ವಿವೇಕ ಚೂಡಾಮಣಿ - 151 - 175

ಪಂಚಾನಾಮಪಿ ಕೋಶಾನಾಮಪವಾದೇ ವಿಭಾತ್ಯಯಂ ಶುಧ್ಧ:
ನಿತ್ಯಾನಂದೈಕರಸ: ಪ್ರತ್ಯಗ್ರೂಪ: ಪರ: ಸ್ವಯಂಜ್ಯೋತಿ: . . ೧೫೧ . . .

ಪಂಚಕೋಶಗಳನ್ನು ತೆಗೆದುಹಾಕಿದಾಗ, ಶುದ್ಧನಾದ, ನಿತ್ಯಾನಂದನಾದ, ಏಕರಸನಾದ, ಸರ್ವಂತರ್ಯಾಮಿಯಾದ, ಪರನಾದ, ಸ್ವಯಂಪ್ರಕಾಶನಾದ ಈ ಆತ್ಮನು ಕಾಣಿಸಿಕೊಳ್ಳುತ್ತಾನೆ.

ಅಪವಾದೇ - ತೆಗೆದಾಗ ಪಂಚಾನಾಮಪಿ ಕೋಶಾನಾಮ್ - ಅನ್ನಮಯ ಇತ್ಯಾದಿ ಪಂಚಕೋಶಗಳು
ವಿಭಾತಿ - ಕಾಣಿಸಿಕೊಳ್ಳುತ್ತಾನೆ     ಪ್ರತ್ಯಕ್+ರೂಪ: = ಪ್ರತ್ಯಗ್ರೂಪ: 

ಆತ್ಮಾನಾತ್ಮ ವಿವೇಕಃ ಕರ್ತವ್ಯೋ ಬಂಧಮುಕ್ತಯೇ ವಿದುಷಾ.
ತೇನೈವಾನಂದೀ ಭವತಿ ಸ್ವಂ ವಿಜ್ಞಾಯ ಸಚ್ಚಿದಾನಂದಂ ..೧೫೨..

ವಿದುಷನು - ಜ್ಞಾನಿಯು ಬಂಧಮುಕ್ತನಾಗಲು ಆತ್ಮ  ಅನಾತ್ಮ ವಿವೇಚನೆಯನ್ನು ಮಾಡತಕ್ಕದ್ದು. ಅದರಿಂದಲೇ ಅವನು ತಾನು ಸತ್ ಚಿತ್ ಆನಂದ ಸ್ವರೂಪನು ಎನ್ನುವ ಸತ್ಯವನ್ನು ಅರಿತು, ಆನಂದ ಹೊಂದುವನು.

ಆತ್ಮಾನಾತ್ಮಾ ವಿವೇಕಂ - ಆತ್ಮ  ಅನಾತ್ಮ ವಿವೇಚನೆಯನ್ನು
ಕರ್ತವ್ಯೊ - ಮಾಡತಕ್ಕದ್ದು ವಿದುಷಾ - ಪಂಡಿತರಿಂದ ಬಂಧಮುಕ್ತಯೇ - ಬಂಧನದಿಂದ ಬಿಡುಗಡೆಯಾಗಿ
ತೇನೈವಾನಂದೀ  - ತೇನ ಏವ ಆನಂದೀ - ಅದರಿಂದಲೇ ಆನಂದ ಹೊಂದಿದವನು
ಸ್ವಂ - ತನ್ನನ್ನು ವಿಜ್ಞಾಯ - ಅರಿತು 

ಮುಂಜಾದಿಷೀಕಾಮಿವ ದ್ರಶ್ಯವರ್ಗಾತ್.
     ಪ್ರತ್ಯಂಚಮಾತ್ಮಾನಾಮಸಂಗಮಕ್ರಿಯಂ.
ವಿವಿಚ್ಯ ತತ್ರ ಪ್ರವಿಲಾಪ್ಯ ಸರ್ವಂ.
     ತದಾತ್ಮನಾ ತಿಷ್ಠತಿ ಯ: ಸ ಮುಕ್ತ: . . ೧೫೩ . . .

ಮುಂಜಾತ್ - ಮುಂಜ ಹುಲ್ಲಿನಿಂದ್  ಇಷಿಕಾಮ್ - ದಂಟನ್ನು ಪ್ರತ್ಯಂಚಂ - ಒಳಗಿನಿಂದ ಅಸಂಗಂ - ಸಂಗರಹಿತನಾದ
ಅಕ್ರಿಯಂ - ನಿಶ್ಕ್ರಿಯನಾದ      ವಿವಿಚ್ಯ - ಬೇರ್ಪಡಿಸಿ        ಪ್ರವಿಲಾಪ್ಯ - ನಾಶ ಮಾಡಿ 
ತಿಷ್ಠತಿ - ಕೂಡ್ರುತ್ತಾನೆ  ಯ: - ಯಾರು    ಸ - ಅವನು 
 
ಮುಂಜ ಹುಲ್ಲಿನಿಂದ ಅದರ ದಂಟನ್ನು ಬೇರ್ಪಡಿಸಿದಂತೆ, ಯಾರು ದೃಶ್ಯಜಗತ್ತಿನಿಂದ, ನಮ್ಮ ಅಂತರಂಗದಲ್ಲಿರುವ ಅಸಂಗನಾದ, ಅಕ್ರಿಯನಾದ ಆತ್ಮನನ್ನು ಬೇರ್ಪಡಿಸಿ, ಎಲ್ಲವನ್ನೂ ಆತ್ಮದಲ್ಲಿ ವಿಲೀನಗೊಳಿಸುತ್ತಾನೋ, ಅವನೇ ಮುಕ್ತನಾಗುತ್ತಾನೆ.

ದೇಹೋಯಮನ್ನಭವನೋನ್ನಮಯಸ್ತು ಕೋಶ
     ಶ್ಚಾನ್ನೇನ ಜೀವತಿ ವಿನಶ್ಯತಿ ತದ್ವಿಹೀನಃ .
ತ್ವಕ್ಚರ್ಮಮಾಂಸರುಧಿರಾಸ್ಥಿಪುರೀಷರಾಶಿ-
     ರ್ನಾಯಂ ಸ್ವಯಂ ಭವಿತುಮರ್ಹತಿ ನಿತ್ಯಶುದ್ಧಃ .. 154..

ದೇಹೋಯಮ್ - ಈ ದೇಹ      ಅನ್ನಭವನ - ಅನ್ನದ ಮನೆ    ಅನ್ನ ಮಯ:‌- ಅನ್ನದಿಂದ ತುಂಬಿದೆ
ತದ್ವಿಹೀನ - ಅದಿಲ್ಲದೆ      ವಿನಶ್ಯತಿ - ನಾಶವಾಗುತ್ತದೆ  
ತ್ವಕ್ಚರ್ಮ - ಚರ್ಮ       ರುಧಿರ - ರಕ್ತ      ಅಸ್ಥಿ - ಎಲುಬು    ಪುರೀಷ - ಮಲ 
ಅಯಂ‌ - ಇದು     ಭವಿತುಂ ಅರ್ಹತಿ - ಆಗಲು ಯೋಗ್ಯವಲ್ಲ 
 
ಈ ದೇಹ ಅನ್ನದ ಮನೆ, ಅನ್ನದಿಂದ ತುಂಬಿದೆ, ಅದರಿಂದ ಆಗಿದೆ. ಅನ್ನವಿಲ್ಲದಿದ್ದರೆ ನಾಶವಾಗುವದು. ಚರ್ಮ, ಅಸ್ತಿ, ಮಾಂಸ, ರಕ್ತ, ಮಲ-ಮೂತ್ರದಿಂದಾದ ಈ ಶರೀರ ನಿತ್ಯಶುದ್ಧವಾದ ಆತ್ಮನಾಗಲು ಯೋಗ್ಯವೇ ಅಲ್ಲ.

ಪೂರ್ವಂ ಜನೇರಧಿಮೃತೇರಪಿ ನಾಯಮಸ್ತಿ  
    ಜಾತಕ್ಷಣಃ ಕ್ಷಣಗುಣೋಽನಿಯತಸ್ವಭಾವಃ .
ನೈಕೋ ಜಡಶ್ಚ ಘಟವತ್ಪರಿದೃಶ್ಯಮಾನಃ
   ಸ್ವಾತ್ಮಾ ಕಥಂ ಭವತಿ ಭಾವವಿಕಾರವೇತ್ತಾ .. 155..

ಅಯಂ - ಇದು    ಪೂರ್ವಂ‌ ಜನೇ: - ಹುಟ್ಟಿನ ಮೊದಲು      ಅಧಿ ಮೃತೇ: - ಸತ್ತಾಗ      ನ ಅಸ್ತಿ - ಇರುವದಿಲ್ಲ 
ಅನಿಯತ ಸ್ವಭಾವ: - ಅನಿಶ್ತಿತ  ಸ್ವಭಾವ   ಜಡ:‌ಘಟವತ್ - ಮಡಿಕೆಯಂತೆ ಜಡವಾದ     
ಸ್ವಾತ್ಮಾ ಕಥಂ ಭವತಿ - ಆತ್ಮ ಹೇಗಾಗುತ್ತದೆ 
 
ಈ ದೇಹವು ನಾವು ಹುಟ್ಟುವ ಮೊದಲು ಇರುವದಿಲ್ಲ, ನಾವು ಸತ್ತ ನಂತರ ಇರುವದಿಲ್ಲ. ಇವೆರಡರ ನಡುವೆ ಕೆಲಕಾಲ ಮಾತ್ರ ಇರುತ್ತದೆ. ಇದರ ಗುಣಗಳು ಅನಿಶ್ಚಿತ ಸ್ವಭಾವದವು (ಚಂಚಲ). ಇದು ಜಡ, ಮಡಿಕೆಯಂತೆ ದೃಶ್ಯ, ಬಹುರೂಪಿ (ಬದಲಾವಣೆ  ಹೊಂದುತ್ತದೆ). ಇದು ಹೇಗೆ ಎಲ್ಲ ವಿಕಾರಗಳ ಸಾಕ್ಷಿಯಾದ ಆತ್ಮವಾದೀತು?
 
ಪಾಣಿಪಾದಾದಿಮಾಂದೇಹೋ ನಾತ್ಮಾ ವ್ಯಂಗೇಽಪಿ ಜೀವನಾತ್ .
ತತ್ತಚ್ಛಕ್ತೇರನಾಶಾಚ್ಚ ನ ನಿಯಮ್ಯೋ ನಿಯಾಮಕಃ .. 156..

ಪಾಣಿ - ಕೈ      ಪಾದಾದಿಮಾನ್ - ಕಾಲು ಇತ್ಯಾದಿ  ಹೊಂದಿದ    ನ ಆತ್ಮಾ - ಆತ್ಮನಲ್ಲ   ವ್ಯಂಗ - ಅಂಗಹೀನ 
ತತ್ ತತ್ ಶಕ್ತೇ - ಆ ಆ ಶಕ್ತಿಗಳು    ಅನಾಶಾತ್ ಚ - ನಾಶವಾಗದೇ ಇರುವದು ಮತ್ತು 
ನ ನಿಯಮ್ಯೊ - ನಿಯಮಕ್ಕೊಳಗಾಗುವನಲ್ಲ      
 
 ಕೈ, ಕಾಲು ಇತ್ಯಾದಿ ಹೊಂದಿದ ದೇಹ ಆತ್ಮನಾಗಲು ಸಾಧ್ಯ ಇಲ್ಲ. ಯಾಕೆಂದರೆ, ಈ ಅಂಗಗಳು ವಿಹೀನವಾದರೂ, ಮನುಷ್ಯ ಬದುಕುತ್ತಾನೆ, ಬೇರೆ ಅಂಗಗಳು ಕೆಲಸ ಮಾಡುತ್ತವೆ. ಬೇರೆಯವರ ನಿಯಮಗಳಿಗೆ ಬಂಧತವಾದ ದೇಹ, ಸರ್ವನಿಯಾಮಕನು ಆತ್ಮನಾಗಲಾರದು.

ದೇಹತದ್ಧರ್ಮತತ್ಕರ್ಮತದವಸ್ಥಾದಿಸಾಕ್ಷಿಣಃ .
ಸತ ಏವ ಸ್ವತಃಸಿದ್ಧಂ ತದ್ವೈಲಕ್ಷಣ್ಯಮಾತ್ಮನಃ .. 157..
 
ದೇಹ, ಅದರ ಧರ್ಮ, ಅದರ ಕರ್ಮ, ಅದರ ಅವಸ್ಥೆಗಳು ಇವೆಲ್ಲಕ್ಕೂ ಸಾಕ್ಷಿಯಾಗಿರುವ ಆತ್ಮನು, ದೇಹಕ್ಕಿಂತ ಭಿನ್ನವೆಂಬುದು ಸ್ವತಃ ಸಿದ್ಧವಾಗಿದೆ.

ಶಲ್ಯರಾಶಿರ್ಮಾಂಸಲಿಪ್ತೋ ಮಲಪೂರ್ಣೋಽತಿಕಶ್ಮಲಃ .
ಕಥಂ ಭವೇದಯಂ ವೇತ್ತಾ ಸ್ವಯಮೇತದ್ವಿಲಕ್ಷಣಃ .. 158..

ಶಲ್ಯ ರಾಶಿ - ಎಲುಬಿನ ರಾಶಿ      ವೇತ್ತಾ  - ತಿಳಿದವನಾದ      ಕಥಂ ಭವೇತ್ - ಹೇಗಾದೀತು      
ಲಿಪ್ತ - ಆವ್ರತವಾದ 

 ಎಲುಬಿನ ರಾಶಿಯಿಂದಾದ, ಮಾಂಸದಿಂದ ಆವ್ರತವಾದ, ಅತಿಕಲ್ಮಶದಿಂದ(ಮಲ-ಮೂತ್ರ ಇತ್ಯಾದಿಗಳಿಂದ) ತುಂಬಿದ ಈ ಶರೀರ ಸರ್ವಜ್ಞಾನಿಯಾದ, ವಿಲಕ್ಷಣವಾದ ಆತ್ಮ ಹೇಗೆ ಆದೀತು?

ತ್ವಙ್ಮಾಂಸಮೇದೋಽಸ್ಥಿಪುರೀಷರಾಶಾ-
    ವಹಮ್ಮತಿಂ ಮೂಢಜನಃ ಕರೋತಿ .
ವಿಲಕ್ಷಣಂ ವೇತ್ತಿ ವಿಚಾರಶೀಲೋ
    ನಿಜಸ್ವರೂಪಂ ಪರಮಾರ್ಥಭೂತಂ .. 159..
 
ಮೂಢನಾದವನು ಚರ್ಮ, ಮಾಂಸ, ಅಸ್ತಿ, ಮಲ-ಮೂತ್ರದಿಂದ ತುಂಬಿದ ಈ ಶರೀರವನ್ನೇ ತಾನು ಎಂದು ತಿಳಿದುಕೊಳ್ಳುತ್ತಾನೆ. ಆದರೆ ವಿಚಾರಶೀಲನು ತಾನು ನಿಜವಾಗಿ ಶರೀರದಿಂದ ಭಿನ್ನವಾದ, ನೈಜಸ್ವರೂಪನಾದ ಪರಮಾತ್ಮ ಎಂದು ಅರಿತಿರುತ್ತಾನೆ.
 
ದೇಹೋಽಹಮಿತ್ಯೇವ ಜಡಸ್ಯ ಬುದ್ಧಿಃ
    ದೇಹೇ ಚ ಜೀವೇ ವಿದುಷಸ್ತ್ವಹಂಧೀಃ .
ವಿವೇಕವಿಜ್ಞಾನವತೋ ಮಹಾತ್ಮನೋ
    ಬ್ರಹ್ಮಾಹಮಿತ್ಯೇವ ಮತಿಃ ಸದಾತ್ಮನಿ .. 160.

ದೇಹ: ಅಹಂ - ದೇಹವೇ ನಾನು    ಜಡಸ್ಯ - ಮೂರ್ಖನ     ಅಹಂಧೀ - ನಾನು ಬುಧ್ಧಿ    
ಬ್ರಹ್ಮಾಹಂ ಇತ್ಯೇವ - ನಾನು ಬ್ರಹ್ಮ ಎಂದು       ಸತ್ ಆತ್ಮನಿ  - ಸತ್ ಆತ್ಮದಲ್ಲಿ    ವಿದುಷ:‌ತು - ವಿದ್ವಾಂಸನಿಗೆ 

ತಾನು ದೇಹ ಎಂದು ಜಡಬುದ್ಧಿಯ ಮನುಜ ತಿಳಿದುಕೊಳ್ಳುತ್ತಾನೆ. ತಾನು ದೇಹ ಮತ್ತು ಜೀವಾತ್ಮ ಎಂದು ವಿದ್ವಾಂಸನು ತಿಳಿಯುತ್ತಾನೆ. ವಿವೇಕವಂತನಾದ ಮಹಾತ್ಮನು ತಾನು ಬ್ರಹ್ಮನೆಂದು ಯೋಚಿಸುತ್ತಾನೆ.

ಅತ್ರಾತ್ಮಬುದ್ಧಿಂ ತ್ಯಜ ಮೂಢಬುದ್ಧೇ
    ತ್ವಙ್ಮಾಂಸಮೇದೋಽಸ್ಥಿಪುರೀಷರಾಶೌ .
ಸರ್ವಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ
    ಕುರುಷ್ವ ಶಾಂತಿಂ ಪರಮಾಂ ಭಜಸ್ವ .. 161..
ಅತ್ರ ಆತ್ಮ ಬುಧ್ದಿಂ - ಇದೇ ನಾನು ಎಂಬ ಬುದ್ದಿಯನ್ನು       ತ್ಯಜ - ತ್ಯಜಿಸು   
ಭಜಸ್ವ - ಭಜಿಸು         ಕುರುಶ್ವ   - ಮಾಡು 
 
ಮೂಢಬುದ್ಧಿಯೇ, ಈ ತ್ವಚೆ, ಮಾಂಸ, ಕೊಬ್ಬು, ಎಲುಬು ಮತ್ತು  ಮಲರಾಶಿಗಳಾದ ಶರೀರದಲ್ಲಿ ನಿನ್ನತನ ಕಾಣಬೇಡ. ಅದರ ಬದಲು ಸರ್ವಾತ್ಮನಾದ ನಿರ್ವಿಕಲ್ಪ ಬ್ರಹ್ಮನಲ್ಲಿ ನಿನ್ನನ್ನು ನೋಡು ಹಾಗೂ ಪರಮ ಶಾಂತಿಯನ್ನು ಪಡೆ. 
 
ದೇಹೇಂದ್ರಿಯಾದಾವಸತಿ ಭ್ರಮೋದಿತಾಂ
    ವಿದ್ವಾನಹಂ ತಾಂ ನ ಜಹಾತಿ ಯಾವತ್ .
ತಾವನ್ನ ತಸ್ಯಾಸ್ತಿ ವಿಮುಕ್ತಿವಾರ್ತಾ-
    ಪ್ಯಸ್ತ್ವೇಷ ವೇದಾಂತನಯಾಂತದರ್ಶೀ .. 162..

  ದೇಹೇಂದ್ರಿಯಾದೌ -  ದೇಹೇಂದ್ರಿಯ ಇತ್ಯಾದಿ   ಅಸತಿ - ಅಸತ್ಯದಲ್ಲಿ      ಭ್ರಮೋದಿತಾಂ - ಭ್ರಮೆಯಿಂದ ಹುಟ್ಟಿದ      ನ ಜಹಾತಿ - ಬಿಡುವದಿಲ್ಲವೋ   ಯಾವತ್ - ಎಲ್ಲಿಯ ತನಕ      ತಾವತ್ - ಅಲಿಯ ತನಕ       ವಿಮುಕ್ತಿವಾರ್ತಾಪಿ  - ಮುಕ್ತಿಯ ಸುದ್ದಿ ಕೂಡ    ವೇದಾಂತನಯಾಂತದರ್ಶಿ - ವೇದಾಂತವನ್ನು ಪೂರ್ತಿ ತಿಳಿದವನಾದರೂ 

ಎಲ್ಲ ವೇದಾಂತ ತಿಳಿದವನಾದರೂ ಮನುಷ್ಯನು ಎಲ್ಲಿಯತನಕ  ಅಸತ್ಯವಾದ ದೇಹೇಂದ್ರಿಯಗಳಲ್ಲಿ ತನ್ನತನ ಬಿಡುವದಿಲ್ಲವೋ, ಅಲ್ಲಿಯ ತನಕ ಮುಕ್ತಿಯ ಸುದ್ದಿ ಕೂಡ ಇರುವದಿಲ್ಲ.

ಛಾಯಾಶರೀರೇ ಪ್ರತಿಬಿಂಬಗಾತ್ರೇ
    ಯತ್ಸ್ವಪ್ನದೇಹೇ ಹೃದಿ ಕಲ್ಪಿತಾಂಗೇ .
ಯಥಾತ್ಮಬುದ್ಧಿಸ್ತವ ನಾಸ್ತಿ ಕಾಚಿ-
    ಜ್ಜೀವಚ್ಛರೀರೇ ಚ ತಥೈವ ಮಾಽಸ್ತು .. 163..
 
ಛಾಯಾಶರೀರೇ - ದೇಹದ ನೆರಳಿನಲ್ಲಿ     ಪ್ರತಿಬಿಂಬಗಾತ್ರೇ - ಪ್ರತಿಬಿಂಬದಲ್ಲಿ ಕಂಡ ದೇಹ    
ಯತ್ ಸ್ವಪ್ನದೇಹೇ - ಹೇಗೆ ಸ್ವಪ್ನದಲ್ಲಿ ಕಂಡ ದೇಹದಲ್ಲಿ        ಹೃದಿ  ಕಲ್ಪಿತಾಂಗೆ - ಕಲ್ಪಿಸಿಕೊಂಡ ದೇಹದಲ್ಲಿ  
ಯಥಾ ಆತ್ಮ ಬುದ್ದಿ: - ಹೇಗೆ ಆತ್ಮ ಬುದ್ದಿಯು   ಕಾಚಿತ್ - ಸ್ವಲ್ಪವೂ ಕೂಡ  ಮಾ ಅಸ್ತು - ಇರುವದು ಬೇಡ
 
ನೀನು ಛಾಯೆಯಲ್ಲಿ ಕಾಣುವ ದೇಹವನ್ನು ನೀನೆಂದು ಭಾವಿಸುವದಿಲ್ಲ, ಪ್ರತಿಬಿಂಬವನ್ನು ನೀನು ಎಂದುಕೊಳ್ಳುವದಿಲ್ಲ, ಸ್ವಪ್ನದಲ್ಲಿ ಕಂಡ ದೇಹವನ್ನು ನೀನು ಎಂದುಕೊಳ್ಳುವದಿಲ್ಲ, ನೀನು ಕಲ್ಪಸುವ ದೇಹವನ್ನು ನೀನು ಎಂದುಕೊಳ್ಳುವದಿಲ್ಲ ಅದೇ ರೀತಿ ಜೀವಿಸುವ ಶರೀರದಲ್ಲೂ ನಿನ್ನನ್ನು ಗುರುತಿಸಿಕೊಳ್ಳಬೇಡ.

ದೇಹಾತ್ಮಧೀರೇವ ನೃಣಾಮಸದ್ಧಿಯಾಂ
    ಜನ್ಮಾದಿದುಃಖಪ್ರಭವಸ್ಯ ಬೀಜಂ .
ಯತಸ್ತತಸ್ತ್ವಂ ಜಹಿ ತಾಂ ಪ್ರಯತ್ನಾತ್
    ತ್ಯಕ್ತೇ ತು ಚಿತ್ತೇ ನ ಪುನರ್ಭವಾಶಾ .. 164..
 
ದೇಹಾತ್ಮ ಧಿ: ಏವ - ದೇಹವೇ ಆತ್ಮ ಬುದ್ದಿ ಎಂಬ      ನೃಣಾಮ್ - ಜನರಿಗೆ    ಅಸತ್ ಧಿಯಾಂ - ಅವಿವೇಕ ಬುದ್ದಿ   
ಪ್ರಭವಸ್ಯ - ಆಗಲು     ತತ:‌ತ್ವಂ  -  ಆ ಕಾರಣಕ್ಕಾಗಿ ನೀನು     ಜಹಿ  -ಬಿಡು     ತಾಂ - ಅವುಗಳನ್ನು 
ತ್ಯಕ್ತೇ - ಬಿಟ್ಟರೆ   ನ ಪುನರ್ಭವಾಶಾ - ಪುನ:ಜನ್ಮದ ಆಸೆಯಿಲ್ಲ
 

ದೇಹವೇ ತಾನು ಎಂಬ ಅವಿವೇಕ ಬುದ್ಧಿಯೇ ಮನುಜರಿಗೆ ಜನ್ಮ-ಮರಣ ಇತ್ಯಾದಿ ದುಃಖಕ್ಕೆ ಮೂಲ ಕಾರಣ. ಹೇಗಾದರೂ ಪ್ರಯತ್ನ ಮಾಡಿ ಅದನ್ನು ನೀನು ಬಿಡು. ಬಿಟ್ಟರೆ ನಿನಗೆ ಪುನಃಜನ್ಮವು ಬಾರದು.

ಕರ್ಮೇಂದ್ರಿಯೈಃ  ಪಂಚಭಿರಂಚಿತೋಽಯಂ
    ಪ್ರಾಣೋ ಭವೇತ್ಪ್ರಾಣಮಯಸ್ತು ಕೋಶಃ ..
ಯೇನಾತ್ಮವಾನನ್ನಮಯೋಽನುಪೂರ್ಣಃ
    ಪ್ರವರ್ತತೇಽಸೌ ಸಕಲಕ್ರಿಯಾಸು .. 165..

ಕರ್ಮೇಂದ್ರಿಯೈ:  ಪಂಚಭಿ: ಅಂಚಿತೋ  - ಐದು ಕರ್ಮೇಂದ್ರಿಯಗಳಿಂದ ಕೂಡಿರುವ   
ಭವೇತ್ ಪ್ರಾಣಮಯಸ್ತು ಕೋಶಃ - ಪ್ರಾಣಮಯ ಕೋಶವಾಗುತ್ತದೆ 
ಯೇನ ಆತ್ಮವಾನ್ - ಯಾವುದು ಆತ್ಮವಾನ್   ಅನುಪೂರ್ಣ  - ತುಂಬಲ್ಪಟ್ಟು 
ಪ್ರವರ್ತತೇ - ಪ್ರವರ್ತಿಸುತ್ತದೆ , ಆರಂಭಿಸುತ್ತದೆ    ಅಸೌ - ಅದು 

ಐದು ಕರ್ಮೇಂದ್ರಿಯಗಳು ಹಾಗೂ ಪ್ರಾಣ ಸೇರಿ ಪ್ರಾಣಮಯಕೋಶವಾಗುತ್ತದೆ.  ಅನ್ನಮಯ ಕೋಶವು ಈ ಪ್ರಾಣಮಯ ಕೋಶವನ್ನು ಒಳಗೊಂಡು,  ಎಲ್ಲ ಕ್ರಿಯೆಗಳನ್ನು ಮಾಡುತ್ತದೆ.


ನೈವಾತ್ಮಾಪಿ ಪ್ರಾಣಮಯೋ ವಾಯುವಿಕಾರೋ  
    ಗಂತಾಽಽಗಂತಾ ವಾಯುವದಂತರ್ಬಹಿರೇಷಃ .
ಯಸ್ಮಾತ್ಕಿಂಚಿತ್ಕ್ವಾಪಿ ನ ವೇತ್ತೀಷ್ಟಮನಿಷ್ಟಂ
    ಸ್ವಂ ವಾನ್ಯಂ ವಾ ಕಿಂಚನ ನಿತ್ಯಂ ಪರತಂತ್ರಃ .. 166..

ಪ್ರಾಣಮಯ ಅಪಿ ಆತ್ಮಾ ನ ಏವ - ಪ್ರಾಣಮಯ ಕೋಶವೂ ಅತ್ಮವಲ್ಲ  
ಗಂತಾ ಆಗಂತಾ - ಬಂದು ಹೋಗಿ       ವಾಯುವತ್ ಅಂತಃ ಬಹಿ: ಏಷ: - ವಾಯುವಿನಂತೆ ಒಳಗೆ ಹೊರಗೆ       ಸ್ವಂ ಯಾ ಅನ್ಯಂ‌- ತನ್ನನ್ನು ಅಥವಾ ಇತರರನ್ನು     ವೇತ್ತಿ - ಅರಿಯುತ್ತದೆ    
ಪರತಂತ್ರ - ಪರಾಧೀನ
 
ಪ್ರಾಣಮಯಕೋಶವೂ ಆತ್ಮವಲ್ಲ. ಯಾಕೆಂದರೆ ಅದು ವಾಯುವಿನ ಇನ್ನೊಂದು ರೂಪವಾಗಿದೆ. ವಾಯುವಿನಂತೆ ಅದು ಶರೀರವನ್ನು ಪ್ರವೇಶಿಸುತ್ತ, ನಿರ್ಗಮಿಸುತ್ತ ಇರುತ್ತದೆ,  ತನ್ನ ಅಥವಾ ಬೇರೆಯವರ ಸುಖ -ದುಃಖಗಳನ್ನು ಎಂದೂ ಅರಿತಿರುವದಿಲ್ಲ ಹಾಗೂ ಯಾವಾಗಲೂ ಪರಾಧೀನವಾಗಿರುತ್ತದೆ (ಆತ್ಮವನ್ನು ಅವಲಂಬಿಸಿರುತ್ತದೆ) 
ಜ್ಞಾನೇಂದ್ರಿಯಾಣಿ ಚ ಮನಶ್ಚ ಮನೋಮಯಃ ಸ್ಯಾತ್
    ಕೋಶೋ ಮಮಾಹಮಿತಿ ವಸ್ತುವಿಕಲ್ಪಹೇತುಃ .
ಸಂಜ್ಞಾದಿಭೇದಕಲನಾಕಲಿತೋ ಬಲೀಯಾಂ-
    ಸ್ತತ್ಪೂರ್ವಕೋಶಮಭಿಪೂರ್ಯ ವಿಜೃಂಭತೇ ಯಃ .. 167..
 
ಮನೋಮಯ - ಮನೋಮಯ ಕೋಶ   ಸ್ಯಾತ್ - ಆಗುತ್ತದೆ   
ಮಮ ಅಹಂ‌ ಇತಿ - ನಾನು ನನ್ನದು ಎಂದು    ವಸ್ತು ವಿಕಲ್ಪ ಹೇತು - ವಸ್ತು ವಿಕಲ್ಪಕ್ಕೆ ಕಾರಣ 
ಕಲನೋ ಕಲೀತ - ಕಲ್ಪನೆಯಿಂದ ಕೂಡಿದ  ಸಂಜ್ಞಾ - ಹೆಸರು     ಬಲೀಯಾಂ - ಬಲವಂತವಾದದ್ದು   ಅಭಿಪೂರ್ಯ - ಆವರಿಸಿ     ವಿಜ್ರಂಭತೇ - ವಿಜ್ರಂಭಿಸುತ್ತದೆ 
 
ಜ್ಞಾನೇಂದ್ರಿಯ ಮತ್ತು ಮನಸ್ಸು ಸೇರಿ ಮನೋಮಯಕೋಶ ಉಂಟಾಗುತ್ತದೆ. ಇದು 'ನಾನು-ನನ್ನದು' ಇತ್ಯಾದಿ ವಿಕಲ್ಪಗಳನ್ನು ರಚಿಸುತ್ತದೆ. ಶಕ್ತಿಯುತವಾದ ಈ ಕೋಶ ನಾಮ ಇತ್ಯಾದಿ ಭೇಧಗಳನ್ನು ರಚಿಸುತ್ತದೆ. ಈ ಮನೋಮಯಕೋಶವು  ಪ್ರಾಣಮಯಕೋಶವನ್ನು ಆವರಿಸಿಕೊಂಡಿದೆ. 

ಪಂಚೇಂದ್ರಿಯೈಃ ಪಂಚಭಿರೇವ ಹೋತೃಭಿಃ
    ಪ್ರಚೀಯಮಾನೋ ವಿಷಯಾಜ್ಯಧಾರಯಾ .
ಜಾಜ್ವಲ್ಯಮಾನೋ ಬಹುವಾಸನೇಂಧನೈಃ
    ಮನೋಮಯಾಗ್ನಿರ್ದಹತಿ ಪ್ರಪಂಚಂ .. 168.. 

ಪಂಚಭಿ: ಏವ - ಐದು     ಹೋತೃಭಿ: - ಅರ್ಚಕರಿಂದ   ಪ್ರಚೀಯಮಾನ - ವರ್ಧಿಸುತ್ತಿರುವ 
ವಿಷಯ ಆಜ್ಯ ಧಾರಯಾ -   ವಿಷಯ ಎಂಬ ತುಪ್ಪದ ಧಾರೆಯಿಂದ    ಬಹು ವಾಸನ ಇಂಧನೈ: - ನಾನಾ ರೀತಿಯ ವಾಸನೆ ಎಂಬ ಇಂಧನದಿಂದ 
ಅಗ್ನಿ: ದಹತಿ ಪ್ರಪಂಚಂ - ಬೆಂಕಿಯು (ಮನೋಮಯ ಕೋಶ ಎಂಬ) ಪ್ರಪಂಚವನ್ನು ಸುಡುತ್ತದೆ. 

 ಪಂಚೇದ್ರಿಯಗಳಿಂದ  ಐದು ಅರ್ಚಕರಿಂದ, ವಿಷಯಗಳೆಂಬ ತುಪ್ಪದ ಧಾರೆಯಿಂದ,  ನಾನಾ ರೀತಿಯ ಆಸೆಗಳೆಂಬ ಕಟ್ಟಿಗೆಗಳಿಂದ ಪ್ರಜ್ವಲಿಸುತ್ತಿರುವ ಮನೋಮಯವೆಂಬ ಅಗ್ನಿಯು ಪ್ರಪಂಚವನ್ನು ದಹಿಸುತ್ತಿದೆ.

ನ ಹ್ಯಸ್ತ್ಯವಿದ್ಯಾ ಮನಸೋಽತಿರಿಕ್ತಾ
    ಮನೋ ಹ್ಯವಿದ್ಯಾ ಭವಬಂಧಹೇತುಃ .
ತಸ್ಮಿನ್ವಿನಷ್ಟೇ ಸಕಲಂ ವಿನಷ್ಟಂ
    ವಿಜೃಂಭಿತೇಽಸ್ಮಿನ್ಸಕಲಂ ವಿಜೃಂಭತೇ .. 169..

ನ ಹಿ ಅಸ್ತಿ ಅವಿದ್ಯಾ - ಅವಿದ್ಯೆ  ಬೇರೆ ಇಲ್ಲ (ಮನಸ್ಸಿಗಿಂತ ಬೇರೆ) 
ಮನೋ ಹಿ ಅವಿದ್ಯಾ ಭವಬಂಧ ಹೇತು - ಭವಬಂಧನಕ್ಕೆ ಕಾರಣವಾಗಿರುವ ಅವಿದ್ಯೆ ಮನಸ್ಸೇ
ತಸ್ಮಿನ್ ವಿನಷ್ಟೇ - ಅದು ನಾಶವಾದರೆ    ಸಕಲಂ ವಿನಷ್ಟ: - ಎಲ್ಲವೂ ನಾಶವಾಗುತ್ತದೆ 
ವಿಜ್ರಂಭತೇ ತಸ್ಮಿನ್ ಸಕಲಂ ವಿಜ್ರಂಭತೇ - ಅದು ವಿಜ್ರಂಭಿಸುತ್ತಿರುವಾಗ ಎಲ್ಲವೂ ವಿಜ್ರಂಭಿಸುತ್ತದೆ

ಮನಸ್ಸಿಗಿಂದ ಮಿಗಿಲಾದ ಅವಿದ್ಯೆ ಇನ್ಯಾವುದೂ ಇಲ್ಲ. ಮನದ ಅವಿದ್ಯೆಯೇ ಭವಬಂಧನಕ್ಕೆ ಕಾರಣ. ಮನಸ್ಸು ವಿನಾಶವಾದರೆ ಎಲ್ಲವೂ ನಾಶವಾಗುತ್ತದೆ. ಅದು (ಸಾಧನೆ, ಶಿಸ್ತಿನಿಂದ ಅದನ್ನು ಶುದ್ಧ ಮಾಡಿದಾಗ) ವಿಜ್ರಂಭಿಸಿದಾಗ ಎಲ್ಲವೂ ವಿಜ್ರಂಭಿಸುತ್ತದೆ.
 
ಸ್ವಪ್ನೇಽರ್ಥಶೂನ್ಯೇ ಸೃಜತಿ ಸ್ವಶಕ್ತ್ಯಾ
    ಭೋಕ್ತ್ರಾದಿವಿಶ್ವಂ ಮನ ಏವ ಸರ್ವಂ .
ತಥೈವ ಜಾಗ್ರತ್ಯಪಿ ನೋ ವಿಶೇಷಃ
    ತತ್ಸರ್ವಮೇತನ್ಮನಸೋ ವಿಜೃಂಭಣಂ .. 170.
 
ಸ್ವಪ್ನೆ ಅರ್ಥಶೂನ್ಯೇ - ಅರ್ಥ ವಿಹೀನ ಸ್ವಪ್ನದಲ್ಲಿ          ಸೃಜತಿ - ರಚಿಸುತ್ತಾನೆ 
ಸ್ವಶಕ್ತ್ಯಾ - ಸ್ವ ಶಕ್ತಿಯಿಂದ          ಭೋಕ್ತೃ - ಭೋಗಿಸುವವನು   
ತಥೈವ - ಹಾಗೆಯೆ  ಜಾಗ್ರತಿ ಅಪಿ - ಜಾಗ್ರತ ಸ್ಥಿತಿಯಲ್ಲು ಸಹ   ತತ್  ಸರ್ವಂ ಏತತ್ ಮನಸೋ ವಿಜೃಂಭಣಃ - ಇದೆಲ್ಲಾ ಮನಸ್ಸಿನಿಂದ ರಚಿಸಲ್ಪಟ್ಟದ್ದು

ಸ್ವಪ್ನದಲ್ಲಿ  ಮನಸ್ಸೇ ವಿಶ್ವವನ್ನು (ನಾನಾ ಸಂಗತಿಗಳನ್ನು) ಸ್ವಯಂ ಸೃಷ್ಟಿಸುತ್ತದೆ. ಜಾಗೃತಾವಾಸ್ಥೆಯಲ್ಲಿ ಕೂಡಾ ಹಾಗೇ. ಹಾಗಾಗಿ ನಾವು ನೋಡುವ ವಿಶ್ವವೆಲ್ಲಾ ಮನಸ್ಸು ರಚಿಸಿದ್ದೇ ಆಗಿದೆ.

ಸುಷುಪ್ತಿಕಾಲೇ ಮನಸಿ ಪ್ರಲೀನೇ
    ನೈವಾಸ್ತಿ ಕಿಂಚಿತ್ಸಕಲಪ್ರಸಿದ್ಧೇಃ .
ಅತೋ ಮನಃಕಲ್ಪಿತ ಏವ ಪುಂಸಃ
    ಸಂಸಾರ ಏತಸ್ಯ ನ ವಸ್ತುತೋಽಸ್ತಿ .. 171..
 
ಸುಷುಪ್ತಿಕಾಲೇ - ಗಾಢನಿದ್ರೆಯಲ್ಲಿ  ಪ್ರಲೀನೇ - ಲಯವಾಗಿರುವಾಗ
ನ ಏವ ಅಸ್ತಿ - ಇರುವದಿಲ್ಲ   ಅತಃ - ಆದ್ದರಿಂದ  ಪುಂಸಃ - ಮನುಷ್ಯನಿಗೆ   ನ ವಸ್ತುತೋ ಅಸ್ತಿ - ಯಥಾರ್ಥವಲ್ಲ

ಕನಸಿಲ್ಲದ ಗಾಢ ನಿದ್ರೆಯಲ್ಲಿ ಮನಸ್ಸು ಲಯವಾಗಿರುತ್ತದೆ ಹಾಗೂ ಏನೇನೂ ಇರುವದಿಲ್ಲ. ಈ ವಿಷಯ ಸರ್ವವಿದಿತ. ಹಾಗೇ ಮನುಷ್ಯನ ಅಸ್ತಿತ್ವವೆಲ್ಲ ಅವನಿಂದ ಕಲ್ಪಿತವಾಗಿದೆಯೇ ವಿನಃ ನೈಜವಾದುದಲ್ಲ.

ವಾಯುನಾಽಽನೀಯತೇ ಮೇಘಃ ಪುನಸ್ತೇನೈವ ನೀಯತೇ .    
ಮನಸಾ ಕಲ್ಪ್ಯತೇ ಬಂಧೋ ಮೋಕ್ಷಸ್ತೇನೈವ ಕಲ್ಪ್ಯತೇ .. 172..
 
ವಾಯುನಾ ಅನೀಯತೆ  - ತರಲ್ಪಡುತ್ತದೆ       ಮೇಘಃ - ಮೋಡ    ಪುನಃ ತೇನ  ಏವ - ಪುನಃ ಅದರಿಂದಲೇ  
ನೀಯತೆ - ಒಯ್ಯಲ್ಪಡುತ್ತದೆ     ಮನಸಾ ಕಲ್ಪ್ಯತೆ ಬಂಧಃ - ಮನಸ್ಸಿನಿಂದ ಭವಬಂಧನ ಕಲ್ಪಿತವಾಗುತ್ತದೆ    
ಮೋಕ್ಷಃ ತೇನ ಏವ ಕಲ್ಪ್ಯತೆ - ಮೋಕ್ಷವು ಅದರಿಂದಲೇ ಕಲ್ಪಿತವಾಗುತ್ತದೆ

ಮೋಡಗಳು ಗಾಳಿಯಿಂದಲೇ ಬರುತ್ತವೆ ಹಾಗೂ ಗಾಳಿಯಿಂದಲೇ ದೂರ ಹೋಗುತ್ತವೆ. ಹಾಗೆಯೇ ಸಂಸಾರ ಬಂಧನವೂ ಮನಸ್ಸಿನಿಂದಲೇ ಕಲ್ಪತವಾಗುತ್ತದೆ, ಮೋಕ್ಷವೂ ಮನಸ್ಸಿನಿಂದಲೇ ಕಲ್ಪಿತವಾಗುತ್ತದೆ.

ದೇಹಾದಿಸರ್ವವಿಷಯೇ ಪರಿಕಲ್ಪ್ಯ ರಾಗಂ
    ಬಧ್ನಾತಿ ತೇನ ಪುರುಷಂ ಪಶುವದ್ಗುಣೇನ .
ವೈರಸ್ಯಮತ್ರ ವಿಷವತ್ ಸುವಿಧಾಯ ಪಶ್ಚಾದ್
    ಏನಂ ವಿಮೋಚಯತಿ ತನ್ಮನ ಏವ ಬಂಧಾತ್ .. 173..
 
ದೇಹಾದಿ - ದೇಹ ಇತ್ಯಾದಿ  ಸರ್ವವಿಷಯೇ - ಎಲ್ಲ ವಿಷಯಗಳಲ್ಲಿ    ರಾಗಂ -ಆಸಕ್ತಿಯನ್ನು  ಪರಿಕಲ್ಪ್ಯ - ಉಂಟುಮಾಡಿ 
 ಬಧ್ನಾತಿ - ಕಟ್ಟಿಹಾಕುತ್ತದೆ     ಪಶುವತ್ - ಪಶುವಿನಂತೆ     ಗುಣೇನ - ಹಗ್ಗದಿಂದ   
ವೈರಸ್ಯಂ ಅತ್ರ - ಅದರಲ್ಲಿ ಅಸಹ್ಯವನ್ನು  ವಿಷವತ್ - ವಿಷದಂತೆ   ಪಶ್ಚಾತ್ - ನಂತರ     ಏನಂ - ಇವನನ್ನು 
ವಿಮೋಚಯತಿ - ಬಿಡಿಸುತ್ತದೆ    ಬಂಧಾತ್ - ಬಂಧನದಿಂದ

ಅದು ಮೊದಲು ದೇಹ ಇತ್ಯಾದಿ ವಿಷಯಗಳಲ್ಲಿ ಅವನನ್ನು ಬಂದಿಸುತ್ತದೆ. ನಂತರ ಹಗ್ಗದಿಂದ ಕಟ್ಟಲ್ಪಟ್ಟ ಪಶುವಿನಂತೆ ಅವನನ್ನು ಕಟ್ಟಿಹಾಕುತ್ತದೆ. ನಂತರ ಅದೇ ಮನಸ್ಸು ಅವನಲ್ಲಿ ವಿಷದಂತೆ ವಿಷಯಗಳಲ್ಲಿ ತೀವ್ರ ಅಸಹ್ಯ ಉಂಟಮಾಡಿ, ಅವನನ್ನು ಬಂಧಮುಕ್ತನನ್ನಾಗಿಸುತ್ತದೆ.

ತಸ್ಮಾನ್ಮನಃ ಕಾರಣಮಸ್ಯ ಜಂತೋಃ
    ಬಂಧಸ್ಯ ಮೋಕ್ಷಸ್ಯ ಚ ವಾ ವಿಧಾನೇ .
ಬಂಧಸ್ಯ ಹೇತುರ್ಮಲಿನಂ ರಜೋಗುಣೈಃ
    ಮೋಕ್ಷಸ್ಯ ಶುದ್ಧಂ ವಿರಜಸ್ತಮಸ್ಕಂ .. 174..
 
ತಸ್ಮಾತ್ ಮನಃ  ಕಾರಣಂ ಅಸ್ಯ ಜಂತೋಃ - ಆದ್ದರಿಂದ ಮನಸ್ಸೆ ಕಾರಣ  ಮನುಷ್ಯನ    
ಬಂಧಸ್ಯ ಮೋಕ್ಷಸ್ಯ ಚ - ಬಂಧನಕ್ಕೆ ಮತ್ತು ಮೋಕ್ಷಕ್ಕೆ   ವಿಧಾನೆ - ಉಂಟುಮಾಡಲು 
ಹೇತು - ಕಾರಣ    ಮಲಿನಂ ರಜೊಗುಣೈಃ - ರಜೋಗುಣದಿಂದ ಹೊಲಸು

 ಆದ್ದರಿಂದ ಮನುಜನ ಬಂಧನಕ್ಕೆ ಹಾಗೂ ಮೋಕ್ಷಕ್ಕೆ ಮನಸೇ ಕಾರಣ.  ಮನವು ರಜೋಗುಣದಿಂದ ಮಲಿನವಾದಾಗ  ಬಂಧನವುಂಟುಮಾಡುತ್ತದೆ. ಹಾಗೂ ಮನಸ್ಸು ರಜೋ-ತಮೋ ಗುಣಗಳಿಂದ ಮುಕ್ತವಾಗಿ ಶುದ್ಧವಾದಾಗ, ಅದೇ ಮೋಕ್ಷವನ್ನು ತರುತ್ತದೆ.

ವಿವೇಕವೈರಾಗ್ಯಗುಣಾತಿರೇಕಾ-
    ಚ್ಛುದ್ಧತ್ವಮಾಸಾದ್ಯ ಮನೋ ವಿಮುಕ್ತ್ಯೈ .
ಭವತ್ಯತೋ ಬುದ್ಧಿಮತೋ ಮುಮುಕ್ಷೋ-
    ಸ್ತಾಭ್ಯಾಂ ದೃಢಾಭ್ಯಾಂ ಭವಿತವ್ಯಮಗ್ರೇ .. 175..
 
ಶುದ್ದತ್ವಂ ಆಸಾದ್ಯ - ಶುದ್ದತ್ವವನ್ನು ಹೊಂದಿ   ವಿಮುಕ್ತೈ ಭವತಿ - ವಿಮುಕ್ತನಾಗುತ್ತದೆ 
ತಾಭ್ಯಾಂ ದೃಡಾಭ್ಯಾಂ - ಅವುಗಳನ್ನು ದೃಡವಾಗಿಸಿ  ಭವಿತವ್ಯಂ - ಆಗಬೇಕು  

 ವಿವೇಕ ಹಾಗೂ ವೈರಾಗ್ಯ ಇವೆರಡರಿಂದ ಮನಸ್ಸು ಶುದ್ಧವಾಗಿ ಅದನ್ನು ಮುಕ್ತಿ ಪಡೆಯಲು ಅರ್ಹರನ್ನಾಗಿ ಮಾಡುತ್ತವೆ. ಹಾಗಾಗಿ ಬುದ್ಧಿವಂತನಾದ ಮುಮುಕ್ಷುವು ವಿವೇಕ ವೈರಾಗ್ಯಗಳನ್ನು ದೃಢಗೊಳಿಸಿಕೊಳ್ಳಬೇಕು.

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60