ವಿವೇಕ ಚೂಡಾಮಣಿ - 251-275

ಮೃತ್ಕಾರ್ಯಂ ಸಕಲಂ ಘಟಾದಿ ಸತತಂ ಮೃನ್ಮಾತ್ರಮೇವಾಹಿತಂ
    ತದ್ವತ್ಸಜ್ಜನಿತಂ ಸದಾತ್ಮಕಮಿದಂ ಸನ್ಮಾತ್ರಮೇವಾಖಿಲಂ .
ಯಸ್ಮಾನ್ನಾಸ್ತಿ ಸತಃ ಪರಂ ಕಿಮಪಿ ತತ್ಸತ್ಯಂ ಸ ಆತ್ಮಾ ಸ್ವಯಂ
    ತಸ್ಮಾತ್ತತ್ತ್ವಮಸಿ ಪ್ರಶಾಂತಮಮಲಂ ಬ್ರಹ್ಮಾದ್ವಯಂ ಯತ್ಪರಂ .. 251..


ಮಣ್ಣಿನಿಂದ ಮಾಡಲ್ಪಟ್ಟ ಮಡಿಕೆ ಇತ್ಯಾದಿಗಳೆಲ್ಲವೂ ಮಣ್ಣೇ ಹೊರತು ಬೇರೇನೂ ಅಲ್ಲ, ಅದರಂತೆಯೇ ಸತ್ ನಿಂದ ಜನಿಸಿದ ಎಲ್ಲವೂ ಸತ್ (ಬ್ರಹ್ಮ) ಮಾತ್ರ. ಬ್ರಹ್ಮನ ಹೊರತು ಇನ್ನೇನೂ ಇಲ್ಲ. ಅದೇ ನೀನು, ಪ್ರಶಾಂತ, ಶುದ್ಧ, ಅದ್ವಿತೀಯ ಆತ್ಮ ನೀನು.

ನಿದ್ರಾಕಲ್ಪಿತದೇಶಕಾಲವಿಷಯಜ್ಞಾತ್ರಾದಿ ಸರ್ವಂ ಯಥಾ
    ಮಿಥ್ಯಾ ತದ್ವದಿಹಾಪಿ ಜಾಗ್ರತಿ ಜಗತ್ಸ್ವಾಜ್ಞಾನಕಾರ್ಯತ್ವತಃ .
ಯಸ್ಮಾದೇವಮಿದಂ ಶರೀರಕರಣಪ್ರಾಣಾಹಮಾದ್ಯಪ್ಯಸತ್
    ತಸ್ಮಾತ್ತತ್ತ್ವಮಸಿ ಪ್ರಶಾಂತಮಮಲಂ ಬ್ರಹ್ಮಾದ್ವಯಂ ಯತ್ಪರಂ .. 252..


ಕನಸಿನಲ್ಲಿ ಕಂಡ ದೇಶ, ಕಾಲ, ವಿಷಯ, ಅವುಗಳನ್ನು ನೋಡುವವನು ಇವೆಲ್ಲವೂ ಹೇಗೆ ಸುಳ್ಳೋ, ಹಾಗೆಯೇ ಜಾಗ್ರತಾವಸ್ಥೆಯಲ್ಲಿ ಕಂಡ ಜಗತ್ತೂ ಸಹ ನಮ್ಮ ಅಜ್ಞಾನದಿಂದ ರಚಿಸಲ್ಪಟ್ಟಿರುವ ಸುಳ್ಳು. ಈ ದೇಹ, ಅಂಗಗಳು, ಪ್ರಾಣ, ಅಹಂಕಾರ ಎಲ್ಲವೂ ಅಸತ್ಯವಾಗಿರುವದರಿಂದ, ಪ್ರಶಾಂತ, ಶುದ್ಧ, ಅದ್ವಿತೀಯ, ಪರಬ್ರಹ್ಮ ಯಾರೋ, ಅದೇನೀನಾಗಿರುವೆ.

ಯತ್ರ ಭ್ರಾಂತ್ಯಾ ಕಲ್ಪಿತಂ ತದ್ವಿವೇಕೇ
    ತತ್ತನ್ಮಾತ್ರಂ ನೈವ ತಸ್ಮಾದ್ವಿಭಿನ್ನಂ .
ಸ್ವಪ್ನೇ ನಷ್ಟಂ ಸ್ವಪ್ನವಿಶ್ವಂ ವಿಚಿತ್ರಂ
    ಸ್ವಸ್ಮಾದ್ಭಿನ್ನಂ ಕಿನ್ನು ದೃಷ್ಟಂ ಪ್ರಬೋಧೇ .. 253..


ಜಾತಿನೀತಿಕುಲಗೋತ್ರದೂರಗಂ
    ನಾಮರೂಪಗುಣದೋಷವರ್ಜಿತಂ .
ದೇಶಕಾಲವಿಷಯಾತಿವರ್ತಿ ಯದ್
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 254..


ಜಾತಿ, ನೀತಿ, ಕುಲ, ಗೋತ್ರಗಳಿಂದ ದೂರವಾದ, ನಾಮ, ರೂಪ, ಗುಣ, ದೋಷಗಳಿಲ್ಲದ, ದೇಶ, ಕಾಲ, ವಿಷಯಗಳನ್ನು ಮೀರಿರುವ ಯಾವ ಬ್ರಹ್ಮನಿರುವನೋ, ಆ ಬ್ರಹ್ಮ ನೀನೇ ಆಗಿರುವೆ. ಇದನ್ನು ತಿಳಿದುಕೋ.

ಯತ್ಪರಂ ಸಕಲವಾಗಗೋಚರಂ
    ಗೋಚರಂ ವಿಮಲಬೋಧಚಕ್ಷುಷಃ .
ಶುದ್ಧಚಿದ್ಘನಮನಾದಿ ವಸ್ತು ಯದ್
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 255..

ಯಾವುದು ಶಬ್ದಗಳಿಗೆ ನಿಲುಕುವದಿಲ್ಲವೋ (ವರ್ಣನಾತೀತವೋ), ಯಾವುದು ಪರಿಶುದ್ಧವಾದ ಕಣ್ಣುಗಳಿಗೆ ಮಾತ್ರ ಕಾಣುವದೋ, ಯಾವುದು ಶುದ್ಧವೋ, ಜ್ಞಾನದ ಸ್ವರೂಪವೋ, ಅನಾದಿಯೋ, ಆ ಬ್ರಹ್ಮ ನೀನಾಗಿರುವೆ. ತಿಳಿದುಕೋ.

ಷಡ್ಭಿರೂರ್ಮಿಭಿರಯೋಗಿ ಯೋಗಿಹೃದ್-
    ಭಾವಿತಂ ನ ಕರಣೈರ್ವಿಭಾವಿತಂ .
ಬುದ್ಧ್ಯವೇದ್ಯಮನವದ್ಯಮಸ್ತಿ ಯದ್
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 256..


ಯಾವುದು ಆರು ಅಲೆಗಳಿಂದ (ಹಸಿವು, ಬಾಯಾರಿಕೆ, ಮುಪ್ಪು, ಸಾವು, ಶೋಕ, ಮೋಹ) ಕೂಡಿಲ್ಲವೋ, ಯಾವುದು ಯೋಗಿಗಳ ಹೃದಯದಲ್ಲಿ ಧ್ಯಾನಿಸಲ್ಪಡುವದೋ, ಯಾವುದು ಇಂದ್ರಿಯಗಳಿಂದ ಗ್ರಹಿಸಲ್ಪಡುವದಿಲ್ಲವೋ, ಯಾವುದು ಬುದ್ಧಿಯಿಂದ ತಿಳಿಯಲಾಗುವದಿಲ್ಲವೋ, ಯಾವುದು ದೋಷರಹಿತವೋ, ಆ ಬ್ರಹ್ಮನೇ ನೀನು, ತಿಳಿದುಕೋ.

ಭ್ರಾಂತಿಕಲ್ಪಿತಜಗತ್ಕಲಾಶ್ರಯಂ
    ಸ್ವಾಶ್ರಯಂ ಚ ಸದಸದ್ವಿಲಕ್ಷಣಂ .
ನಿಷ್ಕಲಂ ನಿರುಪಮಾನವದ್ಧಿ ಯದ್
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 257..


ಯಾವುದು ಭ್ರಮೆಯಿಂದ ಕಲ್ಪಿತವಾದ ಜಗತ್ತಿನ ಆಶ್ರಯವೋ, ಯಾವುದು ತನಗೆ ತಾನೇ ಆಶ್ರಯವೋ, ಸತ್ ಮತ್ತು ಅಸತ್-ಗಳಿಂದ ಯಾವುದು ಭಿನ್ನವೋ, ಯಾವುದು ಅಂಗರಹಿತವೋ, ಯಾವುದು ಉಪಮೆಯಿಲ್ಲದಿರುವದೋ, ಆ ಬ್ರಹ್ಮ ನೀನಾಗಿರುವೆ. ತಿಳಿದುಕೋ.

ಜನ್ಮವೃದ್ಧಿಪರಿಣತ್ಯಪಕ್ಷಯ-
    ವ್ಯಾಧಿನಾಶನವಿಹೀನಮವ್ಯಯಂ .
ವಿಶ್ವಸೃಷ್ಟ್ಯವವಿಘಾತಕಾರಣಂ
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 258..


ಯಾವುದಕ್ಕೆ ಜನ್ಮ, ವೃದ್ಧಿ, ಕ್ಷಯ, ರೋಗ, ನಾಶಗಳಿಲ್ಲವೋ, ಯಾವುದು ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ನಾಶಕ್ಕೆ ಕಾರಣವೋ, ಆ ಬ್ರಹ್ಮ ನೀನಾಗಿರುವೆ. ತಿಳಿದುಕೋ.

ಅಸ್ತಭೇದಮನಪಾಸ್ತಲಕ್ಷಣಂ
    ನಿಸ್ತರಂಗಜಲರಾಶಿನಿಶ್ಚಲಂ .
ನಿತ್ಯಮುಕ್ತಮವಿಭಕ್ತಮೂರ್ತಿ ಯದ್
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 259..


ಭೇದವಿಲ್ಲದ, ಎಂದೂ ನಾಶವಾಗದ, ಅಲೆಗಳಿಲ್ಲದ ಸಾಗರದಂತೆ ನಿಶ್ಚಲವಾದ, ನಿತ್ಯಮುಕ್ತವಾದ, ಅಖಂಡಮೂರ್ತಿಯಾದ ಬ್ರಹ್ಮ ನೀನಾಗಿರುವೆ. ತಿಳಿದುಕೋ.

ಏಕಮೇವ ಸದನೇಕಕಾರಣಂ
    ಕಾರಣಾಂತರನಿರಾಸ್ಯಕಾರಣಂ .
ಕಾರ್ಯಕಾರಣವಿಲಕ್ಷಣಂ ಸ್ವಯಂ
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 260..

ಏಕಮೇವನಾದ, ಅನೇಕ ವಸ್ತುಗಳ ಕಾರಣವಾದ, ಬೇರೆ ಕಾರಣಗಳನ್ನು ಹೋಗಲಾಡಿಸುವ, ಕಾರಣವಿಲ್ಲದ, ಕಾರ್ಯ ಮತ್ತು ಕಾರಣಗಳಿಂದ ಭಿನ್ನವಾದ, ಬ್ರಹ್ಮ ನೀನಾಗಿರುವೆ. ತಿಳಿದುಕೋ.

ನಿರ್ವಿಕಲ್ಪಕಮನಲ್ಪಮಕ್ಷರಂ
    ಯತ್ ಕ್ಷರಾಕ್ಷರವಿಲಕ್ಷಣಂ ಪರಂ .
ನಿತ್ಯಮವ್ಯಯಸುಖಂ ನಿರಂಜನಂ
   ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 261..

ನಿರ್ವಿಕಲ್ಪನೂ, ಮಹತ್ತರನೂ, ಅವಿನಾಶಿಯೂ, ಶರೀರ-ಜೀವಗಳಿಂದ ಭಿನ್ನನಾದವನೂ, ನಿತ್ಯನೂ, ಅವ್ಯಯನೂ, ಆನಂದಸ್ವರೂಪನೂ, ನಿಷ್ಕಲಂಕನೂ ಆಗಿರುವ ಆ ಬ್ರಹ್ಮ ನೀನು. ಇದನ್ನು ಹೃದಯದಲ್ಲಿ ತಿಳಿದುಕೋ.

ಯದ್ವಿಭಾತಿ ಸದನೇಕಧಾ ಭ್ರಮಾ-
    ನ್ನಾಮರೂಪಗುಣವಿಕ್ರಿಯಾತ್ಮನಾ .
ಹೇಮವತ್ಸ್ವಯಮವಿಕ್ರಿಯಂ ಸದಾ
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 262..
 

ಯಾವದು ಭ್ರಮೆಯಿಂದ, ನಾಮ, ರೂಪ, ಗುಣಗಳ ವಿಕಾರದಿಂದ ಅನೇಕವೆಂದು ಕಾಣುವದೋ, ಯಾವುದು ಚಿನ್ನದಂತೆ ಯಾವಾಗಲೂ ವಿಕಾರರಹಿತವೋ, ಆ ಬ್ರಹ್ಮ ನೀನಾಗಿರುವೆ. ಹೃದಯದಲ್ಲಿ ತಿಳಿದುಕೋ.

ಯಚ್ಚಕಾಸ್ತ್ಯನಪರಂ ಪರಾತ್ಪರಂ
    ಪ್ರತ್ಯಗೇಕರಸಮಾತ್ಮಲಕ್ಷಣಂ .
ಸತ್ಯಚಿತ್ಸುಖಮನಂತಮವ್ಯಯಂ
    ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ .. 263..

 ಯಾವುದು ಎಲ್ಲಕ್ಕಿಂತ ಶ್ರೇಷ್ಠವಾಗಿ ಪ್ರಕಾಶಸುವದೋ, ಯಾವದು ಪರಾತ್ಪರವೋ, ಸರ್ವಾಂತರ್ಯಾಮಿಯೋ, ಸಚ್ಚಿನಾನಂದವೋ, ಅನಂತವೋ, ಅವ್ಯಯವೋ, ಆ ಬ್ರಹ್ಮ ನೀನಾಗಿರುವೆ. ಹೃದಯದಲ್ಲಿ ತಿಳಿದುಕೋ.

ಉಕ್ತಮರ್ಥಮಿಮಮಾತ್ಮನಿ ಸ್ವಯಂ
    ಭಾವಯೇತ್ಪ್ರಥಿತಯುಕ್ತಿಭಿರ್ಧಿಯಾ .
ಸಂಶಯಾದಿರಹಿತಂ ಕರಾಂಬುವತ್
    ತೇನ ತತ್ತ್ವನಿಗಮೋ ಭವಿಷ್ಯತಿ .. 264..

ಇಲ್ಲಿಯವರೆಗೆ ಹೇಳಿದ ಸತ್ಯವನ್ನು ಬುದ್ಧಿಯಿಂದ ಮತ್ತು ಬಲ್ಲ ಯುಕ್ತಿಗಳಿಂದ ಅರ್ಥ ಮಾಡಿಕೊಂಡು ಧ್ಯಾನಿಸಬೇಕು. ಇದರಿಂದ ಸಂಶಯರಹಿತವಾಗಿ ಪರತತ್ವವು ಕೈಯಲ್ಲಿರುವ ನೀರಿನಷ್ಟು ಸುಲಭವಾಗುತ್ತದೆ.

ಸಂಬೋಧಮಾತ್ರಂ ಪರಿಶುದ್ಧತತ್ತ್ವಂ
    ವಿಜ್ಞಾಯ ಸಂಘೇ ನೃಪವಚ್ಚ ಸೈನ್ಯೇ .
ತದಾಶ್ರಯಃ ಸ್ವಾತ್ಮನಿ ಸರ್ವದಾ ಸ್ಥಿತೋ
    ವಿಲಾಪಯ ಬ್ರಹ್ಮಣಿ ವಿಶ್ವಜಾತಂ .. 265..

ಸೈನ್ಯದ ಮಧ್ಯದಲ್ಲಿರುವ ರಾಜನಂತೆ, ಈ ಶರೀರದ ಮಧ್ಯದಲ್ಲಿರುವ ಪರಿಶುದ್ಧ ತತ್ವವನ್ನು ಜ್ಞಾನಸ್ವರೂಪವೆಂದು ತಿಳಿದುಕೊಂಡು, ಸರ್ವದಾ ಅದರನ್ನು ಆಶ್ರಯಿಸಿ, ಆತ್ಮದಲ್ಲಿಯೇ ಯಾವಾಗಲೂ ಇರುವವನಾಗಿ, ಜಗವನ್ನು ಬ್ರಹ್ಮನಲ್ಲಿ ಲೀನವಾಗಿಸು.

ಬುದ್ಧೌ ಗುಹಾಯಾಂ ಸದಸದ್ವಿಲಕ್ಷಣಂ
    ಬ್ರಹ್ಮಾಸ್ತಿ ಸತ್ಯಂ ಪರಮದ್ವಿತೀಯಂ .
ತದಾತ್ಮನಾ ಯೋಽತ್ರ ವಸೇದ್ಗುಹಾಯಾಂ
    ಪುನರ್ನ ತಸ್ಯಾಂಗಗುಹಾಪ್ರವೇಶಃ .. 266..

 ಬುದ್ಧಿಯೆಂಬ ಗುಹೆಯಲ್ಲಿ ಸತ್ ಅಸತ್ ಗಳಿಗಿಂತ ಭಿನ್ನನಾದ, ಸತ್ಯನಾದ, ಅದ್ವಿತೀಯನಾದ ಬ್ರಹ್ಮನಿದ್ದಾನೆ. ಆ ಗುಹೆಯನ್ನು ಯಾರು ಪ್ರವೇಶಿಸುತ್ತಾನೋ ಅವನು ಪುನರ್ಜನ್ಮವಿಲ್ಲ. (ಪುನಃ ಮನುಷ್ಯ ಶರೀರವನ್ನು ಪ್ರವೇಶಿಸುವದಿಲ್ಲ)

ಜ್ಞಾತೇ ವಸ್ತುನ್ಯಪಿ ಬಲವತೀ ವಾಸನಾಽನಾದಿರೇಷಾ
    ಕರ್ತಾ ಭೋಕ್ತಾಪ್ಯಹಮಿತಿ ದೃಢಾ ಯಾಽಸ್ಯ ಸಂಸಾರಹೇತುಃ .
ಪ್ರತ್ಯಗ್ ದೃಷ್ಟ್ಯಾಽಽತ್ಮನಿ ನಿವಸತಾ ಸಾಪನೇಯಾ ಪ್ರಯತ್ನಾ-
   ನ್ಮುಕ್ತಿಂ ಪ್ರಾಹುಸ್ತದಿಹ ಮುನಯೋ ವಾಸನಾತಾನವಂ ಯತ್ .. 267..

 ಆತ್ಮನನ್ನು ತಿಳಿದುಕೊಂಡಾದ ನಂತರವೂ, 'ನಾನು ಕರ್ತೃ, ನಾನು ಭೋಕ್ತೃ' ಎಂಬ ದೃಢವಾದ ಸಂಸ್ಕಾರ ಪ್ರಬಲವಾಗಿರುತ್ತದೆ ಮತ್ತು ಅದೇ ಸಂಸಾರ ಬಂಧನಕ್ಕೆ ಕಾರಣವಾಗುತ್ತದೆ. ಪ್ರತ್ಯಕ್ ಆತ್ಮನೇ ತಾನು ಎಂಬ ಆಂತರಿಕ ದೃಷ್ಟಿಯಿಂದ, ಪ್ರಯತ್ನಪೂರ್ವಕವಾಗಿ, ಈ ಸಂಸ್ಕಾರವನ್ನು ತೊಲಗಿಸಬೇಕು. ಯಾಕೆಂದರೆ ಆಸೆಯ ನಿವಾರಣೆಯೇ ಮುಕ್ತಿಯೆಂದು ಮುನಿಗಳು ಹೇಳುತ್ತಾರೆ.

ಅಹಂ ಮಮೇತಿ ಯೋ ಭಾವೋ ದೇಹಾಕ್ಷಾದಾವನಾತ್ಮನಿ .
ಅಧ್ಯಾಸೋಽಯಂ ನಿರಸ್ತವ್ಯೋ ವಿದುಷಾ ಸ್ವಾತ್ಮನಿಷ್ಠಯಾ .. 268..

ಅನಾತ್ಮವಾದ ದೇಹ, ಇಂದ್ರಿಯ ಮುಂತಾದವುಗಳಲ್ಲಿ ನಾನು, ನನ್ನದು ಎಂಬ ಭಾವನೆಯ ಅಧ್ಯಾಸವನ್ನು (ಮಿಥ್ಯೆ), ಜ್ಞಾನಿಯು ಆತ್ಮನಿಷ್ಠೆಯಿಂದ ತೊಲಗಿಸಬೇಕು. 

ಜ್ಞಾತ್ವಾ ಸ್ವಂ ಪ್ರತ್ಯಗಾತ್ಮಾನಂ ಬುದ್ಧಿತದ್ವೃತ್ತಿಸಾಕ್ಷಿಣಂ .
ಸೋಽಹಮಿತ್ಯೇವ ಸದ್ವೃತ್ತ್ಯಾಽನಾತ್ಮನ್ಯಾತ್ಮಮತಿಂ ಜಹಿ .. 269..

ಬುದ್ಧಿ ಮತ್ತು ಅದರ ವೃತ್ತಿಗಳಿಗೆ ಸಾಕ್ಷಿಯಾದ ಅಂತರಾತ್ಮನನ್ನು 'ಅವನೇ ನಾನು' ಎಂದು ಸದ್ವೃತ್ತಿಯಿಂದ ಅರಿತು ಅನಾತ್ಮನು ತಾನು ಎಂಬ ಬುದ್ಧಿಯನ್ನು ಬಿಡು.


ಲೋಕಾನುವರ್ತನಂ ತ್ಯಕ್ತ್ವಾ ತ್ಯಕ್ತ್ವಾ ದೇಹಾನುವರ್ತನಂ .
ಶಾಸ್ತ್ರಾನುವರ್ತನಂ ತ್ಯಕ್ತ್ವಾ ಸ್ವಾಧ್ಯಾಸಾಪನಯಂ ಕುರು .. 270..


ಲೋಕಾನುಸರಣೆಯನ್ನು ಬಿಟ್ಟು, ದೇಹಾನುಸರಣೆಯನ್ನು ಬಿಟ್ಟು, ಶಾಸ್ತ್ರಾನುಸರಣೆಯನ್ನು ಬಿಟ್ಟು, ನಿನಗೆ ಆಗಿರುವ ಅಧ್ಯಾಸವನ್ನು ತೊಲಗಿಸಿಕೋ.

ಲೋಕವಾಸನಯಾ ಜಂತೋಃ ಶಾಸ್ತ್ರವಾಸನಯಾಪಿ ಚ .
ದೇಹವಾಸನಯಾ ಜ್ಞಾನಂ ಯಥಾವನ್ನೈವ ಜಾಯತೇ .. 271

ಲೋಕವಾಸನಯಿಂದ ಅಥವಾ ಶಾಸ್ತ್ರವಾಸನಯಿಂದ ಅಥವಾ ದೇಹವಾಸನಯಿಂದ ಜೀವನಿಗೆ (ಮನುಷ್ಯನಿಗೆ) ಜ್ಞಾನವೂ ಎಂದೂ ಉಂಟಾಗುವದಿಲ್ಲ. 

ಸಂಸಾರಕಾರಾಗೃಹಮೋಕ್ಷಮಿಚ್ಛೋ-
ರಯೋಮಯಂ ಪಾದನಿಬಂಧಶೃಂಖಲಂ .
ವದಂತಿ ತಜ್ಜ್ಞಾಃ ಪಟು ವಾಸನಾತ್ರಯಂ
ಯೋಽಸ್ಮಾದ್ವಿಮುಕ್ತಃ ಸಮುಪೈತಿ ಮುಕ್ತಿಂ .. 272..

ಸಂಸಾರದ ಕಾರಾಗೃಹದಿಂದ ಬಿಡುಗಡೆ ಇಚ್ಛಿಸುವನಿಗೆ ವಾಸನಾತ್ರಯಗಳು ಕಾಲಿಗೆ ಬಿಗಿದ ಶೃಂಖಲೆಗಳು. ಯಾರು ಈ ವಾಸನಾತ್ರಯದಿಂದ ಬಿಡುಗಡೆಯನ್ನು ಹೊಂದುತ್ತಾನೋ, ಅವನು ಮುಕ್ತಿಯನ್ನು ಪಡೆಯುತ್ತಾನೆ.

ಜಲಾದಿಸಂಸರ್ಗವಶಾತ್ಪ್ರಭೂತ
ದುರ್ಗಂಧಧೂತಾಽಗರುದಿವ್ಯವಾಸನಾ .
ಸಂಘರ್ಷಣೇನೈವ ವಿಭಾತಿ ಸಮ್ಯ-
ಗ್ವಿಧೂಯಮಾನೇ ಸತಿ ಬಾಹ್ಯಗಂಧೇ .. 273..

ನೀರು ಇತ್ಯಾದಿಗಳ ಸಂಪರ್ಕದಿಂದ ದುರ್ವಾಸನೆಯಾಗಿರುವ ಅಗರು (ಚಂದನ)ವಿನ್ನು ಚೆನ್ನಾಗಿ ಉಜ್ಜುವದರಿಂದ ಸುಗಂಧ ಮತ್ತೆ ಹೊರಹೊಮ್ಮುವದು.

ಅಂತಃಶ್ರಿತಾನಂತದುರಂತವಾಸನಾ-
ಧೂಲೀವಿಲಿಪ್ತಾ ಪರಮಾತ್ಮವಾಸನಾ .
ಪ್ರಜ್ಞಾತಿಸಂಘರ್ಷಣತೋ ವಿಶುದ್ಧಾ
ಪ್ರತೀಯತೇ ಚಂದನಗಂಧವತ್ ಸ್ಫುಟಂ .. 274..

ಹೀಗೆಯೇ, ಅಂತಃಕರಣವನ್ನು ಆಶ್ರಯಿಸಿಕೊಂಡಿರುವ ಬಹುವಿಧದ ದುಷ್ಫಲಪ್ರದ ದುರ್ವಾಸನೆಯ ಧೂಳಿನಿಂದ ಮುಚ್ಚಲ್ಪಟ್ಟ ಪರಮಾತ್ಮ ವಾಸನೆಯು ಪ್ರಜ್ಞೆಯನ್ನು ಚೆನ್ನಾಗಿ ತೇಯುವದರಿಂದ ಚಂದನದಂತೆ ಪ್ರಕಾಶಸುತ್ತದೆ. 

ಅನಾತ್ಮವಾಸನಾಜಾಲೈಸ್ತಿರೋಭೂತಾತ್ಮವಾಸನಾ .
ನಿತ್ಯಾತ್ಮನಿಷ್ಠಯಾ ತೇಷಾಂ ನಾಶೇ ಭಾತಿ ಸ್ವಯಂ ಸ್ಫುಟಂ .. 275..

ಅನಾತ್ಮಗಳ ಸಮೂಹದ ಧೂಳಿನಿಂದ ಮುಚ್ಚಿರುವ ಆತ್ಮದ ಪರಿಮಳವು, (ಜ್ಞಾನವನ್ನು) ನಿತ್ಯವೂ ಆತ್ಮನಲ್ಲಿಯೇ ನೆಲಸುವದರಿಂದ ಅವುಗಳು ನಾಶ ಹೊಂದಿ, ಚಂದನದಂತೆ ಸ್ಫುಟವಾಗಿ ತೋರುವದು.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60