ವಿವೇಕ ಚೂಡಾಮಣಿ - 276-300

ಯಥಾ ಯಥಾ ಪ್ರತ್ಯಗವಸ್ಥಿತಂ ಮನಃ
ತಥಾ ತಥಾ ಮುಂಚತಿ ಬಾಹ್ಯವಾಸನಾಂ .
ನಿಃಶೇಷಮೋಕ್ಷೇ ಸತಿ ವಾಸನಾನಾಂ
ಆತ್ಮಾನುಭೂತಿಃ ಪ್ರತಿಬಂಧಶೂನ್ಯಾ .. 276..

ಮನಸ್ಸು ಎಷ್ಟೆಷ್ಟು ಅಂತರಾತ್ಮನಲ್ಲಿ ಲೀನವಾಗುವದೋ, ಅಷ್ಟಷ್ಟು ಹೊರಗಿನ ಆಸೆಗಳನ್ನು ಬಿಡುತ್ತ ಹೋಗುತ್ತದೆ. ಆ ಆಸೆಗಳು ಸಂಪೂರ್ಣ ನಾಶವಾದಮೇಲೆ ಪ್ರತಿಬಂಧವಿಲ್ಲದೆ ಆತ್ಮಾನುಭೂತಿಯಾಗುತ್ತದೆ.

ಸ್ವಾತ್ಮನ್ಯೇವ ಸದಾ ಸ್ಥಿತ್ವಾ ಮನೋ ನಶ್ಯತಿ ಯೋಗಿನಃ .
ವಾಸನಾನಾಂ ಕ್ಷಯಶ್ಚಾತಃ ಸ್ವಾಧ್ಯಾಸಾಪನಯಂ ಕುರು .. 277..

ಆತ್ಮನಲ್ಲೇ ಸದಾ ನೆಲೆಸಿ, ಯೋಗಿಯ ಮನಸ್ಸು ನಾಶವಾಗುತ್ತದೆ. ಮತ್ತು ಆಸೆಗಳು ನಾಶವಾಗುತ್ತವೆ. ಆದ್ದರಿಂದ ನಿನ್ನ ಅಧ್ಯಾಸವನ್ನು ಹೋಗಲಾಡಿಸಿಕೋ.

ತಮೋ ದ್ವಾಭ್ಯಾಂ ರಜಃ ಸತ್ತ್ವಾತ್ ಸತ್ತ್ವಂ ಶುದ್ಧೇನ ನಶ್ಯತಿ .
ತಸ್ಮಾತ್ಸತ್ತ್ವಮವಷ್ಟಭ್ಯ ಸ್ವಾಧ್ಯಾಸಾಪನಯಂ ಕುರು .. 278..


ತಾಮಸ ಗುಣ ರಜಸ್ ಮತ್ತು ಸತ್ವಗುಣಗಳಿಂದ ನಾಶವಾಗುತ್ತದೆ. ರಜೋಗುಣ ಸತ್ವ ಗುಣದಿಂದ ನಾಶವಾಗುತ್ತದೆ. ಸತ್ವ ಗುಣ ಶುದ್ಧ ಸತ್ವದಿಂದ ನಾಶವಾಗುತ್ತದೆ. ಹಾಗಾಗಿ ಶುದ್ಧಸತ್ವದ ಅವಲಂಬಿಸಿ ನಿನ್ನ ಅಧ್ಯಾಸವನ್ನು ತೊಲಗಿಸಿಕೋ.
 
ಪ್ರಾರಬ್ಧಂ ಪುಷ್ಯತಿ ವಪುರಿತಿ ನಿಶ್ಚಿತ್ಯ ನಿಶ್ಚಲಃ .
ಧೈರ್ಯಮಾಲಂಬ್ಯ ಯತ್ನೇನ ಸ್ವಾಧ್ಯಾಸಾಪನಯಂ ಕುರು .. 279..


ಪ್ರಾರಬ್ಧವು ದೇಹವನ್ನು ಪೋಷಿಸುತ್ತದೆ ಎಂದು ನಿಶ್ಚಯಸಿಕೊಂಡು, ನಿಶ್ಚಲನಾಗಿ, ಧೈರ್ಯವನ್ನು ಅವಲಂಬಿಸಿ ಪ್ರಯತ್ನಪೂರ್ವಕವಾಗಿ ಅಧ್ಯಾಸವನ್ನು ಹೋಗಲಾಡಿಸಿಕೋ.

ನಾಹಂ ಜೀವಃ ಪರಂ ಬ್ರಹ್ಮೇತ್ಯತದ್ವ್ಯಾ ವೃತ್ತಿಪೂರ್ವಕಂ .
ವಾಸನಾವೇಗತಃ ಪ್ರಾಪ್ತ ಸ್ವಾಧ್ಯಾಸಾಪನಯಂ ಕುರು .. 280.


'ನಾನು ಜೀವನಲ್ಲ, ಪರ ಬ್ರಹ್ಮ' ಎಂದು (ತಿಳಿದು) ಅನಾತ್ಮವನ್ನು ತ್ಯಜಿಸಿ, (ಪೂರ್ವ) ವಾಸನೆಗಳಿಂದ ವೇಗದಿಂದ ನಿನ್ನಲ್ಲಿ ಉಂಟಾದ ಅಧ್ಯಾಸವನ್ನು ಹೋಗಲಾಡಿಸಿಕೋ. 

ಶ್ರುತ್ಯಾ ಯುಕ್ತ್ಯಾ ಸ್ವಾನುಭೂತ್ಯಾ ಜ್ಞಾತ್ವಾ ಸಾರ್ವಾತ್ಮ್ಯಮಾತ್ಮನಃ .
ಕ್ವಚಿದಾಭಾಸತಃ ಪ್ರಾಪ್ತ ಸ್ವಾಧ್ಯಾಸಾಪನಯಂ ಕುರು .. 281..


ಶ್ರುತಿ(ವೇದ-ಪುರಾಣಗಳು)ಯಿಂದಲೂ, ಯುಕ್ತಿಯಿಂದಲೂ, ಸ್ವ ಅನುಭವದಿಂದಲೂ ಆತ್ಮನು ಸರ್ವವ್ಯಾಪಕತೆಯನ್ನು ತಿಳಿದು, ಅಕಸ್ಮಾತ್ತಾಗಿ ಸ್ವಲ್ಪ ಆಭಾಸದಿಂದ ಆದ ಅಧ್ಯಾಸವನ್ನೂ ಹೋಗಲಾಡಿಸಿಕೋ. 

ಅನಾದಾನವಿಸರ್ಗಾಭ್ಯಾಮೀಷನ್ನಾಸ್ತಿ ಕ್ರಿಯಾ ಮುನೇಃ .
ತದೇಕನಿಷ್ಠಯಾ ನಿತ್ಯಂ ಸ್ವಾಧ್ಯಾಸಾಪನಯಂ ಕುರು .. 282..


ಮುನಿಗೆ ಸ್ವೀಕರಿಸುವದು ಅಥವಾ ಬಿಡುವದು ಯಾವುದೂ ಇಲ್ಲದಿರುವದರಿಂದ, ಅವನಿಗೆ ಯಾವ ಕರ್ತವ್ಯವೂ ಇರುವದಿಲ್ಲ. (ಅದಕ್ಕಾಗಿ) ಯಾವಾಗಲೂ ಬ್ರಹ್ಮನಲ್ಲಿ ಸದಾ ನಿಷ್ಠೆಯಿಂದಿದ್ದು ನಿನ್ನ ಅಧ್ಯಾಸವನ್ನು ಹೋಗಲಾಡಿಸಿಕೋ.

ತತ್ತ್ವಮಸ್ಯಾದಿವಾಕ್ಯೋತ್ಥಬ್ರಹ್ಮಾತ್ಮೈಕತ್ವಬೋಧತಃ .
ಬ್ರಹ್ಮಣ್ಯಾತ್ಮತ್ವದಾರ್ಢ್ಯಾಯ ಸ್ವಾಧ್ಯಾಸಾಪನಯಂ ಕುರು .. 283..


ತತ್ವಮಸಿ ಇತ್ಯಾದಿ ವಾಕ್ಯಗಳಿಂದ ಉತ್ಪನ್ನವಾದ ಜೀವಾತ್ಮ ಮತ್ತು ಪರಮಾತ್ಮರ ಏಕತೆಯ ಜ್ಞಾನದಿಂದ, ಆತ್ಮನೇ ಬ್ರಹ್ಮನೆಂದು ದೃಢ ಪಡಿಸಿಕೊಳ್ಳಲು ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೋ. 

ಅಹಂಭಾವಸ್ಯ ದೇಹೇಽಸ್ಮಿನ್ನಿಃಶೇಷವಿಲಯಾವಧಿ .
ಸಾವಧಾನೇನ ಯುಕ್ತಾತ್ಮಾ ಸ್ವಾಧ್ಯಾಸಾಪನಯಂ ಕುರು .. 284..


ಈ ದೇಹದಲ್ಲಿ 'ನಾನು' ಎಂಬ ಭಾವನೆ ಸಂಪೂರ್ಣವಾಗಿ ನಾಶವಾಗುವತನಕ, ಸಾವಧಾನದಿಂದ, ಯುಕ್ತಿಯಿಂದ ನಿನ್ನ ಅಧ್ಯಾಸವನ್ನು ಹೋಗಲಾಡಿಸಿಕೋ. 

ಪ್ರತೀತಿರ್ಜೀವಜಗತೋಃ ಸ್ವಪ್ನವದ್ಭಾತಿ ಯಾವತಾ .
ತಾವನ್ನಿರಂತರಂ ವಿದ್ವನ್ಸ್ವಾಧ್ಯಾಸಾಪನಯಂ ಕುರು .. 285..


ಹೇ ವಿದ್ವಾನ್, ಜೀವ, ಜಗತ್ತುಗಳ ಲೋಕ ಸ್ವಪ್ನದಂತೆ ಇರುವತನಕ, ನಿರಂತರವಾಗಿ ನಿನ್ನ ಅಧ್ಯಾಸವನ್ನು ಹೋಗಲಾಡಿಸಿಕೋ. 

ನಿದ್ರಾಯಾ ಲೋಕವಾರ್ತಾಯಾಃ ಶಬ್ದಾದೇರಪಿ ವಿಸ್ಮೃತೇಃ .
ಕ್ವಚಿನ್ನಾವಸರಂ ದತ್ತ್ವಾ ಚಿಂತಯಾತ್ಮಾನಮಾತ್ಮನಿ .. 286..


ನಿದ್ರೆಗಾಗಲೀ, ಲೋಕವಿಷಯಗಳಿಗಾಗಲೀ, ಶಬ್ದ ಇತ್ಯಾದಿ ವಿಸ್ಮೃತಿಗಳಿಗೆ ಸ್ವಲ್ಪವೂ ಅವಕಾಶ ಕೊಡದೇ, ಆತ್ಮನನ್ನು ಕುರಿತು ಚಿಂತಿಸು. 

ಮಾತಾಪಿತ್ರೋರ್ಮಲೋದ್ಭೂತಂ ಮಲಮಾಂಸಮಯಂ ವಪುಃ .
ತ್ಯಕ್ತ್ವಾ ಚಾಂಡಾಲವದ್ದೂರಂ ಬ್ರಹ್ಮೀಭೂಯ ಕೃತೀ ಭವ .. 287..


ತಂದೆ ತಾಯಿಯರ ಕಲ್ಮಶಗಳಿಂದ ಉದ್ಭವವಾದ, ಕಲ್ಮಶಗಳಿಂದ ಕೂಡಿದ ಈ ಶರೀರವನ್ನು ಬಹಿಷ್ಕೃತ ವ್ಯಕ್ತಿಯನ್ನು ದೂರವಿಟ್ಟಂತೆ ದೂರವಿಟ್ಟು, ಬ್ರಹ್ಮನಾಗಿ ಕೃತಕೃತ್ಯನಾಗು. 

ಘಟಾಕಾಶಂ ಮಹಾಕಾಶ ಇವಾತ್ಮಾನಂ ಪರಾತ್ಮನಿ .
ವಿಲಾಪ್ಯಾಖಂಡಭಾವೇನ ತೂಷ್ಣೀ ಭವ ಸದಾ ಮುನೇ .. 288..


ಹೇ ಮುನಿಯೇ, ಗಡಿಗೆಯಲ್ಲಿ ಕಂಡ ಆಕಾಶವು ಮಹಾಕಾಶದಲ್ಲಿ ಲೀನವಾಗುವಂತೆ, ಆತ್ಮನನ್ನು ಪರಮಾತ್ಮನಲ್ಲಿ ಲೀನವಾಗಿಸಿ ಅಖಂಡ ಭಾವದಿಂದ ಶಾಂತನಾಗು. 

ಸ್ವಪ್ರಕಾಶಮಧಿಷ್ಠಾನಂ ಸ್ವಯಂಭೂಯ ಸದಾತ್ಮನಾ .
ಬ್ರಹ್ಮಾಂಡಮಪಿ ಪಿಂಡಾಂಡಂ ತ್ಯಜ್ಯತಾಂ ಮಲಭಾಂಡವತ್ .. 289..


ಸ್ವಪ್ರಕಾಶನಾಗಿ, ಸತ್ ಸ್ವರೂಪನಾಗಿ, ಸ್ವಯಂಭುವಾಗಿ, ಸದಾತ್ಮನಾಗಿ ಬ್ರಹ್ಮಾಂಡವನ್ನೂ ಹಾಗೂ ಶರೀರವನ್ನೂ ಕೆಸರು ತುಂಬಿದ ಪಾತ್ರೆಯಂತೆ ತ್ಯಜಿಸು. 

ಚಿದಾತ್ಮನಿ ಸದಾನಂದೇ ದೇಹಾರೂಢಾಮಹಂಧಿಯಂ .
ನಿವೇಶ್ಯ ಲಿಂಗಮುತ್ಸೃಜ್ಯ ಕೇವಲೋ ಭವ ಸರ್ವದಾ .. 290..


ದೇಹದಲ್ಲಿ ಕುಳಿತಿರುವ ನಾನು ಎಂಬ ಭಾವವನ್ನು ಸದಾನಂದನಾದ ಚಿದಾತ್ಮನಲ್ಲಿ ಸ್ಥಾಪಸಿ, ಸೂಕ್ಷ್ಮ ಶರೀರವನ್ನು ಬಿಟ್ಟು ಸದಾ ಅಸಂಗನಾಗು. 

ಯತ್ರೈಷ ಜಗದಾಭಾಸೋ ದರ್ಪಣಾಂತಃ ಪುರಂ ಯಥಾ .
ತದ್ಬ್ರಹ್ಮಾಹಮಿತಿ ಜ್ಞಾತ್ವಾ ಕೃತಕೃತ್ಯೋ ಭವಿಷ್ಯಸಿ .. 291..

 
ಕನ್ನಡಿಯಲ್ಲಿ ಕಾಣುವ ನಗರದಂತೆ, ಯಾವುದರಲ್ಲಿ ಜಗತ್ತೆಂಬ ಮಿಥ್ಯೆ ಕಾಣುವದೋ, ಆ ಬ್ರಹ್ಮ ನೀನೆಂದು ತಿಳಿದು ಕೃತಕೃತ್ಯನಾಗು. 

ಯತ್ಸತ್ಯಭೂತಂ ನಿಜರೂಪಮಾದ್ಯಂ
    ಚಿದದ್ವಯಾನಂದಮರೂಪಮಕ್ರಿಯಂ .
ತದೇತ್ಯ ಮಿಥ್ಯಾವಪುರುತ್ಸೃಜೇತ
    ಶೈಲೂಷವದ್ವೇಷಮುಪಾತ್ತಮಾತ್ಮನಃ .. 292..


ಯಾವುದು ಸತ್ ಸ್ವರೂಪವೋ, ಪುರಾತನವೋ, ಅಖಂಡಾನಂದವೋ, ರೂಪರಹಿತವೋ, ಕ್ರಿಯಾಶೂನ್ಯವೋ, ಆ ಆತ್ಮನ ನಿಜಸ್ವರೂಪವನ್ನು ಹೊಂದಿ, ನಟನು ವೇಷ ಕಳಚುವಂತೆ ಮಿಥ್ಯೆಯಾದ ಶರೀರವನ್ನು ತ್ಯಜಿಸಬೇಕು. 

ಸರ್ವಾತ್ಮನಾ ದೃಶ್ಯಮಿದಂ ಮೃಷೈವ
    ನೈವಾಹಮರ್ಥಃ ಕ್ಷಣಿಕತ್ವದರ್ಶನಾತ್ .
ಜಾನಾಮ್ಯಹಂ ಸರ್ವಮಿತಿ ಪ್ರತೀತಿಃ
    ಕುತೋಽಹಮಾದೇಃ ಕ್ಷಣಿಕಸ್ಯ ಸಿಧ್ಯೇತ್ .. 293..

 
ಬಾಹ್ಯಜಗತ್ತಿನ ಎಲ್ಲ ವಸ್ತುಗಳು ಮಿಥ್ಯೆಯೆ ಆಗಿರುತ್ತವೆ.  ಕ್ಷಣಿಕವಾಗಿ ಕಂಡುಬರುವ 'ನಾನು' ಎಂಬ ವಸ್ತುವೂ ಮಿಥ್ಯೆಯೇ. ಅಹಂ ಇತ್ಯಾದಿಗಳೇ ಕ್ಷಣಿಕವಾದಾಗ  'ನಾನು ಎಲ್ಲವನ್ನು ತಿಳಿದಿದ್ದೇನೆ'  ಎಂಬದು ಹೇಗೆ ನಿಜವಾದೀತು?

ಅಹಂಪದಾರ್ಥಸ್ತ್ವಹಮಾದಿಸಾಕ್ಷೀ
    ನಿತ್ಯಂ ಸುಷುಪ್ತಾವಪಿ ಭಾವದರ್ಶನಾತ್ .
ಬ್ರೂತೇ ಹ್ಯಜೋ ನಿತ್ಯ ಇತಿ ಶ್ರುತಿಃ ಸ್ವಯಂ
    ತತ್ಪ್ರತ್ಯಗಾತ್ಮಾ ಸದಸದ್ವಿಲಕ್ಷಣಃ .. 294..


ಆದರೆ ನಿಜವಾದ 'ನಾನು' ಎನ್ನುವದು ಅಹಂಕಾರವೇ ಮೊದಲಾದುವುಗಳಿಗೆ ಸಾಕ್ಷಿಯಾಗಿರುತ್ತ ದೆ; ಏಕೆಂದರೆ ಅದು ಯಾವಾಗಲೂ ಇರುತ್ತದೆ,  ಸುಷುಪ್ತಿಯಲ್ಲಿ ಕೂಡ ಇರುವುದು ಕಂಡುಬರುತ್ತದೆ. "ಅದು ಜನ್ಮರಹಿತ ಹಾಗೂ ನಿತ್ಯ' ಎಂದು ಶ್ರುತಿಯೇ ಹೇಳುತ್ತದೆ. ಅದು ಪ್ರತ್ಯಗಾತ್ಮ,  ಸ್ಥೂಲಸೂಕ್ಷ್ಮಗಳಿಗಿಂತ ಭಿನ್ನ. 

ವಿಕಾರಿಣಾಂ ಸರ್ವವಿಕಾರವೇತ್ತಾ
ನಿತ್ಯಾವಿಕಾರೋ ಭವಿತುಂ ಸಮರ್ಹತಿ .
ಮನೋರಥಸ್ವಪ್ನಸುಷುಪ್ತಿಷು ಸ್ಫುಟಂ
ಪುನಃ ಪುನರ್ದೃಷ್ಟಮಸತ್ತ್ವಮೇತಯೋಃ .. 295..


ಬದಲಾಗುವ ವಸ್ತುಗಳ ಬದಲಾವಣೆಯನ್ನೆಲ್ಲ ಅರಿಯುವವನು, ಬದಲಾಗದವನೂ, ನಿತ್ಯನೂ ಆಗಿರಲೇ ಬೇಕು. ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಮಿಥ್ಯಾರೂಪ, ಕಲ್ಪನೆ,ಸ್ವಪ್ನ ಮತ್ತು ಸುಷುಪ್ತಿ ಮೂರು ಅವಸ್ಥೆಯಲ್ಲೂ ಪದೇ ಪದೇ ಕಂಡು ಬರುತ್ತದೆ. 
 
ಅತೋಽಭಿಮಾನಂ ತ್ಯಜ ಮಾಂಸಪಿಂಡೇ
    ಪಿಂಡಾಭಿಮಾನಿನ್ಯಪಿ ಬುದ್ಧಿಕಲ್ಪಿತೇ .
ಕಾಲತ್ರಯಾಬಾಧ್ಯಮಖಂಡಬೋಧಂ
    ಜ್ಞಾತ್ವಾ ಸ್ವಮಾತ್ಮಾನಮುಪೈಹಿ ಶಾಂತಿಂ .. 296..

ಆದುದರಿಂದ ಮಾಂಸಪಿಂಡವಾದ ಈ ದೇಹದಲ್ಲಿ ಅಭಿಮಾನ್ನು ಬಿಡು ಮತ್ತು ಬುದ್ಧಿಯು ಕಲ್ಪಿಸಿರುವ "ನಾನು" ಎಂಬ ಅಹಂಕಾರದಲ್ಲಿಯೂ ಅಭಿಮಾನವನ್ನು ಬಿಡು. ತ್ರಿಕಾಲದಲ್ಲಿಯೂ ಬಾಧಿತವಾಗದ, ಅಖಂಡಜ್ಞಾನಸ್ವರೂಪನಾದ ನಿನ್ನ ಆತ್ಮನನ್ನು ಅರಿತುಕೊಂಡು, ಶಾಂತಿಯನ್ನು ಹೊಂದು.

ತ್ಯಜಾಭಿಮಾನಂ ಕುಲಗೋತ್ರನಾಮ-
    ರೂಪಾಶ್ರಮೇಷ್ವಾರ್ದ್ರಶವಾಶ್ರಿತೇಷು .
ಲಿಂಗಸ್ಯ ಧರ್ಮಾನಪಿ ಕರ್ತೃತಾದೀಂ-
    ಸ್ತ್ಯಕ್ತ್ವಾ ಭವಾಖಂಡಸುಖಸ್ವರೂಪಃ .. 297..


ಈ ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ ಕುಲ, ಗೋತ್ರ,, ನಾಮ, ರೂಪ, ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಡು; ಶರೀರಕ್ಕೆ ಸೇರಿದ ಕರ್ತೃತ್ವವೇ ಮೊದಲಾದ ಧರ್ಮಗಳನ್ನೂ ಬಿಟ್ಟು ಅಖಂಡಾನಂದ ಸ್ವರೂಪನಾಗು.

ಸಂತ್ಯನ್ಯೇ ಪ್ರತಿಬಂಧಾಃ ಪುಂಸಃ ಸಂಸಾರಹೇತವೋ ದೃಷ್ಟಾಃ .
ತೇಷಾಮೇವಂ ಮೂಲಂ ಪ್ರಥಮವಿಕಾರೋ ಭವತ್ಯಹಂಕಾರಃ .. 298..


ಮನುಷ್ಯನ ಸಂಸಾರ ಬಂಧನಕ್ಕೆ ಕಾರಣವಾಗುವ ಕೆಲವು ಅಡಚಣೆಗಳು ಕಂಡುಬರುತ್ತವೆ. ಅವುಗಳಲ್ಲಿ ಮೊದಲನೆಯ ವಿಕಾರವಾದ ಅಹಂಕಾರವೇ ಮೂಲವಾಗಿರುತ್ತದೆ.

ಯಾವತ್ಸ್ಯಾತ್ಸ್ವಸ್ಯ ಸಂಬಂಧೋಽಹಂಕಾರೇಣ ದುರಾತ್ಮನಾ .
ತಾವನ್ನ ಲೇಶಮಾತ್ರಾಪಿ ಮುಕ್ತಿವಾರ್ತಾ ವಿಲಕ್ಷಣಾ .. 299..

ದುಷ್ಟ ಸ್ವಭಾವದ ಅಹಂಕಾರದೊಂದಿಗೆ ಎಲ್ಲಿಯವರೆಗೆ ಸಂಬಂಧವಿರುವುದೊ, ಅಲ್ಲಿಯ ವರೆಗೂ ವಿಲಕ್ಷಣವಾದ ಮೋಕ್ಷದ ವಾರ್ತೆ ಲೇಶಮಾತ್ರವೂ ಇರುವುದಿಲ್ಲ.

ಅಹಂಕಾರಗ್ರಹಾನ್ಮುಕ್ತಃ ಸ್ವರೂಪಮುಪಪದ್ಯತೇ .
ಚಂದ್ರವದ್ವಿಮಲಃ ಪೂರ್ಣಃ ಸದಾನಂದಃ ಸ್ವಯಂಪ್ರಭಃ .. 300..


ಅಹಂಕಾರದಿಂದ ಮುಕ್ತನಾದವನು, ರಾಹುವಿನಿಂದ ಬಿಡಲ್ಲಟ್ಟ ಚಂದ್ರನಂತೆ, ಪರಿಪೂರ್ಣನೂ ನಿತ್ಯಾನಂದನೂ ಸ್ವಯಂಪ್ರಕಾಶನೂ ಆಗಿ ತನ್ನ ನಿಜಸ್ವರೂಪವನ್ನು ಹೊಂದುತ್ತಾನೆ.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60