ವಿವೇಕ ಚೂಡಾಮಣಿ - 81-100



ವಿಷಮವಿಷಯಮಾರ್ಗೈರ್ಗಚ್ಛತೋಽನಚ್ಛಬುದ್ಧೇಃ   
    ಪ್ರತಿಪದಮಭಿಯಾತೋ ಮೃತ್ಯುರಪ್ಯೇಷ ವಿದ್ಧಿ .    
ಹಿತಸುಜನಗುರೂಕ್ತ್ಯಾ ಗಚ್ಛತಃ ಸ್ವಸ್ಯ ಯುಕ್ತ್ಯಾ
    ಪ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿದ್ಧಿ .. 81..
 
ತಪ್ಪು ದಾರಿಯಲ್ಲಿ ಹೋಗುತ್ತಿರುವ ಮಲಿನ ಬುದ್ಧಿಯವನನ್ನು ಮೃತ್ಯುವು ಸದಾ ಹಿಂಬಾಲಿಸುತ್ತಿರುತ್ತದೆ - ಇದನ್ನು ತಿಳಿದುಕೋ. ಒಳ್ಳೇ ಜನರ ಮತ್ತು ಗುರುವಿನ ಹಿತನುಡಿಯಂತೆ ಮತ್ತು ಸ್ವಂತ ಯುಕ್ತಿಯಂತೆ ನಡೆಯುವನಿಗೆ ಫಲ ಪ್ರಾಪ್ತಿಯಾಗುತ್ತದೆ- ಇದನ್ನೂ ತಿಳಿದುಕೋ.
 ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ
    ತ್ಯಜಾತಿದೂರಾದ್ವಿಷಯಾನ್ವಿಷಂ ಯಥಾ .
ಪೀಯೂಷವತ್ತೋಷದಯಾಕ್ಷಮಾರ್ಜವ-
    ಪ್ರಶಾಂತಿದಾಂತೀರ್ಭಜ ನಿತ್ಯಮಾದರಾತ್ .. 82..

ನಿನಗೆ ಮೋಕ್ಷದ ಆಸೆಯಿದ್ದರೆ, ಇಂದ್ರಿಯ ಸುಖವನ್ನು, ವಿಷದಂತೆ ದೂರವಿಡು. ಯಾವಾಗಲೂ ಅಮೃತದಂತಹ- ಸಂತೋಷ, ದಯೆ, ಕ್ಷಮೆ, ಸರಳತೆ, ದಮ, ಶಮ ಈ ಗುಣಗಳನ್ನು ನಿತ್ಯವೂ ಜತನದಿಂದ ಬೆಳೆಸಿಕೋ.

  ಅನುಕ್ಷಣಂ ಯತ್ಪರಿಹೃತ್ಯ ಕೃತ್ಯಂ
    ಅನಾದ್ಯವಿದ್ಯಾಕೃತಬಂಧಮೋಕ್ಷಣಂ .
ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ
    ಯಃ ಸಜ್ಜತೇ ಸ ಸ್ವಮನೇನ ಹಂತಿ .. 83..

ಯಾರು, ಪ್ರತಿ ಕ್ಷಣವೂ ಮಾಡಬೇಕಾದ, ಮೌಢ್ಯದ ಬಂಧನದಿಂದ ವಿಮೋಚನೆ ಪಡೆಯುವ ಪ್ರಯತ್ನವನ್ನು ಮಾಡದೆ, ದೇಹದ (ಸತ್ತ ಮೇಲೆ ನಾಯಿ-ನರಿಗಳಿಗೆ ಆಹಾರವಾಗುವ ದೇಹದ) ಪೋಷಣೆಯಲ್ಲಿ ಆಸಕ್ತನಾಗಿರುತ್ತಾನೋ,  ಅವನು ಸ್ವತ: ತನ್ನನ್ನು ತಾನೇ ಕೊಲ್ಲುತ್ತಾನೆ.

ಶರೀರಪೋಷಣಾರ್ಥೀ ಸನ್ ಯ ಆತ್ಮಾನಂ ದಿದೃಕ್ಷತಿ .
ಗ್ರಾಹಂ ದಾರುಧಿಯಾ ಧೃತ್ವಾ  ನದೀಂ ತರ್ತುಂ ಸ ಗಚ್ಛತಿ .. 84. 

ಯಾರು ಆತ್ಮ ಜ್ಞಾನ ಪಡೆಯಲು ಶರೀರದ ಪೋಷಣೆಯನ್ನು ಮಾಡುತ್ತಾನೊ, ಅವನು ನದಿಯನ್ನು ದಾಟಲು ಮರದ ಕುಂಟೆಯೆಂದು ತಪ್ಪಾಗಿ ತಿಳಿದು ಮೊಸಳೆಯನ್ನು  ಹಿಡಿದುಕೊಂಡವನಂತೆ, ಕಷ್ಟದಲ್ಲಿ ಸಿಲುಕುತ್ತಾನೆ. 

ಮೋಹ ಏವ ಮಹಾಮೃತ್ಯುರ್ಮುಮುಕ್ಷೋರ್ವಪುರಾದಿಷು .
ಮೋಹೋ ವಿನಿರ್ಜಿತೋ ಯೇನ ಸ ಮುಕ್ತಿಪದಮರ್ಹತಿ .. 85..
ಮುಮುಕ್ಷುವಿಗೆ (ಮೋಕ್ಷಾರ್ಥಿಗೆ) ದೇಹ ಇತ್ಯಾದಿಗಳ ಮೋಹವೇ ಮಹಾಮೃತ್ಯು. ಯಾರು ಮೋಹವನ್ನು ಸಂಪೂರ್ಣವಾಗಿ ಗೆದ್ದಿದ್ದಾನೋ, ಅವನು ಮುಕ್ತಿಯನ್ನು ಹೊಂದಲು ಅರ್ಹನು.

ಮೋಹಂ ಜಹಿ ಮಹಾಮೃತ್ಯುಂ ದೇಹದಾರಸುತಾದಿಷು .
ಯಂ ಜಿತ್ವಾ ಮುನಯೋ ಯಾಂತಿ ತದ್ವಿಷ್ಣೋಃ ಪರಮಂ ಪದಂ .. 86.. 

ದೇಹ, ಹೆಂಡತಿ, ಮಕ್ಕಳು ಇವುಗಳ ಮೇಲಿನ ಮೋಹ ಎಂಬ ಮಹಾಮೃತ್ಯುವನ್ನು ಗೆಲ್ಲು. ಈ ಮೋಹವನ್ನು ಗೆದ್ದ ಮುನಿಗಳು ವಿಷ್ಣುವಿನ ಪರಮ ಪದವನ್ನು ಹೊಂದುತ್ತಾರೆ.

 ತ್ವಙ್ಮಾಂಸರುಧಿರಸ್ನಾಯುಮೇದೋಮಜ್ಜಾಸ್ಥಿಸಂಕುಲಂ .
ಪೂರ್ಣಂ ಮೂತ್ರಪುರೀಷಾಭ್ಯಾಂ ಸ್ಥೂಲಂ ನಿಂದ್ಯಮಿದಂ ವಪುಃ .. 87..

ಈ ಶರೀರ ಚರ್ಮ, ಮಾಂಸ, ರಕ್ತ, ಸ್ನಾಯು, ಎಲುಬು, ರಕ್ತನಾಳಗಳಿಂದ ಕೂಡಿದೆ. ಮಲ, ಮೂತ್ರಗಳಿಂದ ತುಂಬಿದ  ಈ ಶರೀರ ನಿಂದನೀಯವಾದದ್ದು. 
ಪಂಚೀಕೃತೇಭ್ಯೋ ಭೂತೇಭ್ಯಃ ಸ್ಥೂಲೇಭ್ಯಃ ಪೂರ್ವಕರ್ಮಣಾ .
     ಸಮುತ್ಪನ್ನಮಿದಂ ಸ್ಥೂಲಂ ಭೋಗಾಯತನಮಾತ್ಮನಃ .
ಅವಸ್ಥಾ ಜಾಗರಸ್ತಸ್ಯ  ಸ್ಥೂಲಾರ್ಥಾನುಭವೋ ಯತಃ .. 88.. 

ಈ ಸ್ಥೂಲ ಶರೀರವು ಪೂರ್ವಜನ್ಮದ ಕರ್ಮದಿಂದ, ಪಂಚ ಭೂತಗಳ ಸಮ್ಮಿಲನದಿಂದ ಉತ್ಪನ್ನವಾಗಿದೆ ಹಾಗೂ ಇದು ಆತ್ಮವು ಅನುಭವಿಸುವ ಮಾಧ್ಯಮವಾಗಿದೆ. ಈ ಶರೀರ ಜಾಗ್ರತಾವಸ್ಥೆಯಲ್ಲಿ  ಸ್ಥೂಲ ವಸ್ತುಗಳನ್ನು ಅನುಭವಿಸುತ್ತದೆ. 

 ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥಸೇವಾಂ
    ಸ್ರಕ್ಚಂದನಸ್ತ್ರ್ಯಾದಿವಿಚಿತ್ರರೂಪಾಂ .
ಕರೋತಿ ಜೀವಃ ಸ್ವಯಮೇತದಾತ್ಮನಾ
    ತಸ್ಮಾತ್ಪ್ರಶಸ್ತಿರ್ವಪುಷೋಽಸ್ಯ ಜಾಗರೇ .. 89..

ತನ್ನನ್ನು ಈ ರೂಪದಲ್ಲಿ ಗುರುತಿಸಿಕೊಂಡ ಆತ್ಮವು, ಮಾಲೆ, ಚಂದನ ಇತ್ಯಾದಿ ಅನೇಕ ವಸ್ತುಗಳಿಂದ ತನ್ನ ಬಾಹ್ಯ ಇಂದ್ರಿಯಗಳನ್ನು ಅಲಂಕರಿಸಿಕೊಳ್ಳುತ್ತದೆ. ಅದಕ್ಕಾಗಿ ಬಾಹ್ಯ , ಸ್ಥೂಲ ಶರೀರಕ್ಕೆ ಜಾಗ್ರತಾವಸ್ಥೆಯಲ್ಲಿ ಪೂರ್ಣ ಪ್ರಾಧಾನ್ಯವಿದೆ. 

ಸರ್ವೋಽಪಿ ಬಾಹ್ಯಸಂಸಾರಃ ಪುರುಷಸ್ಯ ಯದಾಶ್ರಯಃ .
ವಿದ್ಧಿ ದೇಹಮಿದಂ ಸ್ಥೂಲಂ ಗೃಹವದ್ಗೃಹಮೇಧಿನಃ .. 90..

ಮನೆಯೊಡಯನಿಗೆ ಮನೆಯಂತೆ, ಬಾಹ್ಯ ಸಂಸಾರದ ಎಲ್ಲ ಕ್ರಿಯೆಗಳಿಗೂ ಸ್ಥೂಲ ಶರೀರವು ಆಶ್ರಯವಾಗಿದೆ - ಎನ್ನುವದನ್ನು ತಿಳಿ.

 ಸ್ಥೂಲಸ್ಯ ಸಂಭವಜರಾಮರಣಾನಿ ಧರ್ಮಾಃ
    ಸ್ಥೌಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ .
ವರ್ಣಾಶ್ರಮಾದಿನಿಯಮಾ ಬಹುಧಾಽಽಮಯಾಃ ಸ್ಯುಃ
    ಪೂಜಾವಮಾನಬಹುಮಾನಮುಖಾ ವಿಶೇಷಾಃ .. 91..

ಸ್ಥೂಲ ಶರೀರಕ್ಕೆ ಮುಪ್ಪು, ಸಾವು ಮುಂತಾದವುಗಳು ಬರುತ್ತವೆ. ಸ್ಥೂಲತನ, ಬಾಲ್ಯ ಇತ್ಯಾದಿ ಅವಸ್ಥೆಗಳಿವೆ. ವರ್ಣಾಶ್ರಮಗಳಿವೆ. ಆ ಶರೀರಕ್ಕೆ ರೋಗ ರುಜಿನಗಳು, ಮಾನ-ಅವಮಾನ, ಸಮ್ಮಾನಗಳು ಉಂಟಾಗುತ್ತವೆ.

 ಬುದ್ಧೀಂದ್ರಿಯಾಣಿ ಶ್ರವಣಂ ತ್ವಗಕ್ಷಿ
    ಘ್ರಾಣಂ ಚ ಜಿಹ್ವಾ ವಿಷಯಾವಬೋಧನಾತ್ .
ವಾಕ್ಪಾಣಿಪಾದಾ ಗುದಮಪ್ಯುಪಸ್ಥಃ   
    ಕರ್ಮೇಂದ್ರಿಯಾಣಿ ಪ್ರವಣೇನ ಕರ್ಮಸು .. 92..

ಕಿವಿ,ಚರ್ಮ, ಕಣ್ಣು, ಮೂಗು ಇವುಗಳು ಜ್ಞಾನೇಂದ್ರಿಯಗಳು, ಯಾಕೆಂದರೆ ಇವು ವಿಷಯಗಳನ್ನು ಅರಿಯಲು ಸಹಾಯ ಮಾಡುತ್ತವೆ. ಬಾಯಿ, ಕೈ, ಕಾಲು, ಗುದ  ಇತ್ಯಾದಿಗಳು ಕೆಲಸ ಮಾಡುವ ಕರ್ಮೇಂದ್ರಿಯಗಳು. 

  ನಿಗದ್ಯತೇಽನ್ತಃಕರಣಂ ಮನೋಧೀಃ
    ಅಹಂಕೃತಿಶ್ಚಿತ್ತಮಿತಿ ಸ್ವವೃತ್ತಿಭಿಃ .
ಮನಸ್ತು ಸಂಕಲ್ಪವಿಕಲ್ಪನಾದಿಭಿಃ
    ಬುದ್ಧಿಃ ಪದಾರ್ಥಾಧ್ಯವಸಾಯಧರ್ಮತಃ .. 93..
ಅತ್ರಾಭಿಮಾನಾದಹಮಿತ್ಯಹಂಕೃತಿಃ .
    ಸ್ವಾರ್ಥಾನುಸಂಧಾನಗುಣೇನ ಚಿತ್ತಂ .. 94..
 

ಅಂತಃಕರಣವು ತನ್ನ ವೃತ್ತಿಗನುಗುಣವಾಗಿ ಮನಸ್ಸು, ಬುದ್ದಿ, ಅಹಂಕಾರ ಅಥವಾ ಚಿತ್ತ ಎಂದು ಕರೆಯಿಸಿಕೊಳ್ಳುತ್ತದೆ. -ಸಂಕಲ್ಪ - ವಿಕಲ್ಪಗಳನ್ನು ಗುರುತಿಸುವದರಿಂದ ಮನಸ್ಸು, ವಸ್ತುಗಳ ಸತ್ಯವನ್ನು ನಿರ್ಧರಿಸುವದರಿಂದ ಬುದ್ದಿ, ಶರೀರವನ್ನು ತಾನು ಎಂದು ನಂಬುವದರಿಂದ ಅಹಂಕಾರ, ಸ್ವ-ಸುಖ ಸಾಧನಗಳನ್ನು ಕುರಿತು ಚಿಂತಿಸುವದರಿಂದ ಚಿತ್ತ. 

ಪ್ರಾಣಾಪಾನವ್ಯಾನೋದಾನಸಮಾನಾ ಭವತ್ಯಸೌ ಪ್ರಾಣಃ .
ಸ್ವಯಮೇವ ವೃತ್ತಿಭೇದಾದ್ವಿಕೃತಿಭೇದಾತ್ಸುವರ್ಣಸಲಿಲಾದಿವತ್ .. 95..

ಸುವರ್ಣ ಮತ್ತು ನೀರು ಇತ್ಯಾದಿಗಳು ಬೇರೆ ಬೇರೆ ರೂಪ ಧರಿಸುವಂತೆ, ಒಂದೇ ಪ್ರಾಣ ಕೂಡ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಈ ರೂಪಗಳನ್ನು ಧರಿಸುತ್ತದೆ.

( ಇವು ಐದೂ ಶರೀರದ ಒಂದೊಂದು ಭಾಗದಲ್ಲಿ ಸಂಚರಿಸುವ ವಾಯು  ಪ್ರಾಣವಾಯುವಿನ ಐದು ರೂಪಗಳು)

 ವಾಗಾದಿ ಪಂಚ ಶ್ರವಣಾದಿ ಪಂಚ
    ಪ್ರಾಣಾದಿ ಪಂಚಾಭ್ರಮುಖಾನಿ ಪಂಚ .
ಬುದ್ಧ್ಯಾದ್ಯವಿದ್ಯಾಪಿ ಚ ಕಾಮಕರ್ಮಣೀ
    ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ .. 96.. 

ವಾಕ್ ಇತ್ಯಾದಿ ಕರ್ಮೇಂದ್ರಿಯಗಳು, ಕಿವಿ ಇತ್ಯಾದಿ ಜ್ಞಾನೇಂದ್ರಿಯಗಳು, ಪಂಚಪ್ರಾಣಗಳು, ಆಕಾಶ ಇತ್ಯಾದಿ ಪಂಚಭೂತಗಳು, ಬುದ್ದಿ ಇತ್ಯಾದಿ, ಅವಿದ್ಯಾ ಇತ್ಯಾದಿ, ಕಾಮ ಮತ್ತು ಕರ್ಮ ಈ ಎಂಟು "ಪುರ"ಗಳನ್ನು ಸೇರಿಸಿ ಸೂಕ್ಷ್ಮ ಶರೀರ ಎನ್ನುತ್ತಾರೆ. 

ಇದಂ ಶರೀರಂ ಶೃಣು ಸೂಕ್ಷ್ಮಸಂಜ್ಞಿತಂ
    ಲಿಂಗಂ ತ್ವಪಂಚೀಕೃತಭೂತಸಂಭವಂ .
ಸವಾಸನಂ ಕರ್ಮಫಲಾನುಭಾವಕಂ
    ಸ್ವಾಜ್ಞಾನತೋಽನಾದಿರುಪಾಧಿರಾತ್ಮನಃ .. 97..

ಕೇಳು, ಲಿಂಗ ಶರೀರ ಅಥವಾ ಸೂಕ್ಷ್ಮ ಶರೀರವು  ವಿಭಜಿಸಿ-ಸಂಯೋಜಿಸುವ ಮೊದಲಿನ ಪಂಚಭೂತಗಳಿಂದ ನಿರ್ಮಾಣವಾಗಿದೆ, ರಾಗ-ವಾಸನೆಗಳಿಂದ ಕೂಡಿದೆ ಮತ್ತು ಕರ್ಮಫಲವನ್ನು ಅನುಭವಿಸುತ್ತಿರುವದಾಗಿದೆ. ತನ್ನ ಅಜ್ಞಾನದಿಂದ ನಿರಂತರವಾಗಿ ಆತ್ಮದ ಮೇಲೆ ಅಧ್ಯಾರೋಪಿಸಲ್ಪಟ್ಟಿದೆ.

 ಸ್ವಪ್ನೋ ಭವತ್ಯಸ್ಯ ವಿಭಕ್ತ್ಯವಸ್ಥಾ
    ಸ್ವಮಾತ್ರಶೇಷೇಣ ವಿಭಾತಿ ಯತ್ರ .
ಸ್ವಪ್ನೇ ತು ಬುದ್ಧಿಃ ಸ್ವಯಮೇವ ಜಾಗ್ರತ್
    ಕಾಲೀನನಾನಾವಿಧವಾಸನಾಭಿಃ .. 98..
ಕರ್ತ್ರಾದಿಭಾವಂ ಪ್ರತಿಪದ್ಯ ರಾಜತೇ
    ಯತ್ರ ಸ್ವಯಂ ಭಾತಿ ಹ್ಯಯಂ ಪರಾತ್ಮಾ .
ಧೀಮಾತ್ರಕೋಪಾಧಿರಶೇಷಸಾಕ್ಷೀ
    ನ ಲಿಪ್ಯತೇ ತತ್ಕೃತಕರ್ಮಲೇಶೈಃ . 
ಯಸ್ಮಾದಸಂಗಸ್ತತ ಏವ ಕರ್ಮಭಿಃ
    ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ .. 99..  

ಸ್ವಪ್ನಾವಸ್ಥೆಯು ಜಾಗೃತ ಅವಸ್ಥೆಗಿಂದ ಭಿನ್ನವಾದ ಆತ್ಮದ ವಿಶೇಷ ಅವಸ್ಥೆಯಾಗಿದೆ - ಇದರಲ್ಲಿ ಆತ್ಮವು ಸ್ವಯಂ ಪ್ರಕಾಶಿಸುತ್ತದೆ. ಸ್ವಪ್ನಾವಸ್ಥೆಯಲ್ಲಿ ಬುದ್ಧಿಯು ಜಾಗೃತವಾಗಿರುತ್ತದೆ ಹಾಗೂ ಜಾಗ್ರತವಾಗಿದ್ದಾಗ ಅನುಭವಿಸಿದ ನಾನಾ ಆಸೆಗಳಿಂದ ಅದು ಕರ್ತೃಭಾವದಲ್ಲಿರುತ್ತದೆ. ಈ ಅವಸ್ಥೆಯಲ್ಲಿ ಆತ್ಮವು ಸ್ವಯಂ ಪ್ರಕಾಶಿಸುತ್ತದೆ ಯಾಕೆಂದರೆ ಅದಕ್ಕೆ ಬುದ್ಧಿಯ ಹೊರತು ಬೇರೆ ಉಪಾಧಿಗಳು ಇರುವದಿಲ್ಲ ಹಾಗೂ ಉಪಾಧಿಗಳ ಕೃತ್ಯದಿಂದ ಆತ್ಮ  ಕಲುಷಿತವಾಗಿರುವದಿಲ್ಲ.

ಸರ್ವವ್ಯಾಪೃತಿಕರಣಂ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ .
ವಾಸ್ಯಾದಿಕಮಿವ ತಕ್ಷ್ಣಸ್ತೇನೈವಾತ್ಮಾ ಭವತ್ಯಸಂಗೋಽಯಂ .. 100..

ಬಡಗಿಗೆ ಅವನ ಉಪಕರಣಗಳು ಹೇಗೋ ಹಾಗೇ ಈ ಸೂಕ್ಷ್ಮ ಶರೀರವು ಆತ್ಮನ ಉಪಕರಣವಾಗಿದೆ. ಈ ಆತ್ಮ ಸಂಪೂರ್ಣವಾಗಿ ಅಸಂಗಿಯಾಗಿದೆ.

 

Comments

Popular posts from this blog

ವಿವೇಕ ಚೂಡಾಮಣಿ - 21 - 40

ವಿವೇಕ ಚೂಡಾಮಣಿ 1-20

ವಿವೇಕ ಚೂಡಾಮಣಿ - 41-60