರಹ್ಮಾಕೃತ್ಯಾ ನಿವಸತಿ ಸುಖಂ ನಿಷ್ಕ್ರಿಯೋ ನಿರ್ವಿಕಲ್ಪಃ .. 355..

ಶಾಂತನೂ, ಬಾಹ್ಯೇಂದ್ರಿಯಗಳನ್ನು ನಿಗ್ರಹಿಸಿದವನೂ, ವಿಷಯಗಳಿಂದ ಸಂಪೂರ್ಣ ಮುಕ್ತನೂ, ಸಹಿಷ್ಣುವೂ ಆದ ಯತಿಯು, ಸದಾ ಸಮಾಧಿ ಧ್ಯಾನ ಮಾಡುತ್ತ, ತನ್ನ ಸರ್ವಾತ್ಮಭಾವವನ್ನು ಅನುಭವಿಸುತ್ತಾನೆ. ಅವಿದ್ಯೆಯ ಅಂಧಕಾರದಿಂದ ಉಂಟಾಗುವ ವಿಕಲ್ಪಗಳನ್ನು ಚೆನ್ನಾಗಿ ಸುಟ್ಟು, ನಿಷ್ಕ್ರಿಯ, ನಿರ್ವಿಕಲ್ಪ ಬ್ರಹ್ಮಾಕೃತಿಯಿಂದ ಇರುತ್ತಾನೆ.

ಸಮಾಹಿತಾ ಯೇ ಪ್ರವಿಲಾಪ್ಯ ಬಾಹ್ಯಂ
ಶ್ರೋತ್ರಾದಿ ಚೇತಃ ಸ್ವಮಹಂ ಚಿದಾತ್ಮನಿ .
ತ ಏವ ಮುಕ್ತಾ ಭವಪಾಶಬಂಧೈಃ
ನಾನ್ಯೇ ತು ಪಾರೋಕ್ಷ್ಯಕಥಾಭಿಧಾಯಿನಃ .. 356..

ಯಾರು ಸಮಾಧಿಸ್ಥಿತರಾಗಿ, ತಮ್ಮ ಶ್ರವಣ ಇತ್ಯಾದಿ ಬಾಹ್ಯೇಂದ್ರಿಯಗಳನ್ನೂ,, ಮನಸ್ಸನ್ನೂ, ಅಹಂಕಾರವನ್ನೂ ಚಿದಾತ್ಮನಲ್ಲಿ ಲೀನ ಮಾಡುತ್ತಾರೋ , ಅವರೇ ಸಂಸಾರಬಂಧನದಿಂದ ಮುಕ್ತರಾಗುತ್ತಾರೇ ಹೊರತು, ಯಾರು ಕೇವಲ ಪರೋಕ್ಷ ಜ್ಞಾನದ ಬಗ್ಗೆ ಮಾತುಗಳನ್ನಾಡುತ್ತಾರೋ ಅವರಲ್ಲ.

ಉಪಾಧಿಭೇದಾತ್ಸ್ವಯಮೇವ ಭಿದ್ಯತೇ
ಚೋಪಾಧ್ಯಪೋಹೇ ಸ್ವಯಮೇವ ಕೇವಲಃ .
ತಸ್ಮಾದುಪಾಧೇರ್ವಿಲಯಾಯ ವಿದ್ವಾನ್
ವಸೇತ್ಸದಾಽಕಲ್ಪಸಮಾಧಿನಿಷ್ಠಯಾ .. 357..

ಆತ್ಮನು ಒಬ್ಬನೇ ಆಗಿದ್ದರೂ ಉಪಾಧಿಗಳ(ಬಿರುದಗಳ) ಭೇದದಿಂದ ಭೇದವನ್ನು ಹೊಂದುತ್ತಾನೆ, ಉಪಾಧಿಗಳನ್ನು ತೆಗೆದುಹಾಕಿದಾಗ ಅವನು ಒಬ್ಬನೇ ಆಗುತ್ತಾನೆ. ಆದುದರಿಂದ ಉಪಾಧಿಯ ನಾಶಕ್ಕಾಗಿ ಜ್ಞಾನಿಯು ಯಾವಾಗಲೂ ನಿರ್ವಿಕಲ್ಪಸಮಾಧಿಯ ನಿಷ್ಠೆಯಲ್ಲಿಯೇ ಇರಬೇಕು.

ಸತಿ ಸಕ್ತೋ ನರೋ ಯಾತಿ ಸದ್ಭಾವಂ ಹ್ಯೇಕನಿಷ್ಠಯಾ .
ಕೀಟಕೋ ಭ್ರಮರಂ ಧ್ಯಾಯನ್ ಭ್ರಮರತ್ವಾಯ ಕಲ್ಪತೇ .. 358..

ಕೀಟವು ಭ್ರಮರದ ಬಗ್ಗೇ ಯೋಚಿಸುತ್ತ ಅದೂ ಭ್ರಮರವಾಗುವಂತೆ, ಏಕನಿಷ್ಠೆಯಿಂದ ಸತ್ ರೂಪನಾದ ಬ್ರಹ್ಮನಲ್ಲೇ ಆಸಕ್ತನಾದ ಮನುಷ್ಯನು ತಾನೂ ಸತ್ ಭಾವವನ್ನು ಹೊಂದುತ್ತಾನೆ.

ಕ್ರಿಯಾಂತರಾಸಕ್ತಿಮಪಾಸ್ಯ ಕೀಟಕೋ
ಧ್ಯಾಯನ್ನಲಿತ್ವಂ ಹ್ಯಲಿಭಾವಮೃಚ್ಛತಿ .
ತಥೈವ ಯೋಗೀ ಪರಮಾತ್ಮತತ್ತ್ವಂ
ಧ್ಯಾತ್ವಾ ಸಮಾಯಾತಿ ತದೇಕನಿಷ್ಠಯಾ .. 359..

ಹೇಗೆ ಬೇರೆ ಎಲ್ಲ ಕ್ರಿಯೆಗಳಲ್ಲಿ ಆಸಕ್ತಿಯನ್ನು ತ್ಯಜಿಸಿ, ಕೇವಲ ಭ್ರಮರದ ಧ್ಯಾನವನ್ನು ಮಾಡುತ್ತ ಹುಳವು ಭ್ರಮರವಾಗಿ ರೂಪಾಂತರ ಹೊಂದುವದೋ, ಹಾಗೆಯೇ ಯೋಗಿಯು ಏಕನಿಷ್ಠೆಯಿಂದ ಪರಮಾತ್ಮತತ್ವವನ್ನು ಧ್ಯಾನಿಸುತ್ತ ಪರಮಾತ್ಮಭಾವವನ್ನು ಪಡೆಯುತ್ತಾನೆ.

ಅತೀವ ಸೂಕ್ಷ್ಮಂ ಪರಮಾತ್ಮತತ್ತ್ವಂ
ನ ಸ್ಥೂಲದೃಷ್ಟ್ಯಾ ಪ್ರತಿಪತ್ತುಮರ್ಹತಿ .
ಸಮಾಧಿನಾತ್ಯಂತಸುಸೂಕ್ಷ್ಮವೃತ್ತ್ಯಾ
ಜ್ಞಾತವ್ಯಮಾರ್ಯೈರತಿಶುದ್ಧಬುದ್ಧಿಭಿಃ .. 360..

ಪರಮಾತ್ಮತತ್ವವು ಅತೀ ಸೂಕ್ಷ್ಮವಾಗಿದೆ. ಸ್ಥೂಲದೃಷ್ಠಿಯಿಂದ ಯಾರೂ ಅದನ್ನು ಪಡೆಯಲಾರರು. ಆದುದರಿಂದ ಸತ್ಪುರುಷರು ಸಮಾಧಿಯಿಂದ, ಅತಿಸೂಕ್ಷ್ಮವೃತ್ತಿಯಿಂದ ಹಾಗೂ ಅತಿ ಶುದ್ಧಬುದ್ಧಿಯಿಂದ ಪರಮಾತ್ವತತ್ವವನ್ನು ತಿಳಿಯಬೇಕು.

ಯಥಾ ಸುವರ್ಣಂ ಪುಟಪಾಕಶೋಧಿತಂ
ತ್ಯಕ್ತ್ವಾ ಮಲಂ ಸ್ವಾತ್ಮಗುಣಂ ಸಮೃಚ್ಛತಿ .
ತಥಾ ಮನಃ ಸತ್ತ್ವರಜಸ್ತಮೋಮಲಂ
ಧ್ಯಾನೇನ ಸಂತ್ಯಜ್ಯ ಸಮೇತಿ ತತ್ತ್ವಂ .. 361..

ಹೇಗೆ ಪುಟಿಪಾಕದಿಂದ ಶೋಧಿಸಲ್ಪಟ್ಟ ಚಿನ್ನವು, ತನ್ನ ಕಶ್ಮಲವನ್ನು ಬಿಟ್ಟು ನಿಜವಾದ ಗುಣವನ್ನು ಹೊಂದುತ್ತದೆಯೋ,
ಹಾಗೆಯೆ ಮನಸ್ಸೂ
ಧ್ಯಾನದಿಂದ, ಸತ್ತ್ವರಜ-ತಮೋಗುಣಗಳ ಕಶ್ಮಲವನ್ನು  ಬಿಟ್ಟು, ಪರಮಾರ್ಥತತ್ವವನ್ನು ಹೊಂದುತ್ತದೆ.

ನಿರಂತರಾಭ್ಯಾಸವಶಾತ್ತದಿತ್ಥಂ
ಪಕ್ವಂ ಮನೋ ಬ್ರಹ್ಮಣಿ ಲೀಯತೇ ಯದಾ .
ತದಾ ಸಮಾಧಿಃ ಸವಿಕಲ್ಪವರ್ಜಿತಃ
ಸ್ವತೋಽದ್ವಯಾನಂದರಸಾನುಭಾವಕಃ .. 362..

ಹೀಗೆ ನಿರಂತರಧ್ಯಾನ ಅಭ್ಯಾಸದ ವಶದಿಂದ, ಆ ಮನಸ್ಸು ಪಕ್ವವಾಗಿ ಯಾವಾಗ ಬ್ರಹ್ಮದಲ್ಲಿ ಲಯವಾಗುತ್ತದೆಯೊ, ಆಗ ಅದು ತಾನೇ ಬ್ರಹ್ಮಾನಂದರಸದ ಅನುಭವಕ್ಕೆ ಕಾರಣವಾದ ನಿರ್ವಿಕಲ್ಪಸಮಾಧಿಯನ್ನು ಹೊಂದುತ್ತದೆ.

ಸಮಾಧಿನಾಽನೇನ ಸಮಸ್ತವಾಸನಾ-
ಗ್ರಂಥೇರ್ವಿನಾಶೋಽಖಿಲಕರ್ಮನಾಶಃ .
ಅಂತರ್ಬಹಿಃ ಸರ್ವತ ಏವ ಸರ್ವದಾ
ಸ್ವರೂಪವಿಸ್ಫೂರ್ತಿರಯತ್ನತಃ ಸ್ಯಾತ್ .. 363..

ಈ ನಿರ್ವಿಕಲ್ಪ ಸಮಾಧಿಯಿಂದ, ಸಮಸ್ತ ವಾಸನಾ-ಗ್ರಂಥಿಗಳ ನಾಶವಾಗಿ, ಅಖಿಲ ಕರ್ಮಗಳು ನಾಶವಾಗಿ, ಒಳಗೂ ಹೊರಗೂ, ಎಲ್ಲ ಕಡೆಗೂ, ಸದಾ ಕಾಲದಲ್ಲೂ, ಪ್ರಯತ್ನವಿಲ್ಲದೆ ಆತ್ಮಸ್ವರೂಪದ ಪ್ರಕಾಶವು ಬೆಳಗುತ್ತದೆ.

ಶ್ರುತೇಃ ಶತಗುಣಂ ವಿದ್ಯಾನ್ಮನನಂ ಮನನಾದಪಿ .
ನಿದಿಧ್ಯಾಸಂ ಲಕ್ಷಗುಣಮನಂತಂ ನಿರ್ವಿಕಲ್ಪಕಂ .. 364..

ಶ್ರವಣಕ್ಕಿಂತ ಮನನವು ನೂರುಪಾಲು ಅಧಿಕವೆಂದೂ, ಮನನಕ್ಕಿಂತ ನಿದಿಧ್ಯಾಸವು ಲಕ್ಷಪಾಲು ಅಧಿಕವೆಂದೂ, ನಿಧಿಧ್ಯಾಸಕ್ಕಿಂತ ನಿರ್ವಿಕಲ್ಪಸಮಾಧಿಯು ಅನಂತಪಾಲು ಅಧಿಕವೆಂದು ತಿಳಿಯಬೇಕು.

ನಿರ್ವಿಕಲ್ಪಕಸಮಾಧಿನಾ ಸ್ಫುಟಂ
ಬ್ರಹ್ಮತತ್ತ್ವಮವಗಮ್ಯತೇ ಧ್ರುವಂ .
ನಾನ್ಯಥಾ ಚಲತಯಾ ಮನೋಗತೇಃ
ಪ್ರತ್ಯಯಾಂತರವಿಮಿಶ್ರಿತಂ ಭವೇತ್ .. 365..

ನಿರ್ವಿಕಲ್ಪಸಮಾಧಿಯಿಂದ ನಿಶ್ಚಿತವಾಗಿ ಬ್ರಹ್ಮತತ್ವದ ಸ್ಪಷ್ಟ ಜ್ಞಾನ ಲಬ್ಧವಾಗುತ್ತದೆ. ಬೇರೆ ಯಾವ ಮಾರ್ಗದಿಂದಲೂ ಅಲ್ಲ. ಯಾಕೆಂದರೆ (ಸಮಾಧಿಯಿಲ್ಲದಿದ್ದರೆ) ಮನದ ಚಂಚಲತೆಯಿಂದ ಬೇರೆ ಯೋಚನೆಗಳು (ಬ್ರಹ್ಮಧ್ಯಾನದ ಹೊರತು) ಮಿಶ್ರಿತವಾಗುವ ಸಾಧ್ಯತೆ ಇರುತ್ತದೆ.

ಅತಃ ಸಮಾಧತ್ಸ್ವ ಯತೇಂದ್ರಿಯಃ ಸನ್
ನಿರಂತರಂ ಶಾಂತಮನಾಃ ಪ್ರತೀಚಿ .
ವಿಧ್ವಂಸಯ ಧ್ವಾಂತಮನಾದ್ಯವಿದ್ಯಯಾ
ಕೃತಂ ಸದೇಕತ್ವವಿಲೋಕನೇನ .. 366..


ಆದ್ದರಿಂದ  ಇಂದ್ರಿಯಗಳನ್ನು ನಿಯಂತ್ರಿಸಿ, ಶಾಂತಮನಸ್ಸಿನವನಾಗಿ,
ಪ್ರತ್ಯಗಾತ್ಮನಲ್ಲಿ ಮನಸ್ಸನ್ನು ಸದಾ ಸ್ಥಿರಗೊಳಿಸು. ಸದಾತ್ಮನು ಒಬ್ಬನೇ ಎಂಬುದನ್ನು ಸಾಕ್ಷಾತ್ಕಾರ ಮಾಡಿಕೊಂಡು,  ಅವಿದ್ಯೆಯಿಂದ ರಚಿತವಾದ ಅನಾದಿ ಕತ್ತಲೆಯನ್ನು ನಾಶಮಾಡಿಕೊ.

ಯೋಗಸ್ಯ ಪ್ರಥಮದ್ವಾರಂ ವಾಙ್ನಿರೋಧೋಽಪರಿಗ್ರಹಃ .  
ನಿರಾಶಾ ಚ ನಿರೀಹಾ ಚ ನಿತ್ಯಮೇಕಾಂತಶೀಲತಾ .. 367..

ವಾಕ್ ಸಂಯಮ, ಅಪರಿಗ್ರಹ, ಆಸೆಯಿಲ್ಲದಿರುವುದು, ಕರ್ಮವಿಲ್ಲದಿರುವುದು, ನಿತ್ಯ ಏಕಾಂತ ಇವು ಯೋಗದ ಸಿದ್ಧಿಗೆ ಪ್ರಥಮ ಬಾಗಿಲು (ಹೆಜ್ಜೆ).

ಏಕಾಂತಸ್ಥಿತಿರಿಂದ್ರಿಯೋಪರಮಣೇ ಹೇತುರ್ದಮಶ್ಚೇತಸಃ
ಸಂರೋಧೇ ಕರಣಂ ಶಮೇನ ವಿಲಯಂ ಯಾಯಾದಹಂವಾಸನಾ .
ತೇನಾನಂದರಸಾನುಭೂತಿರಚಲಾ ಬ್ರಾಹ್ಮೀ ಸದಾ ಯೋಗಿನಃ
ತಸ್ಮಾಚ್ಚಿತ್ತನಿರೋಧ ಏವ ಸತತಂ ಕಾರ್ಯಃ ಪ್ರಯತ್ನೋ ಮುನೇಃ .. 368..  

ಏಕಾಂತವಾಸವು ಇಂದ್ರಿಯನಿಗ್ರಹಕ್ಕೆ ಕಾರಣವಾಗುವದು. ಇಂದ್ರಿಯನಿಗ್ರಹವು ಚಿತ್ತ ನಿರೋಧಕ್ಕೆ ಕಾರಣವಾಗುವದು. ಚಿತ್ತ ನಿರೋಧದಿಂದ ಅಹಂ ವಾಸನೆಯು ಲಯವಾಗುತ್ತದೆ. ಅಹಂ ವಾಸನೆಯ ಲಯದಿಂದ ಯೋಗಿಗೆ ಬ್ರಹ್ಮಾನಂದರಸದ ಅನುಭವವು ಆಗುತ್ತದೆ. ಆದುದುರಿಂದ ಯೋಗಿಯು ಸತತವಾಗಿ ಮನೋ ನಿಗ್ರಹದ ಪ್ರಯತ್ನವನ್ನು ಮಾಡಬೇಕು.

ವಾಚಂ ನಿಯಚ್ಛಾತ್ಮನಿ ತಂ ನಿಯಚ್ಛ
ಬುದ್ಧೌ ಧಿಯಂ ಯಚ್ಛ ಚ ಬುದ್ಧಿಸಾಕ್ಷಿಣಿ .
ತಂ ಚಾಪಿ ಪೂರ್ಣಾತ್ಮನಿ ನಿರ್ವಿಕಲ್ಪೇ
ವಿಲಾಪ್ಯ ಶಾಂತಿಂ ಪರಮಾಂ ಭಜಸ್ವ .. 369..

ಮಾತನ್ನು ಮನಸ್ಸಿನಿಂದ ನಿಯಂತ್ರಿಸು. ಮನಸ್ಸನ್ನು ಬುದ್ಧಿಯಿಂದ. ಬುದ್ಧಿಯನ್ನು ಬುದ್ಧಿಯ ಸಾಕ್ಷಿಯಿಂದ ನಿಯಂತ್ರಿಸು. ಅದನ್ನೂ ನಿರ್ವಿಕಲ್ಪನಾದ ಪೂರ್ಣಾತ್ಮನಲ್ಲಿ ಲಯವಾಗಿಸಿ ಪರಮಶಾಂತಿಯನ್ನು ಹೊಂದು.

ದೇಹಪ್ರಾಣೇಂದ್ರಿಯಮನೋಬುದ್ಧ್ಯಾದಿಭಿರುಪಾಧಿಭಿಃ .
ಯೈರ್ಯೈರ್ವೃತ್ತೇಃ ಸಮಾಯೋಗಸ್ತತ್ತದ್ಭಾವೋಽಸ್ಯ ಯೋಗಿನಃ .. 370..

ಈ ಯೋಗಿಗೆ ದೇಹ, ಪ್ರಾಣ, ಇಂದ್ರಿಯ, ಮನಸ್ಸು, ಬುದ್ಧಿ ಮೊದಲಾದ ಉಪಾಧಿಗಳಲ್ಲಿ, ಯಾವ-ಯಾವುದರ ಜೊತೆಗೆ ಅಂತಕರಣವೃತ್ತಿಯ ಸಂಬಂಧವಾಗುತ್ತದೆಯೋ, ಆಯಾ ಭಾವ ಉಂಟಾಗುತ್ತದೆ.

ತನ್ನಿವೃತ್ತ್ಯಾ ಮುನೇಃ ಸಮ್ಯಕ್ ಸರ್ವೋಪರಮಣಂ ಸುಖಂ .
ಸಂದೃಶ್ಯತೇ ಸದಾನಂದರಸಾನುಭವವಿಪ್ಲವಃ .. 371..

ಇವೆಲ್ಲವುಗಳ ನಿವೃತ್ತಿಯಿಂದ ಮುನಿಗೆ ಸರ್ವೋಪರಮಣವಾದ ಸುಖ ಕಂಡುಬರುತ್ತದೆ ಮತ್ತು ಸದಾನಂದ ರಸಾನುಭವದ ಪರಿಪೂರ್ಣತೆ ಕಂಡುಬರುತ್ತದೆ.

ಅಂತಸ್ತ್ಯಾಗೋ ಬಹಿಸ್ತ್ಯಾಗೋ ವಿರಕ್ತಸ್ಯೈವ ಯುಜ್ಯತೇ .
ತ್ಯಜತ್ಯಂತರ್ಬಹಿಃಸಂಗಂ ವಿರಕ್ತಸ್ತು ಮುಮುಕ್ಷಯಾ .. 372..

ಆಂತರಿಕ ಮತ್ತು ಬಾಹ್ಯ ಈ ಎರಡೂ ವಿಧದ ತ್ಯಾಗ ವಿರಕ್ತನಿಗೆ ಮಾತ್ರ ಸಾಧ್ಯವಾಗುತ್ತದೆ. ವಿರಕ್ತನಾಗಿ ಮುಮುಕ್ಷುನಾದವನು ಅಂತರ್ ಮತ್ತು ಬಹಿ ಆಸಕ್ತಿಯನ್ನು ತ್ಯಜಿಸುತ್ತಾನೆ.

ಬಹಿಸ್ತು ವಿಷಯೈಃ ಸಂಗಂ ತಥಾಂತರಹಮಾದಿಭಿಃ .
ವಿರಕ್ತ ಏವ ಶಕ್ನೋತಿ ತ್ಯಕ್ತುಂ ಬ್ರಹ್ಮಣಿ ನಿಷ್ಠಿತಃ .. 373..

ಬ್ರಹ್ಮನಲ್ಲಿ ಆತ್ಮ ನೆಲೆಗೊಂಡು, ವಿರಕ್ತನಾಗಿರುವವನೇ ಹೊರಗೆ ವಿಷಯಾಸಕ್ತಿಯನ್ನೂ ಮತ್ತು ಒಳಗೆ ಅಹಂಕಾರಾದಿಗಳನ್ನೂ ತ್ಯಜಿಸಲು ಶಕ್ತನಾಗುತ್ತಾನೆ.

ವೈರಾಗ್ಯಬೋಧೌ ಪುರುಷಸ್ಯ ಪಕ್ಷಿವತ್
ಪಕ್ಷೌ ವಿಜಾನೀಹಿ ವಿಚಕ್ಷಣ ತ್ವಂ .
ವಿಮುಕ್ತಿಸೌಧಾಗ್ರಲತಾಧಿರೋಹಣಂ
ತಾಭ್ಯಾಂ ವಿನಾ ನಾನ್ಯತರೇಣ ಸಿಧ್ಯತಿ .. 374..

ಎಲೈ ವಿವೇಕಿಯಾದ ಶಿಷ್ಯನೇ, ವೈರಾಗ್ಯವೂ, ಜ್ಞಾನವೂ ಪಕ್ಷಿಯ ರೆಕ್ಕೆಗಳ ಹಾಗೆ- ಮನುಷ್ಯನ ಎರಡು ರೆಕ್ಕಗಳೆಂದು ತಿಳಿ. ಇವೆರಡರಲ್ಲಿ ಒಂದಿಲ್ಲದಿದ್ದರೂ ಮುಕ್ತಿಸೌಧದ ಮೇಲಕ್ಕೆ ಹತ್ತುವುದು ಸಾಧ್ಯವಾಗುವುದಿಲ್ಲ.

ಅತ್ಯಂತವೈರಾಗ್ಯವತಃ ಸಮಾಧಿಃ
ಸಮಾಹಿತಸ್ಯೈವ ದೃಢಪ್ರಬೋಧಃ .
ಪ್ರಬುದ್ಧತತ್ತ್ವಸ್ಯ ಹಿ ಬಂಧಮುಕ್ತಿಃ
ಮುಕ್ತಾತ್ಮನೋ ನಿತ್ಯಸುಖಾನುಭೂತಿಃ .. 375..

ಅತ್ಯಂತ ವೈರಾಗ್ಯವುಳ್ಳವನಿಗೇ ಸಮಾಧಿಯುಂಟಾಗುವದು. ಸಮಾಧಿಯಾದವನಿಗೆ ದೃಢ ಜ್ಞಾನ ಪ್ರಾಪ್ತವಾಗುವದು. ದೃಢ ಜ್ಞಾನವಾದವನಿಗೇ ಸಂಸಾರಬಂಧನದಿಂದ ಬಿಡುಗಡೆಯಾಗುವದು. ಬಿಡುಗಡೆಯಾದವನಿಗೇ ನಿತ್ಯಾನಂದದ ಅನುಭವ ಉಂಟಾಗುವದು. 

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60