ವಿವೇಕ ಚೂಡಾಮಣಿ - 101-125
ಅಂಧತ್ವಮಂದತ್ವಪಟುತ್ವಧರ್ಮಾಃ
ಸೌಗುಣ್ಯವೈಗುಣ್ಯವಶಾದ್ಧಿ ಚಕ್ಷುಷಃ .
ಬಾಧಿರ್ಯಮೂಕತ್ವಮುಖಾಸ್ತಥೈವ
ಶ್ರೋತ್ರಾದಿಧರ್ಮಾ ನ ತು ವೇತ್ತುರಾತ್ಮನಃ .. 101..
ಕುರುಡುತನ, ನಿರ್ಬಲತೆ, ತೀಕ್ಷ್ಣ ದೃಷ್ಟಿ ಇವೆಲ್ಲ ಕಣ್ಣೆರಡರ ಶಕ್ತಿ ಅಥವಾ ದುರ್ಬಲತೆಯ ಪರಿಣಾಮಗಳು. ಹಾಗೆಯೇ ಕಿವುಡುತನ, ಮೂಕತನ ಇವೆಲ್ಲ ಕಿವಿಯ ಸಬಲತೆ ಅಥವಾ ದುರ್ಬಲತೆಯ ಪರಿಣಾಮ. ಹೊರತು ಇವೆಲ್ಲ ಆತ್ಮದ ದೋಷಗಳಲ್ಲ.
ಉಚ್ಛ್ವಾಸನಿಃಶ್ವಾಸವಿಜೃಂಭಣಕ್ಷು-
ತ್ಪ್ರಸ್ಯಂದನಾದ್ಯುತ್ಕ್ರಮಣಾದಿಕಾಃ ಕ್ರಿಯಾಃ .
ಪ್ರಾಣಾದಿಕರ್ಮಾಣಿ ವದಂತಿ ತಜ್ಞಾಃ
ಪ್ರಾಣಸ್ಯ ಧರ್ಮಾವಶನಾಪಿಪಾಸೇ .. 102..
ಉಚ್ಛ್ವಾಸ, ನಿಃಶ್ವಾಸ, ಆಕಳಿಕೆ, ಸೀನು, ಸ್ರಾವ, ಶರೀರವನ್ನು ತ್ಯಜಿಸುವದು ಇವೆಲ್ಲ ಪ್ರಾಣದ ಧರ್ಮಗಳೆಂದು ಹೇಳುತ್ತಾರೆ. ಹಸಿವು ಬಾಯಾರಿಕೆಗಳೂ ಪ್ರಾಣದ ಧರ್ಮಗಳು.
ಅಂತಃಕರಣಮೇತೇಷು ಚಕ್ಷುರಾದಿಷು ವರ್ಷ್ಮಣಿ .
ಅಹಮಿತ್ಯಭಿಮಾನೇನ ತಿಷ್ಠತ್ಯಾಭಾಸತೇಜಸಾ .. 103..
ಅಂತಃಕರಣವು ಈ ಕಣ್ಣು, ಶರೀರ ಇತ್ಯಾದಿ ಅಂಗಗಳಲ್ಲಿ ನಾನು ಎಂಬ ಅಭಿಮಾನದಿಂದ ಮತ್ತು ಆತ್ಮದ ಪ್ರತಿಬಂಬವಾಗಿ ಕುಳಿತಿರುತ್ತದೆ.
ಅಹಂಕಾರಃ ಸ ವಿಜ್ಞೇಯಃ ಕರ್ತಾ ಭೋಕ್ತಾಭಿಮಾನ್ಯಯಂ .
ಸತ್ತ್ವಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ .. 104..
ಸತ್ವಾದಿ ಗುಣಗಳ ಕಾರಣದಿಂದ, ಕರ್ತೃ ಮತ್ತು ಭೋಗಿಸುವವನು ಆಗುತ್ತದೆಯೋ, ತ್ರಿವಿಧ ಅವಸ್ಥೆಯನ್ನು ಹೊಂದುತ್ತದೆಯೋ, ಅದೇ ಅಹಂಕಾರ ಎಂದು ತಿಳಿ.
ವಿಷಯಾಣಾಮಾನುಕೂಲ್ಯೇ ಸುಖೀ ದುಃಖೀ ವಿಪರ್ಯಯೇ .
ಸುಖಂ ದುಃಖಂ ಚ ತದ್ಧರ್ಮಃ ಸದಾನಂದಸ್ಯ ನಾತ್ಮನಃ .. 105..
ಅನುಕೂಲ ಪರಿಸ್ಥಿತಿ ಬಂದಾಗ ಸುಖಿ ಆಗುವದು, ಪ್ರತಿಕೂಲ ಪರಿಸ್ಥಿತಿ ಬಂದಾಗ ದುಃಖಿಯೂ ಆಗುವದು ಅಹಂಕಾರವೇ ಹೊರತು, ಸದಾನಂದವಾದ ಆತ್ಮವಲ್ಲ.
ಆತ್ಮಾರ್ಥತ್ವೇನ ಹಿ ಪ್ರೇಯಾನ್ವಿಷಯೋ ನ ಸ್ವತಃ ಪ್ರಿಯಃ .
ಸ್ವತ ಏವ ಹಿ ಸರ್ವೇಷಾಮಾತ್ಮಾ ಪ್ರಿಯತಮೋ ಯತಃ .
ತತ ಆತ್ಮಾ ಸದಾನಂದೋ ನಾಸ್ಯ ದುಃಖಂ ಕದಾಚನ .. 106..
ನಮಗೆ ವಿಷಯ-ವಸ್ತುಗಳು ಪ್ರಿಯವಾಗಲು ಕಾರಣ ಅವುಗಳ ಹಿಂದಿನ ಆತ್ಮ. ಯಾಕೆಂದರೆ ಆತ್ಮ ಎಲ್ಲರಿಗೂ ಪ್ರಿಯ. ಹಾಗಾಗಿಯೇ ಆತ್ಮವು ಸದಾನಂದದಿಂದ ತುಂಬಿದೆ. ಅದಕ್ಕೆ ಎಂದೂ ದುಃಖವಿಲ್ಲ.
ಯತ್ಸುಷುಪ್ತೌ ನಿರ್ವಿಷಯ ಆತ್ಮಾನಂದೋಽನುಭೂಯತೇ .
ಶ್ರುತಿಃ ಪ್ರತ್ಯಕ್ಷಮೈತಿಹ್ಯಮನುಮಾನಂ ಚ ಜಾಗ್ರತಿ .. 107..
ನಾವೂ ಆಳ ನಿದ್ರೆಯಲ್ಲಿ ಯಾವ ರಾಗ-ದ್ವೇಷಗಳ ಕಾಟವಿಲ್ಲದ್ದರಿಂದ, ಆತ್ಮಾನಂದ ಅನುಭೂತಿಯನ್ನು ಹೊಂದುತ್ತೇವೆ - ಇದು ಶಾಸ್ತ್ರಗಳಿಂದ, ಪ್ರತ್ಯಕ್ಷ ಅನುಭವದಿಂದ ಮತ್ತು ತರ್ಕದಿಂದ ಸಾಬೀತಾಗಿದೆ.
ಅವ್ಯಕ್ತನಾಮ್ನೀ ಪರಮೇಶಶಕ್ತಿಃ
ಅನಾದ್ಯವಿದ್ಯಾ ತ್ರಿಗುಣಾತ್ಮಿಕಾ ಪರಾ .
ಕಾರ್ಯಾನುಮೇಯಾ ಸುಧಿಯೈವ ಮಾಯಾ
ಯಯಾ ಜಗತ್ಸರ್ವಮಿದಂ ಪ್ರಸೂಯತೇ .. 108..
ಯಾವ ಮಾಯೆಯಿಂದ ಈ ಜಗವೆಲ್ಲ ಉತ್ಪನ್ನವಾಗಿದೆಯೋ, ಆ ಮಾಯೆಯ ಇನ್ನೊಂದು ಹೆಸರು - ಅವ್ಯಕ್ತ. ಇದಕ್ಕೆ ಆದಿಯಿಲ್ಲ. ಮಾಯೆ ತ್ರಿಗುಣಗಳಾದ ಸತ್-ರಜ-ತಮೋ ಗುಣಗಳಿಂದ ಉತ್ಪನ್ನವಾಗಿದೆ. ಧೀಮಂತನು ಈ ಮಾಯೆಯನ್ನು ಕಾರ್ಯದಿಂದ ಅನುಮಾನಿಸಬೇಕು (ಇದು ಪ್ರತ್ಯಕ್ಷವಾಗಿ ಕಾಣುವದಿಲ್ಲ).
ಸನ್ನಾಪ್ಯಸನ್ನಾಪ್ಯುಭಯಾತ್ಮಿಕಾ ನೋ
ಭಿನ್ನಾಪ್ಯಭಿನ್ನಾಪ್ಯುಭಯಾತ್ಮಿಕಾ ನೋ .
ಸಾಂಗಾಪ್ಯನಂಗಾ ಹ್ಯುಭಯಾತ್ಮಿಕಾ ನೋ
ಮಹಾದ್ಭುತಾಽನಿರ್ವಚನೀಯರೂಪಾ .. 109..
ಈ ಮಾಯೆ ಇರುವದೂ ಅಲ್ಲ, ಇಲ್ಲದಿರುವದೂ ಅಲ್ಲ. ಇದು ಪರಮಾತ್ಮನಿಂದ ಭಿನ್ನವೂ ಅಲ್ಲ, ಅಭಿನ್ನವೂ ಅಲ್ಲ. ಇದು ಭಾಗಗಳಿಂದ ಕೂಡಿಯೂ ಇಲ್ಲ. ಅವಿಭಾಜ್ಯವೂ ಅಲ್ಲ. ಈ ಅದ್ಭುತವಾದ ಮಾಯೆಯನ್ನು ಶಬ್ದಗಳಿಂದ ವರ್ಣಿಸಲು ಅಸಾಧ್ಯ.
ಶುದ್ಧಾದ್ವಯಬ್ರಹ್ಮವಿಬೋಧನಾಶ್ಯಾ
ಸರ್ಪಭ್ರಮೋ ರಜ್ಜುವಿವೇಕತೋ ಯಥಾ .
ರಜಸ್ತಮಃಸತ್ತ್ವಮಿತಿ ಪ್ರಸಿದ್ಧಾ
ಗುಣಾಸ್ತದೀಯಾಃ ಪ್ರಥಿತೈಃ ಸ್ವಕಾರ್ಯೈಃ .. 110..
ತಮ್ಮ ಕಾರ್ಯದಿಂದ ಪ್ರಸಿದ್ಧವಾದ ರಜ-ತಮೋ-ಸತ್ ಗುಣಗಳ ಮಾಯೆ, ಸರ್ಪವೆಂಬ ಭ್ರಮೆ ಹರಿದು ಹಗ್ಗ ಎಂಬ ವಿವೇಕ ತಿಳಿದಂತೆ, ಶುದ್ಧ, ಅದ್ವಯ ಬ್ರಹ್ಮನನ್ನು ಅರಿತಾಗ, ನಾಶವಾಗುತ್ತದೆ.
ವಿಕ್ಷೇಪಶಕ್ತೀ ರಜಸಃ ಕ್ರಿಯಾತ್ಮಿಕಾ
ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ .
ರಾಗಾದಯೋಽಸ್ಯಾಃ ಪ್ರಭವಂತಿ ನಿತ್ಯಂ
ದುಃಖಾದಯೋ ಯೇ ಮನಸೋ ವಿಕಾರಾಃ .. 111..
ರಜಸ್ ಕ್ರಿಯಾತ್ಮಿಕವಾಗಿದೆ ಮತ್ತು ಚಂಚಲವಾಗಿದೆ. ಇದರಿಂದ ಕ್ರಿಯಾತ್ಮಕತೆಯ ಪೃವೃತ್ತಿ ಆರಂಭವಾಗುತ್ತದೆ. ಈ ರಜೋ ಗುಣದಿಂದ ರಾಗ - ಕಾಮ, ಕ್ರೋಧ, ಮದ, ಮತ್ಸರ ಇತ್ಯಾದಿಗಳು, ದುಃಖ ಇತ್ಯಾದಿ ಮನ-ವಿಕಾರಗಳು ನಿರಂತರ ಉಂಟಾಗುತ್ತಲೇ ಇರುತ್ತವೆ.
ಕಾಮಃ ಕ್ರೋಧೋ ಲೋಭದಂಭಾದ್ಯಸೂಯಾ
ಅಹಂಕಾರೇರ್ಷ್ಯಾಮತ್ಸರಾದ್ಯಾಸ್ತು ಘೋರಾಃ .
ಧರ್ಮಾ ಏತೇ ರಾಜಸಾಃ ಪುಂಪ್ರವೃತ್ತಿ-
ರ್ಯಸ್ಮಾದೇಷಾ ತದ್ರಜೋ ಬಂಧಹೇತುಃ .. 112..
ಕಾಮ, ಕ್ರೋಧ, ಲೋಭ, ಮೋಸ, ಅಸೂಯೆ, ಅಹಂಕಾರ, ಈರ್ಷ್ಯೆ, ಮತ್ಸರ ಈ ಎಲ್ಲ ಘೋರ ಗುಣಗಳೆಲ್ಲ ರಜೋ ಗುಣಗಳು. ಈ ರಜೋ ಗುಣಗಳಿಂದ ಮಾನವನ ಮೂಲ ಪ್ರವೃತ್ತಿ ಉಂಟಾಗುತ್ತದೆ. ಹಾಗಾಗಿ ರಜೋ ಗುಣವು ಸಂಸಾರ ಬಂಧನದ ಮೂಲ ಕಾರಣವಾಗಿದೆ.
ಏಷಾಽಽವೃತಿರ್ನಾಮ ತಮೋಗುಣಸ್ಯ
ಶಕ್ತಿರ್ಮಯಾ ವಸ್ತ್ವವಭಾಸತೇಽನ್ಯಥಾ .
ಸೈಷಾ ನಿದಾನಂ ಪುರುಷಸ್ಯ ಸಂಸೃತೇಃ
ವಿಕ್ಷೇಪಶಕ್ತೇಃ ಪ್ರವಣಸ್ಯ ಹೇತುಃ .. 113..
ಆವರಣ ಶಕ್ತಿಯು ತಮೋ ಗುಣದ್ದು. ಇದು ವಸ್ತುಗಳು ಇರುವದಕ್ಕಿಂತ ಬೇರೆ ರೂಪದಲ್ಲಿ ಕಾಣುವಂತೆ ಮಾಡುತ್ತದೆ. ಇದೇ ಮನುಷ್ಯನ ಪುನರ್ಜನ್ಮಗಳ ಚಕ್ರಕ್ಕೆ ಕಾರಣ, ಇದೇ ವಿಕ್ಷೇಪಶಕ್ತಿಯ ಪ್ರಸಾರಕ್ಕೂ ಕಾರಣ.
ಪ್ರಜ್ಞಾವಾನಪಿ ಪಂಡಿತೋಽಪಿ ಚತುರೋಽಪ್ಯತ್ಯಂತಸೂಕ್ಷ್ಮಾತ್ಮದೃಗ್-
ವ್ಯಾಲೀಢಸ್ತಮಸಾ ನ ವೇತ್ತಿ ಬಹುಧಾ ಸಂಬೋಧಿತೋಽಪಿ ಸ್ಫುಟಂ .
ಭ್ರಾಂತ್ಯಾರೋಪಿತಮೇವ ಸಾಧು ಕಲಯತ್ಯಾಲಂಬತೇ ತದ್ಗುಣಾನ್
ಹಂತಾಸೌ ಪ್ರಬಲಾ ದುರಂತತಮಸಃ ಶಕ್ತಿರ್ಮಹತ್ಯಾವೃತಿಃ .. 114..
ಪ್ರಜ್ಞಾವಂತನಾಗಿದ್ದರೂ, ಪಂಡಿತನಾಗಿದ್ದರೂ, ಚತುರನಾಗಿದ್ದರೂ, ಅತ್ಯಂತ ಸೂಕ್ಷ್ಮವಾದ ಶಾಸ್ತ್ರಗಳನ್ನು ತಿಳಿದವನಾದರೂ, ತಾಮಸಿಕ ಬುದ್ಧಿ ಆವರಿಸಿಕೊಂಡಾಗ, ಅವನು ಎಷ್ಟು ತಿಳಿಹೇಳಿದರೂ ಸತ್ಯವನ್ನು ತಿಳಿಯಲಾರನು. ಮಾಯೆಯಿಂದ ಆಚ್ಛಾದಿತವಾದ ಸುಳ್ಳನ್ನೇ ನಿಜವೆಂದು ನಂಬುತ್ತಾನೆ. ಅಯ್ಯೋ, ದುರಂತದ ತಮೋಗುಣದ ಆವರಣ ಶಕ್ತಿ ಎಷ್ಟು ಪ್ರಬಲವಾದದ್ದು!
ಅಭಾವನಾ ವಾ ವಿಪರೀತಭಾವನಾಽ-
ಸಂಭಾವನಾ ವಿಪ್ರತಿಪತ್ತಿರಸ್ಯಾಃ .
ಸಂಸರ್ಗಯುಕ್ತಂ ನ ವಿಮುಂಚತಿ ಧ್ರುವಂ
ವಿಕ್ಷೇಪಶಕ್ತಿಃ ಕ್ಷಪಯತ್ಯಜಸ್ರಂ .. 115..
ವಿವೇಚನೆಯ ಅಭಾವ, ವಿಪರೀತ ಭಾವನೆ(ತಪ್ಪು ನಿರ್ಣಯ), ಅಪನಂಬಿಕೆ, ಸಂದೇಹ ಈ ಗುಣಗಳು ಆವರಣ ಶಕ್ತಿ ತುಂಬಿರುವ ಮನುಷ್ಯನನ್ನು ಎಂದೂ ಬಿಡುವದಿಲ್ಲ. ಈ ವಿಕ್ಷೇಪಶಕ್ತಿಯು ನಿರಂತರ ಅವನನ್ನು ನಾಶಮಾಡುತ್ತಿರುತ್ತದೆ.
ಅಜ್ಞಾನಮಾಲಸ್ಯಜಡತ್ವನಿದ್ರಾ-
ಪ್ರಮಾದಮೂಢತ್ವಮುಖಾಸ್ತಮೋಗುಣಾಃ .
ಏತೈಃ ಪ್ರಯುಕ್ತೋ ನ ಹಿ ವೇತ್ತಿ ಕಿಂಚಿತ್
ನಿದ್ರಾಲುವತ್ಸ್ತಂಭವದೇವ ತಿಷ್ಠತಿ .. 116..
ಅಜ್ಞಾನ, ಆಲಸ್ಯ, ಜಡತ್ವ, ನಿದ್ರೆ, ಪ್ರಮಾದ, ಮೂಢತನ ಇವೆಲ್ಲ ತಮೋಗುಣದ ಲಕ್ಷಣಗಳು. ಈ ಗುಣಗಳು ಕೂಡಿರುವ ಮನುಷ್ಯನು ನಿದ್ರಿಸುತ್ತಿರವವನಂತೆ ಅಥವಾ ಕಂಬದಂತೆ ಏನನ್ನೂ ಅರಿಯುವದೇ ಜಡವಾಗಿ ನಿಂತಿರುತ್ತಾನೆ.
ಸತ್ತ್ವಂ ವಿಶುದ್ಧಂ ಜಲವತ್ತಥಾಪಿ
ತಾಭ್ಯಾಂ ಮಿಲಿತ್ವಾ ಸರಣಾಯ ಕಲ್ಪತೇ .
ಯತ್ರಾತ್ಮಬಿಂಬಃ ಪ್ರತಿಬಿಂಬಿತಃ ಸನ್
ಪ್ರಕಾಶಯತ್ಯರ್ಕ ಇವಾಖಿಲಂ ಜಡಂ .. 117..
ಸತ್ ಗುಣವು ನೀರಿನಂತೆ ಶುದ್ಧ. ಆದರೆ ರಜೋ-ತಮೋ ಗುಣಗಳೊಂದಿಗೆ ಸೇರಿ ಸಂಸಾರವನ್ನು ರಚಿಸುತ್ತದೆ. ಸತ್ ಗುಣದಲ್ಲಿ ಆತ್ಮ ಪ್ರತಿಬಿಂಬಿಸಿ, ಸೂರ್ಯನಂತೆ ಈ ಜಗತ್ತೆಲ್ಲವನ್ನು ಪ್ರಕಾಶಿಸುತ್ತದೆ.
ಮಿಶ್ರಸ್ಯ ಸತ್ತ್ವಸ್ಯ ಭವಂತಿ ಧರ್ಮಾಃ
ತ್ವಮಾನಿತಾದ್ಯಾ ನಿಯಮಾ ಯಮಾದ್ಯಾಃ .
ಶ್ರದ್ಧಾ ಚ ಭಕ್ತಿಶ್ಚ ಮುಮುಕ್ಷುತಾ ಚ
ದೈವೀ ಚ ಸಂಪತ್ತಿರಸನ್ನಿವೃತ್ತಿಃ .. 118..
ಜಂಬವಿರದಿರುವದು, ಯಮ, ನಿಯಮ, ಶ್ರದ್ಧೆ, ಭಕ್ತಿ, ಮೋಕ್ಷದ ತೀವ್ರ ಆಸೆ, ದೈವೀ ಗುಣಗಳು, ಅಸತ್ಯದಿಂದ ದೂರ ಸರಿಯುವದು ಇವೆಲ್ಲ ಮಿಶ್ರ ಸತ್ವದ ಗುಣದ ಧರ್ಮಗಳು.
ವಿಶುದ್ಧಸತ್ತ್ವಸ್ಯ ಗುಣಾಃ ಪ್ರಸಾದಃ
ಸ್ವಾತ್ಮಾನುಭೂತಿಃ ಪರಮಾ ಪ್ರಶಾಂತಿಃ .
ತೃಪ್ತಿಃ ಪ್ರಹರ್ಷಃ ಪರಮಾತ್ಮನಿಷ್ಠಾ
ಯಯಾ ಸದಾನಂದರಸಂ ಸಮೃಚ್ಛತಿ .. 119..
ಪ್ರಸನ್ನತೆ, ಆತ್ಮಾನುಭೂತಿ, ಪರಮ ಶಾಂತಿ, ತೃಪ್ತಿ, ಹರ್ಷ, ಸದಾ ಆನಂದ ರಸವನ್ನು ನೀಡುವ ಪರಮಾತ್ಮನಲ್ಲಿ ನಿಷ್ಠೆ ಇವು ಶುದ್ಧ ಸತ್ವದ ಗುಣಗಳು.
ಅವ್ಯಕ್ತಮೇತತ್ತ್ರಿಗುಣೈರ್ನಿರುಕ್ತಂ
ತತ್ಕಾರಣಂ ನಾಮ ಶರೀರಮಾತ್ಮನಃ .
ಸುಷುಪ್ತಿರೇತಸ್ಯ ವಿಭಕ್ತ್ಯವಸ್ಥಾ
ಪ್ರಲೀನಸರ್ವೇಂದ್ರಿಯಬುದ್ಧಿವೃತ್ತಿಃ .. 120..
ಈ ಅವ್ಯಕ್ತವು ತ್ರಿಗುಣದಿಂದ ಕೂಡಿದೆ ಮತ್ತು ಇದು ಆತ್ಮದ ಕಾರಣ ಶರೀರವಾಗಿದೆ. ಇದರ ವಿಶೇಷ ಅವಸ್ಥೆಯೇ ಸುಷುಪ್ತಿ - ಈ ಅವಸ್ಥೆಯಲ್ಲಿ ಪಂಚೇಂದ್ರಿಯಗಳು, ಬುದ್ಧಿ ಇವುಗಳು ನಿಷ್ಕ್ರಿಯವಾಗಿರುತ್ತವೆ.
ಸರ್ವಪ್ರಕಾರಪ್ರಮಿತಿಪ್ರಶಾಂತಿಃ
ಬೀಜಾತ್ಮನಾವಸ್ಥಿತಿರೇವ ಬುದ್ಧೇಃ .
ಸುಷುಪ್ತಿರೇತಸ್ಯ ಕಿಲ ಪ್ರತೀತಿಃ
ಕಿಂಚಿನ್ನ ವೇದ್ಮೀತಿ ಜಗತ್ಪ್ರಸಿದ್ಧೇಃ .. 121..
ಸುಷುಪ್ತಿಯಲ್ಲಿ ಎಲ್ಲ ಪ್ರಕಾರದ ಜ್ಞಾನೇಂದ್ರಿಯಗಳು ವಿರಾಮದಲ್ಲಿರುತ್ತವೆ. ಬುದ್ಧಿಯು ಬೀಜಾವಸ್ಥೆಯಲ್ಲಿರುತ್ತದೆ. (ಅದಕ್ಕಾಗೇ) ಜನರು (ಸುಷುಪ್ತಿಯಲ್ಲಿದ್ದಾಗ) "ಆಗ ಏನೂ ತಿಳಿಯಲಿಲ್ಲ" ಎನ್ನುತ್ತಾರೆ ಎಂದು ಜಗತ್ಪ್ರಸಿದ್ಧವಾಗಿದೆ.
ದೇಹೇಂದ್ರಿಯಪ್ರಾಣಮನೋಽಹಮಾದಯಃ
ಸರ್ವೇ ವಿಕಾರಾ ವಿಷಯಾಃ ಸುಖಾದಯಃ .
ವ್ಯೋಮಾದಿಭೂತಾನ್ಯಖಿಲಂ ಚ ವಿಶ್ವಂ
ಅವ್ಯಕ್ತಪರ್ಯಂತಮಿದಂ ಹ್ಯನಾತ್ಮಾ .. 122..
ದೇಹ, ಇಂದ್ರಿಯ, ಪ್ರಾಣ, ಮನ, ಅಹಂಕಾರ ಇತ್ಯಾದಿಗಳು, ವಿಕಾರ, ವಿಷಯಗಳು, ಸುಖ, ದುಃಖ ಇತ್ಯಾದಿಗಳು, ಆಕಾಶ ಮೊದಲಾದ ಪಂಚಭೂತಗಳು, ಅವ್ಯಕ್ತವನ್ನೂ ಸೇರಿಸಿ ಈ ವಿಶ್ವವೆಲ್ಲಾ ಅನಾತ್ಮವೇ.
ಮಾಯಾ ಮಾಯಾಕಾರ್ಯಂ ಸರ್ವಂ ಮಹದಾದಿದೇಹಪರ್ಯಂತಂ .
ಅಸದಿದಮನಾತ್ಮತತ್ತ್ವಂ ವಿದ್ಧಿ ತ್ವಂ ಮರುಮರೀಚಿಕಾಕಲ್ಪಂ .. 123..
ಮಾಯೆ, ಮಾಯೆಯ ಕಾರ್ಯಗಳಾದ ಮಹತ್ತಿನಿಂದ ದೇಹದ ತನಕ ಎಲ್ಲವೂ ಮರುಭೂಮಿಯಲ್ಲಿರುವ ಮರೀಚಿಕೆಯಂತೆ ಅಸತ್(ಇಲ್ಲದಿರುವದು, ಅಸತ್ಯ) ಮತ್ತು ಅನಾತ್ಮವೆಂದು ತಿಳಿ.
ಅಥ ತೇ ಸಂಪ್ರವಕ್ಷ್ಯಾಮಿ ಸ್ವರೂಪಂ ಪರಮಾತ್ಮನಃ .
ಯದ್ವಿಜ್ಞಾಯ ನರೋ ಬಂಧಾನ್ಮುಕ್ತಃ ಕೈವಲ್ಯಮಶ್ನುತೇ .. 124..
ಈಗ ನಾನು ನಿನಗೆ ಯಾವದನ್ನು ತಿಳಿದು ನರರು ಬಂಧಮುಕ್ತರಾಗಿ ಕೈವಲ್ಯವನ್ನು ಹೊಂದುತ್ತಾರೋ ಆ ಪರಮಾತ್ಮನ ಸ್ವರೂಪವನ್ನು ಹೇಳುತ್ತೇನೆ.
ಅಸ್ತಿ ಕಶ್ಚಿತ್ಸ್ವಯಂ ನಿತ್ಯಮಹಂಪ್ರತ್ಯಯಲಂಬನಃ .
ಅವಸ್ಥಾತ್ರಯಸಾಕ್ಷೀ ಸನ್ಪಂಚಕೋಶವಿಲಕ್ಷಣಃ .. 125..
ಸ್ವತಃಸಿದ್ಧನೂ, ನಾನು ಎಂಬ ಶಬ್ದಕ್ಕೆ ಆಶ್ರಯನೂ, ತ್ರಿವಿಧ ಅವಸ್ಥೆಗೆ ಸಾಕ್ಷಿಯೂ, ಪಂಚಕೋಶಗಳಿಗಿಂತ ವಿಭಿನ್ನನೂ ಆದ ಆತ್ಮನು ಸದಾ ಇರುತ್ತಾನೆ.
Comments